ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದ್ದು ಇದು ಬಿಜೆಪಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. 

ಬೆಂಗಳೂರು :  ಸಮ್ಮಿಶ್ರ ಸರ್ಕಾರ ಸುಭದ್ರ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದೀಗ ಜಂತಕಲ್‌ ಮೈನಿಂಗ್‌ ಹಗರಣ ಮತ್ತೊಮ್ಮೆ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ನಿಯಮ ಗಾಳಿಗೆ ತೂರಿ ಜಂತಕಲ್‌ ಮೈನಿಂಗ್‌ ಕಂಪನಿಗೆ ಪರವಾನಗಿ ನವೀಕರಣ ಮಾಡಿಕೊಟ್ಟಆರೋಪ ಎದುರಿಸುತ್ತಿರುವ ಕುಮಾರಸ್ವಾಮಿ ಸೇರಿದಂತೆ 12 ಮಂದಿ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಚಾರ್ಜ್ ಶೀಟ್‌ ಸಿದ್ಧಪಡಿಸಿಕೊಂಡಿದ್ದು, ಸುಪ್ರೀಂಕೋರ್ಟ್‌ನ ಅನುಮತಿಗಾಗಿ ಕಾಯುತ್ತಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ಜಂಜಾಟದ ಬೆನ್ನಲ್ಲೇ ಇದೀಗ ಜಂತಕಲ್‌ ಮೈನಿಂಗ್‌ ಹಗರಣ ರಾಜ್ಯ ಬಿಜೆಪಿಗೆ ಅಸ್ತ್ರವಾಗುವ ನಿರೀಕ್ಷೆಯಿದೆ ಎಂದೇ ಹೇಳಲಾಗುತ್ತಿದೆ.

ವಿನೋದ್‌ ಗೋಯೆಲ್‌ ಮಾಲಿಕತ್ವದ ಜಂತಕಲ್‌ ಎಂಟರ್‌ಪ್ರೈಸಸ್‌ ಸಲ್ಲಿಸಿದ್ದ ನಕಲಿ ದಾಖಲೆ ಆಧರಿಸಿ ಕಬ್ಬಿಣದ ಅದಿರು ಸಾಗಣೆಗೆ ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಗಂಗಾರಾಮ ಬಡೇರಿಯಾ ಅನುಮತಿ ನೀಡಿದ್ದರು. ಆ ನಕಲಿ ದಾಖಲೆಗೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ, ಇದಕ್ಕೂ ಮೊದಲು 2007ರ ಜುಲೈನಲ್ಲಿ ಗಂಗಾರಾಮ ಬಡೇರಿಯಾ ಪುತ್ರ ಗಗನ್‌ ಬಡೇರಿಯಾ ಹೆಸರಿನ ಖಾತೆಗೆ ವಿನೋದ್‌ ಗೋಯಲ್‌ .10 ಲಕ್ಷ ಹಣ ಜಮೆ ಮಾಡಿದ್ದ ಬಗ್ಗೆ ಸಾಕ್ಷ್ಯವನ್ನು ಎಸ್‌ಐಟಿ ಸಂಗ್ರಹಿಸಿತ್ತು. ಈ ದಾಖಲೆಗಳನ್ನು ತನಿಖಾ ತಂಡ ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧದ ಆರೋಪದ ಬಗ್ಗೆಯೂ ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಈಗಾಗಲೇ ಪ್ರಕರಣದ ಚಾಜ್‌ರ್‍ಶೀಟ್‌ ಸಿದ್ಧಪಡಿಸಿಕೊಂಡಿರುವ ಎಸ್‌ಐಟಿ ತಂಡ ಸುಪ್ರೀಂಕೋರ್ಟ್‌ ಅನುಮತಿಗೆ ಕಾಯುತ್ತಿದೆ. ಅನುಮತಿ ನೀಡಿದ ಕೂಡಲೇ 12 ಮಂದಿ ಆರೋಪಿಗಳ ವಿರುದ್ಧ ಚಾಜ್‌ರ್‍ಶೀಟ್‌ ಸಲ್ಲಿಕೆಯಾಗಲಿದೆ ಎಂದು ಎಸ್‌ಐಟಿಯ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಸರ್ಕಾರಕ್ಕೆ 31 ಕೋಟಿ ರು. ನಷ್ಟ:

14,200 ಮೆಟ್ರಿಕ್‌ ಟನ್‌ ಅದಿರು ಮಾರಾಟ ಮಾಡಲು ಜಂತಕಲ್‌ ಮೈನಿಂಗ್‌ ಕಂಪನಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎಂದು 2011ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ ಅಂದಿನ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಅವರು 1,700 ಪುಟಗಳ ಸಮಗ್ರ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರಕ್ಕೆ 31,01,89,185 ರು. ನಷ್ಟವಾಗಿದೆ ಎಂದು ಉಲ್ಲೇಖಿಸಿದ್ದರು. ಈ ವರದಿಯಲ್ಲಿ ಗಂಗಾರಾಮ ಬಡೇರಿಯಾ ಅವರ ಹೆಸರಿತ್ತು. ಪ್ರಕರಣದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು. ಅಲ್ಲದೆ ಪ್ರಕರಣವವನ್ನು ಹೈಕೋರ್ಟ್‌ ರದ್ದಗೊಳಿಸಿತ್ತು. ಈ ವರದಿಯನ್ನು ಆಧರಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪಿನಾಕಿ ಚಂದ್ರಘೋಷ್‌ ಮತ್ತು ರೋಹಿಂಟನ್‌ ಎಫ್‌.ನಾರಿಮನ್‌ ದ್ವಿಸದಸ್ಯ ಪೀಠ, ಪ್ರಕರಣದ ತನಿಖೆಯನ್ನು ರಾಜ್ಯ ಎಸ್‌ಐಟಿ ನಡೆಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕು. ಅಲ್ಲದೆ, ಈ ಪ್ರಕರಣದಲ್ಲಿ ಯಾವುದೇ ಸಂದರ್ಭದಲ್ಲೂ ಕೆಳಹಂತದ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ. ಸುಪ್ರೀಂಕೋರ್ಟ್‌ ಆದೇಶವೇ ಅಂತಿಮ ಎಂದು ಹೇಳಿತ್ತು. ತನಿಖೆ ನಡೆಸಿದ್ದ ಎಸ್‌ಐಟಿ, ಐಎಎಸ್‌ ಅಧಿಕಾರಿ ಗಂಗಾರಾಮ ಬಡೇರಿಯಾ ಹಾಗೂ ಅವರ ಪುತ್ರನನ್ನು ಬಂಧಿಸಿತ್ತು. ಇದೀಗ ಪ್ರಕರಣದಲ್ಲಿ ಚಾಜ್‌ರ್‍ಶೀಟ್‌ ಸಿದ್ಧಪಡಿಸಿಕೊಂಡಿರುವ ಎಸ್‌ಐಟಿ ಸುಪ್ರೀಂಕೋರ್ಟ್‌ ಅನುಮತಿ ಪಡೆದು ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.