ಬೆಂಗಳೂರು[ಜು.15]: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸದ್ಯ ದೇಶದಾದ್ಯಂತ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿದ್ದ ರಾಜಕಾರಣ ಸುಪ್ರೀಂ ಬಾಗಿಲು ತಟ್ಟಿತ್ತು. ಇಷ್ಟಾದರೂ ದೋಸ್ತಿ ನಾಯಕರು ಮಾತ್ರ ಅತೃಪ್ತ ನಾಯಕರ ಮನವೊಲಿಸಿ ಮರಳಿ ಕರೆತರಲು ವಿಫಲಗೊಂಡಿದ್ದರು. ಸಿಎಂ ಕುಮಾರಸ್ವಾಮಿ ವಿಶ್ವಾಸ ಮಂಡನೆಯ ದಾಳವೆಸೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಈ ಎಲ್ಲಾ ಹೈಡ್ರಾಮಾದಿಂದ ಬೇಸತ್ತ ಜೆಡಿಎಸ್ ಸಿದ್ದರಾಮಯ್ಯ ಎದುರು ಮಂಡಿಯೂರಿದೆ.

ಎರಡು ವಾರದ ಹಿಂದೆ ತೃಪ್ತರ ರಾಜೀನಾಮೆಯಿಂದ ಆರಂಭವಾದ ರಾಜಕೀಯ ಪ್ರಹಸನ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಎಲ್ಲಾ ಪ್ರಯತ್ನವನ್ನು ಮಾಡಿ ಸೋತ ಜೆಡಿಎಸ್ 'ಅಣ್ಣಾ.. ಸರ್ಕಾರ ಉಳಿಸಿಕೊಡಿ' ಎನ್ನುವ ಮೂಲಕ ಅತೃಪ್ತರ ಮನವೊಲಿಸುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದೆ. 

ವಿಶ್ವಾಸಮತ ಯಾಚನೆಗೆ ಮುಹೂರ್ತ ಫಿಕ್ಸ್!: ಮೈತ್ರಿ ಸರ್ಕಾರಕ್ಕೆ 3 ದಿನ ರಿಲೀಫ್!

ಸಿದ್ದರಾಮಯ್ಯ ಮಾತನಾಡಿದರೆ ಅತೃಪ್ತರು ಸಮಾಧಾನಗೊಳ್ಳಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಜೆಡಿಎಸ್ ನಾಯಕರು, ಸಂಜೆಯೊಳಗೆ ಪ್ರತಿಯೊಬ್ಬ ಅತೃಪ್ತರ ಜತೆ ಫೋನ್ ನಲ್ಲಿ ಮಾತನಾಡಿ ಮನವೊಲಿಸುವಂತೆ ಕೇಳಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಉಳಿದ್ರೆ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದಿರುವ ನಾಯಕರು, ಈಗ ಸರ್ಕಾರ ಉಳಿದರೆ ಡಿಸೆಂಬರ್ ನಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.

ದೋಸ್ತಿ ಮುಂದುವರೆಸುವುದು ಬೇಡ

ಇನ್ನು ಇಂದು ಸೋಮವಾರ ಬೆಳಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಸುವುದು ಬೇಡ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಂದುವರೆಸಿದರೂ ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಖಚಿತ. ಹೀಗಾಗಿ ಬೆಂಬಲ ಹಿಂಪಡೆದು ವಿಪಕ್ಷದಲ್ಲಿ ಕುಳಿತುಕೊಂಡು ಕಾರ್ಯ ನಿರ್ವಹಿಸೋಣ ಎಂದು ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕೂಡಾ ಈ ಮನವಿಗೆ ಸೈ ಎಂದು ಈ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ವಿಶ್ವಾಸಮತ ಯಾಚನೆ: ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಶಾಸಕರು!

ಒಟ್ಟಾರೆಯಾಗಿ ದೋಸ್ತಿ ಸರ್ಕಾರ ಪತನಗೊಳ್ಳುವ ಅಂಚಿನಲ್ಲಿದೆ. ಈ ನಡುವೆ ಎಚ್. ಡಿ ಕುಮಾರಸ್ವಾಮಿ ಸ್ಫೀಕರ್ ನಿಗದಿಪಡಿಸಿದಂತೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚಿಸಲಿದ್ದಾರೆ. ಹೀಗಿದ್ದರೂ ಬಿಜೆಪಿ ಮಾತ್ರ ದೋಸ್ತಿ ಸರ್ಕಾರ ಪತನಗೊಳ್ಳುತ್ತೆ ಎಂಬ ವಿಶ್ವಾಸದಲ್ಲಿದೆ. ಇಂತಹ ಚದುರಂಗದಾಟದಲ್ಲಿ ಕಾಂಗ್ರೆಸ್ ಮುಂದಿನ ನಡೆ ಏನಾಗುತ್ತೆ? ಸಿದ್ದರಾಮಯ್ಯ ಅತೃಪ್ತ ಶಾಸಕರನ್ನು ಓಲೈಸಲು ಒಪ್ಪಿಕೊಳ್ಳುತ್ತಾರಾ? ಅಥವಾ ದೋಸ್ತಿ ಬೆಂಬಲ ಹಿಂಪಡೆದು ವಿಪಕ್ಷದಲ್ಲಿ ಕುಳಿತುಕೊಳ್ಳೋಣ ಎನ್ನುತ್ತರಾ? ಅಥವಾ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ನಿಗೂಢ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ