ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಜೆಡಿಎಸ್ ನಾಯಕರು

JDS MLAs Disappointed Over Leader Decision
Highlights

ಕೇವಲ ವಿಧಾನಸಭಾ ಸದಸ್ಯರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂಬ ಪಕ್ಷದ ವರಿಷ್ಠರ ನಿಲುವಿಗೆ ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು :  ಕೇವಲ ವಿಧಾನಸಭಾ ಸದಸ್ಯರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂಬ ಪಕ್ಷದ ವರಿಷ್ಠರ ನಿಲುವಿಗೆ ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಿಂದಲೂ ಪರಿಷತ್‌ ಸದಸ್ಯರನ್ನು ಹೊರಗಿಡಲಾಗಿತ್ತು. ಕೇವಲ ವಿಧಾನಸಭಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಪಕ್ಷದ ವರಿಷ್ಠ ನಾಯಕರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಪರಿಷತ್‌ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬುದರ ಸುಳಿವು ನೀಡಿದ್ದರು. ಇದರಿಂದ ಪರಿಷತ್ತಿನ ಸದಸ್ಯರು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪರಿಷತ್‌ ಸದಸ್ಯರು ಪ್ರತ್ಯೇಕ ಸಭೆ ನಡೆಸದಿದ್ದರೂ ತಮ್ಮ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಾವು ಸಕ್ರಿಯ ಪಾತ್ರ ನಿರ್ವಹಿಸಿದರೂ ಅಧಿಕಾರ ಹಂಚಿಕೆಯಲ್ಲಿ ಮಾತ್ರ ನಮ್ಮನ್ನು ಹೊರಗಿಡಬೇಕು ಎಂಬ ನಿಲುವು ಸರಿಯಲ್ಲ. ಹೀಗಾದರೆ ಮುಂದಿನ ದಿನಗಳಲ್ಲಿ ನಾವು ಪಕ್ಷ ಸಂಘಟನೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು? ಪರಿಷತ್‌ ಸದಸ್ಯರೂ ಸಂಪುಟದ ಅವಿಭಾಜ್ಯ ಅಂಗವಾಗಬೇಕು ಎಂಬ ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆಯಲ್ಲಿ ಪರಿಷತ್‌ ಸದಸ್ಯರಿಗೆ ಪ್ರಾತಿನಿಧ್ಯ ನೀಡುತ್ತಾರೆಯೋ ಎಂಬುದನ್ನು ಕಾದು ನೋಡಬೇಕು.

loader