ಬೆಂಗಳೂರು (ಜು.25) : ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಎದುರಾಗುವ ವಿಧಾನಸಭಾ ಉಪಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವುದಕ್ಕಿಂತ ಏಕಾಂಗಿಯಾಗಿ ಸ್ಪರ್ಧಿಸುವುದು ಸೂಕ್ತ ಎಂಬ ಅಭಿಪ್ರಾಯ ಜೆಡಿಎಸ್‌ ಪಾಳೆಯದಲ್ಲಿ ಬಲವಾಗಿ ವ್ಯಕ್ತವಾಗಿದೆ.

ದೋಸ್ತಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಹಂಗಾಮಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾರಣಕ್ಕಾಗಿ ಜೆಡಿಎಸ್‌ ಪಕ್ಷವು ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಮುಂದಿನ ದಿನದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಯಾವುದೇ ಚುನಾವಣೆಗಳು ಎದುರಾದರೂ ಏಕಾಂಗಿ ಕಣಕ್ಕಿಳಿಯುವುದು ಉತ್ತಮ. ಅದಕ್ಕಾಗಿ ಪಕ್ಷವನ್ನು ಈಗಿನಿಂದಲೇ ಬಲಗೊಳಿಸುವುದು ಉತ್ತಮ ಎಂಬ ಅಭಿಪ್ರಾಯಗಳನ್ನು ಹಲವು ಶಾಸಕರು ಸಭೆಯಲ್ಲಿ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ತನ್ನದೇ ಪ್ರಾಬಲ್ಯ ಹೊಂದಿದೆ. ಆದರೆ, ಅದೇ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಮುಂದಿನ ದಿನದಲ್ಲಿಯೂ ಮೈತ್ರಿಯೊಂದಿಗೆ ಚುನಾವಣೆಗಳನ್ನು ಎದುರಿಸಿದರೆ ಮತ್ತೆ ಸೋಲನುಭವಿಸಬೇಕಾಗುತ್ತದೆ. ರಾಜ್ಯಮಟ್ಟದಲ್ಲಿ ಮುಖಂಡರು ಹೊಂದಾಣಿಕೆ ಮಾಡಿಕೊಂಡರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಅದನ್ನು ಒಪ್ಪಲು ತಯಾರಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಬದ್ಧ ವೈರಿ ಪಕ್ಷಗಳಂತೆ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಚುನಾವಣೆಯನ್ನು ದೋಸ್ತಿಯಾಗಿ ಎದುರಿಸುವುದು ಬೇಡ ಎಂದು ಹಳೆ ಮೈಸೂರು ಪ್ರಾಂತ್ಯದ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡ, ಮೈತ್ರಿ ಸರ್ಕಾರ ಪತನಗೊಂಡಿದ್ದರೂ ಕಾಂಗ್ರೆಸ್‌ನೊಂದಿಗೆ ಅಂತರ ಕಾಯ್ದುಕೊಳ್ಳುವುದು ಬೇಡ. ಪ್ರಸ್ತುತ ಎರಡೂ ಪಕ್ಷಗಳ ನಡುವೆ ಸಂಬಂಧ ಉತ್ತಮವಾಗಿದೆ. ಮುಂದಿನ ದಿನದಲ್ಲಿ ಉಭಯ ಪಕ್ಷಗಳ ವರಿಷ್ಠರು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಸದನದಲ್ಲಿಯೂ ಬಿಜೆಪಿಯನ್ನು ದೋಸ್ತಿಯೊಂದಿಗೆ ಎದುರಿಸಲಾಗುವುದು. ಪಕ್ಷದ ಮುಖಂಡರು ಸಹ ದೋಸ್ತಿಗೆ ಸಹಕರಿಸಬೇಕು ಎಂದು ಸೂಚನೆ ನೀಡಿದರು ಎನ್ನಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದೇವೇಗೌಡ, ರಾಜೀನಾಮೆ ನೀಡಿರುವ ಶಾಸಕರ ವಿಚಾರವು ಸ್ಪೀಕರ್‌ಗೆ ಬಿಟ್ಟವಿಚಾರವಾಗಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್‌ ಜತೆ ಈಗಲೂ ನಮಗೆ ಯಾವುದೇ ವ್ಯತ್ಯಾಸ ಇಲ್ಲ. ಮೈತ್ರಿ ಸರ್ಕಾರವು ಅಧಿಕಾರ ಕಳೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಎಲ್ಲರೂ ಸದನದಲ್ಲಿ ಭಾಗವಹಿಸಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಪಕ್ಷದ ಸಭೆ ನಡೆಸಲಾಗಿದ್ದು, ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆ ಮಾಡಲಾಗಿದೆ. ಪಕ್ಷದ ಸಂಘಟನೆಗಾಗಿ ಎಲ್ಲರೂ ಶ್ರಮಿಸುವಂತೆ ಸೂಚಿಸಲಾಗಿದ್ದು, ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೇವೆ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಮುಂದುವರಿಕೆ ಬಗ್ಗೆ ಕಾಂಗ್ರೆಸ್‌ ನಾಯಕರ ಜತೆ ಮಾತನಾಡಿಲ್ಲ. ಮುಂದೆಯೂ ಮೈತ್ರಿ ಮುಂದುವರಿಸಿ ಸಹಕಾರ ನೀಡುವುದಾದರೆ ಅವರೊಂದಿಗೆ ಕೈಜೋಡಿಸಲು ಸಿದ್ಧ. ಕಾಂಗ್ರೆಸ್‌ ಪಕ್ಷದವರು ಬೇಡ ಎಂದರೆ ನಾವು ನಮ್ಮ ಪಕ್ಷದ ಬಲವರ್ಧನೆಯಲ್ಲಿ ತೊಡಗುತ್ತೇವೆ. ಇನ್ನು ಮುಂದೆ ಪಕ್ಷ ಕಟ್ಟುವಲ್ಲಿ ನಿರತವಾಗುತ್ತೇವೆ ಎಂದು ಹೇಳಿದರು.