ಬೆಂಗಳೂರು[ಜು.15]: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ತೃಪ್ತ ಶಾಸಕರ ರಾಜೀನಾಮೆಯಿಂದ ಶುರುವಾದ ರಾಜಕೀಯ ಪ್ರಹಸನ ಎರಡು ವಾರಗಳಾದರೂ ಕೊನೆಗೊಳ್ಳುವ ಲಕ್ಷಣಗಳಿಲ್ಲ. ರಾಜೀನಾಮೆ ವಿಚಾರವಾಗಿ ಸತೃಪ್ತ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರೆ, ಇತ್ತ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ರಾಜಕೀಯ ನಾಯಕರ ಈ ಕಚ್ಚಾಟದ ನಡುವೆ ಸದ್ಯ ಕೈ ನಾಯಕರು ಸಿದ್ದರಾಮಯ್ಯ ಬಳಿ ಆತಂಕ ವ್ಯಕ್ತಪಡಿಸುತ್ತಾ, ತಾವು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದೇ ಸೂಕ್ತ ಎಂದಿದ್ದಾರೆ.

ಹೌದು ಕಳೆದೆರಡು ವಾರದಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದಿಂದ ಬೇಸತ್ತ ಕೈ ನಾಯಕರು ಇಂದು ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಎದುರು ತಮ್ಮ ಆತಂಕ ಹೊರ ಹಾಕಿದ್ದಾರೆ. 'ಇಂದೇ ವಿಶ್ವಾಸಮತಕ್ಕೆ ಬಿಜೆಪಿ ಪಟ್ಟು ಹಿಡಿದರೆ ಸರಕಾರ ಪತನ ಖಚಿತ. ಇಷ್ಟೆಲ್ಲಾ ಸರ್ಕಸ್ ಮಾಡಿ  ಸರ್ಕಾರ ಉಳಿಸಿಕೊಂಡರೆ ಕುಮಾರಸ್ವಾಮಿ, ರೇವಣ್ಣ ಬದಲಾಗ್ತಾರಾ.? ವಿರೋಧ ಪಕ್ಷದಲ್ಲಿ ಕುಳಿತರೆ ಮುಂದಿನ ಚುನಾವಣೆಯಲ್ಲಾದ್ರು ಅಧಿಕಾರಕ್ಕೆ ಬರಬಹುದು' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟೇ ಅಲ್ಲದೇ 'ಕಾಂಗ್ರೆಸ್ ಪಕ್ಷದ ಇನ್ನೂ ನಾಲ್ವರು ಅತೃಪ್ತರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಅನುಮಾನವಿದೆ. ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದು ಸರಿನಾ?' ಎಂದು ಸಿದ್ದರಾಮಯ್ಯ ಎದುರು ಕಾಂಗ್ರೆಸ್ ಶಾಸಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇನ್ನು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಅವರ ಮಗಳು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕೂಡಾ ರಾಜೀನಾಮೆ ಸಲ್ಲಿಸುತ್ತಾರೆಂಬ ವದಂತಿ ಹಬ್ಬಿತ್ತು. ಆದರೆ ಿಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಸೌಮ್ಯಾ ರೆಡ್ಡಿ ಹಾಜರಾಗುವ ಮೂಲಕ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.