ಬೆಂಗಳೂರು [ಜು.08] : ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ನಡೆಯುತ್ತಿದೆ. 13 ಶಾಸಕರ ರಾಜೀನಾಮೆ ಬೆನ್ನಲ್ಲೇ  ಹಲವರು ಸಚಿವರೂ ರಾಜೀನಾಮೆ ನೀಡಿದ್ದಾರೆ. ಇತ್ತ ಜೆಡಿಎಸ್ ತನ್ನ ಉಳಿದ ಶಾಸಕರನ್ನು ಮಡಿಕೇರಿ ರೆಸಾರ್ಟ್ ಗೆ ಶಿಫ್ಟ್ ಮಾಡಲು ಸಜ್ಜಾಗಿದೆ. 

ಇಂದು ಸಂಜೆ ವೇಳೆಗೆ ಜೆಡಿಎಸ್ ಶಾಸಕರು ಮಡಿಕೇರಿ ರೆಸಾರ್ಟ್ ಗೆ ಶಿಫ್ಟ್ ಆಗಲಿದ್ದಾರೆ. ಮಧ್ಯಾಹ್ನದ 2 ಗಂಟೆಗೆ ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದು, ಸಭೆ ಬಳಿಕ ಮಡಿಕೇರಿಯತ್ತ ಪ್ರಯಾಣ ಬೆಳೆಸಲಿದ್ದಾರೆ. 

ತಾಜ್ ವೆಸ್ಟೆಂಡ್ ನಲ್ಲಿ ಸಿಎಂ ಸಭೆ ನಡೆಸಲಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಶಾಸಕರಿಗೂ ತಾಜ್ ವೆಸ್ಟೆಂಡ್ ಗೆ ಬರುವಂತೆ ಬುಲಾವ್ ನೀಡಿದ್ದಾರೆ. ಬಳಿಕ ವಿಶೇಷ ಬಸ್ ಮೂಲಕ ಉಳಿದ ಶಾಸಕರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತದೆ.

ಶಾಸಕರನ್ನು ಶಿಫ್ಟ್ ಮಾಡಲು ಮಡಿಕೇರಿಯಲ್ಲಿ ಮೂರು ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದೆ. ಖಾಸಗಿತನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕೆಲವು ರೆಸಾರ್ಟ್ ಗಳಲ್ಲಿ ಈಗಾಗಲೇ ಕೊಠಡಿಗಳನ್ನು ಬುಕ್ ಮಾಡಲಾಗಿದೆ.