ನಾಲ್ಕು ವರ್ಷಗಳ ಹಿಂದಿನ 31 ವರ್ಷದ ಪತ್ರಕರ್ತೆ ಮೀವಾ ಸಾಡೋ ಎಂಬಾಕೆ ಮೃತಪಟ್ಟಿದ್ದ ಪ್ರಕರಣ ಈಗ ಮರುಜೀವ ಪಡೆದಿದೆ. ಈಕೆ ಯಾಕೆ ಸಾವನ್ನಪ್ಪಿದ್ದಳು ಎಂಬ ಕಾರಣ ಇದೀಗ ಬಹಿರಂಗಗೊಂಡಿದ್ದು ಜಪಾನೀಯರಿಗೆ ಶಾಕ್ ಕೊಡುವಂತಿದೆ. ಜಪಾನ್'ನ ಎನ್'ಎಚ್'ಕೆ ಸುದ್ದಿ ವಾಹಿನಿಯ ವರದಿಗಾರ್ತಿಯಾಗಿದ್ದ ಮೀವಾ ಸಾಡೋ 2013ರ ಜುಲೈನಲ್ಲಿ ತನ್ನ ಹಾಸಿಗೆಯಲ್ಲಿ ಶವವಾಗಿ ಮಲಗಿದ್ದಳು. ಕೈಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡೇ ಶವವಾಗಿದ್ದಳು.

ಟೋಕಿಯೋ(ಅ. 06): ದುಡಿದು ತಿನ್ನುವುದು ಪ್ರತೀ ಜೀವಿಯ ಅನಿವಾರ್ಯ ಕರ್ಮ. ಇದರಲ್ಲಿ ಮನುಷ್ಯನೂ ಹೊರತಲ್ಲ. ಆಫೀಸಿಗೆ ಹೋಗಿ ದುಡಿಯಲೇಬೇಕು; ಇಲ್ಲ ಏನಾದರೂ ಕೆಲಸ ಮಾಡಿ ಹಣ ಸಂಪಾದಿಸಲೇಬೇಕು. ಈಗಂತೂ ಉದ್ಯೋಗದ ಒತ್ತಡ ವಿಪರೀತವಾಗಿಯೇ ಇರುತ್ತದೆ. ನಿಗದಿತ ಅವಧಿಗಿಂತ ಹೆಚ್ಚು ಹೊತ್ತು ಕೆಲಸ ಮಾಡಬೇಕಾದ ಅನಿವಾರ್ಯತೆಯ ಪರಿಸ್ಥಿತಿ ಇದೆ. ಪ್ರತೀ ದಿನವೂ ಹೆಚ್ಚು ಹೊತ್ತು ಕೆಲಸ ಮಾಡಿದರೆ ಸಾಕಷ್ಟು ಪ್ರತಿಕೂಲಗಳಿವೆ ಎಂದು ತಜ್ಞರು ಎಚ್ಚರಿಸುತ್ತಾರೆ. ವೈಯಕ್ತಿಕ ಜೀವನ ಹಾಳಾಗುತ್ತದೆ; ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದೆಲ್ಲಾ ವಾರ್ನಿಂಗ್ ಕೊಡುತ್ತಾರೆ. ಆದರೂ ನಮಗೆಲ್ಲಾ ಓವರ್'ಟೈಮ್ ಕೆಲಸ ಮಾಡುವುದು ಅನಿವಾರ್ಯ ಕರ್ಮ.

ಜಪಾನ್ ಪತ್ರಕರ್ತೆಯ ನಿಧನದ ಕಥೆ..!
ನಾಲ್ಕು ವರ್ಷಗಳ ಹಿಂದಿನ 31 ವರ್ಷದ ಪತ್ರಕರ್ತೆ ಮೀವಾ ಸಾಡೋ ಎಂಬಾಕೆ ಮೃತಪಟ್ಟಿದ್ದ ಪ್ರಕರಣ ಈಗ ಮರುಜೀವ ಪಡೆದಿದೆ. ಈಕೆ ಯಾಕೆ ಸಾವನ್ನಪ್ಪಿದ್ದಳು ಎಂಬ ಕಾರಣ ಇದೀಗ ಬಹಿರಂಗಗೊಂಡಿದ್ದು ಜಪಾನೀಯರಿಗೆ ಶಾಕ್ ಕೊಡುವಂತಿದೆ. ಜಪಾನ್'ನ ಎನ್'ಎಚ್'ಕೆ ಸುದ್ದಿ ವಾಹಿನಿಯ ವರದಿಗಾರ್ತಿಯಾಗಿದ್ದ ಮೀವಾ ಸಾಡೋ 2013ರ ಜುಲೈನಲ್ಲಿ ತನ್ನ ಹಾಸಿಗೆಯಲ್ಲಿ ಶವವಾಗಿ ಮಲಗಿದ್ದಳು. ಕೈಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡೇ ಶವವಾಗಿದ್ದಳು.

ಒಂದು ವರ್ಷದ ಬಳಿಕ ಆಕೆಯ ಸಾವಿಗೆ ಏನು ಕಾರಣ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಆಕೆ ಸಾಯುವ ಜುಲೈ ತಿಂಗಳಲ್ಲಿ ವೀಕ್ ಆಫ್ ತೆಗೆದುಕೊಂಡಿದ್ದು ಕೇವಲ 2 ದಿನ ಮಾತ್ರ. ಅಷ್ಟೇ ಅಲ್ಲ, ಆ ತಿಂಗಳು 159 ಗಂಟೆಯಷ್ಟು ಹೆಚ್ಚು ಕಾಲ ಓವರ್'ಟೈಮ್ ಕೆಲಸ ಮಾಡಿದ್ದಳಂತೆ. ಇದರಿಂದಾಗಿ ಆಕೆಗೆ ಹೃದಯಾಘಾತವಾಗಿತ್ತು. ಆದರೆ, ಅಧಿಕಾರಿಗಳು ಈ ವಿಚಾರವನ್ನು ಸಾರ್ವಜನಿಕರಿಗೆ ತಿಳಿಯದಂತೆ ರಹಸ್ಯವಾಗಿಟ್ಟಿದ್ದರು.

ಮೀವಾ ಸಾವನ್ನಪ್ಪುವ ವೇಳೆ, ಜಪಾನ್'ನಲ್ಲಿ ಬಹಳ ಹೈಪ್ರೊಫೈಲ್ ಚುನಾವಣೆಗಳಿದ್ದವು. ಜೂನ್ ತಿಂಗಳಲ್ಲಿ ಟೋಕಿಯೋ ರಾಜ್ಯದ ವಿಧಾನಸಭಾ ಚುನಾವಣೆ; ಜುಲೈನಲ್ಲಿ ರಾಜ್ಯಸಭಾ ಚುನಾವಣೆಗಳಿದ್ದವು. ಪೊಲಿಟಿಕಲ್ ರಿಪೋರ್ಟರ್ ಆಗಿದ್ದ ಮೀವಾ ಸಾಡೋ ಬಿಡುವಿಲ್ಲದೇ ಕೆಲಸ ಮಾಡುವಂತಾಗಿತ್ತು. ಚುನಾವಣೆ ಮುಗಿದ ಮೂರೇ ದಿನಕ್ಕೆ ಮೀವಾ ಇಹಲೋಕ ತ್ಯಜಿಸಿದ್ದಳು.

ವಾಹಿನಿಗೂ ಶಾಕ್..!
ವಿಚಿತ್ರವೆಂದರೆ, ಮೀವಾ ಕೆಲಸ ಮಾಡುತ್ತಿದ್ದ ಎನ್'ಎಚ್'ಕೆ ಸುದ್ದಿ ವಾಹಿನಿಯು ಅಧಿಕ ಒತ್ತಡದ ಕೆಲಸಗಳ ವಿರುದ್ಧ ಅಭಿಯಾನವನ್ನೇ ನಡೆಸಿತ್ತು. ಆದರೆ, ಅದರ ವಾಹಿನಿಯ ಉದ್ಯೋಗಿಯೊಬ್ಬರು ಅಧಿಕ ಕೆಲಸದೊತ್ತಡದಿಂದ ಸಾವನ್ನಪ್ಪಬೇಕಾಯಿತು.

ಹೆಚ್ಚು ಹೊತ್ತು ಕೆಲಸ ಮಾಡಿದ್ದರಿಂದ ತನ್ನ ಮಗಳು ಸಾವನ್ನಪ್ಪಬೇಕಾದ ವಿಚಾರ ಮೀವಾ ತಾಯಿಗೆ ಶಾಕ್ ತಂದಿದೆ. ಆಕೆ ತನ್ನ ಮಗಳ ಸಾವಿನ ಕಾರಣವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕೆಂದು ಎರಡು ವರ್ಷ ಹೋರಾಟ ನಡೆಸಿದ ಪರಿಣಾಮವಾಗಿ ಈಗ ಆ ವಿಚಾರ ಬೆಳಕಿಗೆ ಬಂದಿದೆ.

ಜಪಾನ್ ದೇಶದಲ್ಲಿ ಜನರು ಸಾಮಾನ್ಯವಾಗಿ ಓವರ್'ಟೈಮ್ ಕೆಲಸ ಮಾಡುತ್ತಾರೆ. ಜಪಾನೀಯರು ವಿಶ್ವದಲ್ಲೇ ಅತೀ ಹೆಚ್ಚು ಶ್ರಮಜೀವಿಗಳೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ, ಅತೀ ಶ್ರಮ ಹಾಕುವ ಒತ್ತಡದಲ್ಲಿ ಸಾವನ್ನಪ್ಪಿದವರಲ್ಲಿ ಮೀವಾ ಸಾಡೋ ಮೊದಲೇನಲ್ಲ. ಸಾಕಷ್ಟು ಮಂದಿ ಅಲ್ಲಿ ಅಧಿಕ ಕೆಲಸದೊತ್ತಡದಿಂದ ಪ್ರಾಣಬಿಟ್ಟಿದ್ದಾರೆ. ಈಗೀಗ ಅಲ್ಲಿ ಈ ಬಗ್ಗೆ ಜಾಗೃತಿ ಮೂಡುತ್ತಿದೆ.