* ಈ ಹಿಂದೆ ಜ್ಯುವೆಲ್ಲರಿ ಮಳಿಗೆ ಮಾಲಿಕರೊಬ್ಬರಿಗೂ ಬ್ಲ್ಯಾಕ್‌'ಮೇಲ್‌* 15 ಕೋಟಿಗೆ ಬೇಡಿಕೆ, ಹೆದರಿ 10 ಕೋಟಿ ನೀಡಿದ್ದ ಜ್ಯುವೆಲ್ಲರಿ ಮಾಲಿಕ* ಇದೀಗ 10 ಕೋಟಿ ನೀಡುವಂತೆ ಬೆದರಿಕೆ: ಉದ್ಯಮಿಯಿಂದ ದೂರು* ಜನಶ್ರೀ ಚಾನಲ್‌ ಸಿಇಒ ಲಕ್ಷ್ಮೀಪ್ರಸಾದ್‌ ಸೇರಿ ಆರು ಮಂದಿಯ ಬಂಧನ
ಬೆಂಗಳೂರು(ಏ. 16): ಉದ್ಯಮಿಯೊಬ್ಬರಿಗೆ ಬ್ಲ್ಯಾಕ್'ಮೇಲ್ ಮಾಡಿ ರು. 10 ಕೋಟಿಗೆ ಬೇಡಿಕೆ ಇಟ್ಟಿದ್ದ ಖಾಸಗಿ ಸುದ್ದಿ ವಾಹಿನಿಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜನಶ್ರೀ ಸುದ್ದಿವಾಹಿನಿಯ ಸಿಇಒ ಆಂಧ್ರಪ್ರದೇಶ ಮೂಲದ ಲಕ್ಷ್ಮೀ ಪ್ರಸಾದ್ ವಾಜಪೇಯಿ (42), ಅವರ ಸಹಚರ ಮಿಥುನ್ ಹಾಗೂ ನಾಲ್ವರು ಖಾಸಗಿ ಭದ್ರತಾ ಸಿಬ್ಬಂದಿ ಬಂಧಿತರು. ಆರೋಪಿಗಳನ್ನು ಮ್ಯಾಜಿಸ್ಪ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.
ಪ್ರಮುಖ ಆರೋಪಿ ಲಕ್ಷ್ಮೀಪ್ರಸಾದ್ ವಾಜಪೇಯಿಯನ್ನು 5 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ 5 ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಲಕ್ಷ್ಮೀ ಪ್ರಸಾದ್ ಉದ್ಯಮಿಯೊಬ್ಬರಿಗೆ ಕರೆ ಮಾಡಿ ರು.10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ನಿಮ್ಮ ವಿರುದ್ಧ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗುವುದು ಎಂದು ಬೆದರಿಸಿದ್ದರು. ಅಲ್ಲದೆ, ಉದ್ಯಮಿ ವಿರುದ್ಧ ಸಣ್ಣದೊಂದು ಸುದ್ದಿಯನ್ನು ವಾಹಿನಿಯಲ್ಲಿ ಪ್ರಸಾರ ಕೂಡ ಮಾಡಲಾಗಿತ್ತು. ಈ ಬಗ್ಗೆ ಉದ್ಯಮಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಲಕ್ಷ್ಮೇ ಪ್ರಸಾದ್ ಬೇಡಿಕೆಯಂತೆ ಮೊದಲ ಕಂತಿನಲ್ಲಿ ಸ್ವಲ್ಪ ಹಣ ನೀಡುವುದಾಗಿ ಉದ್ಯಮಿ ಒಪ್ಪಿದ್ದರು. ಉದ್ಯಮಿಯಿಂದ ಲಕ್ಷ್ಮೇ ಪ್ರಸಾದ್ ಮತ್ತು ಸಹಚರ ಮಿಥುನ್ ಹಣ ಪಡೆಯುವಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಉದ್ಯಮಿಗೆ ಖಾಸಗಿ ಭದ್ರತಾ ಸಿಬ್ಬಂದಿಯು ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆರೋಪದ ಮೇರೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384ರ ಪ್ರಕಾರ ದೂರು ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಇದೇ ರೀತಿ ಜ್ಯುವೆಲರಿ ಮಳಿಗೆಯ ಮಾಲೀಕರನ್ನು ಹೆದರಿಸಿ ಆರೋಪಿಗಳು ರು. 15 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ರು. 10 ಕೋಟಿ ನೀಡಲು ಜ್ಯುವೆಲರಿ ಮಳಿಗೆ ಮಾಲೀಕ ಒಪ್ಪಿದ್ದರು. ಅವರಿಂದ ನೆಟ್ ಬ್ಯಾಕಿಂಗ್ ಮೂಲಕ 10 ಕೋಟಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲದೆ, ಮಳಿಗೆಯಿಂದ ಆರೋಪಿ ಲಕ್ಷ್ಮೇ ಪ್ರಸಾದ್ 30 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದಿದ್ದರು. ಈ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದರೋಡೆ, ಪ್ರಾಣ ಬೆದರಿಕೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲೂ ಕಳೆದ ತಿಂಗಳ 22ರಂದು ಇಂತಹದ್ದೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ಲಕ್ಷ್ಮೇ ಪ್ರಸಾದ್ ಹಣವಿರುವ ಉದ್ಯಮಿಗಳನ್ನು ಗುರುತಿಸುತ್ತಿದ್ದರು. ಉದ್ಯಮಿಗಳ ವ್ಯವಹಾರಕ್ಕೆ ಸಂಬಂಧಿಸಿದ ಕೆಲ ದಾಖಲೆ ಸಂಗ್ರಹಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಿಂಬಾಳ್ಕರ್ ತಿಳಿಸಿದ್ದಾರೆ.
ಆರೋಪಿಗಳು ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಬಂಧನ ವೇಳೆ ಆರೋಪಿ ಬಳಿ ಪಿಸ್ತೂಲ್ ಪತ್ತೆಯಾಗಿದ್ದು, ಅದಕ್ಕೆ ಪರವಾನಗಿ ಪಡೆದಿರುವ ಬಗೆಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ನಾಲ್ವರು ಉತ್ತರ ಪ್ರದೇಶ ಮೂಲದ ಗನ್ಮ್ಯಾನ್ಗಳನ್ನು ಆರೋಪಿ ಭದ್ರತೆಗೆ ನಿಯೋಜಿಸಿಕೊಂಡಿದ್ದ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ನಿಂಬಾಳ್ಕರ್ ಹೇಳಿದ್ದಾರೆ.
ಹೈದ್ರಾಬಾದ್'ನಲ್ಲೂ ಹೀಗೇ ಮಾಡಿದ್ದರು:
ಲಕ್ಷ್ಮೀಪ್ರಸಾದ್ ವಾಜಪೇಯಿ ಹೈದರಾಬಾದ್ನಲ್ಲಿ ಆರ್.ಕೆ. ಎಂಬ ಸುದ್ದಿವಾಹಿನಿ ಹೊಂದಿದ್ದರು. ಅಲ್ಲಿಯೂ ಉದ್ಯಮಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಅವರ ವಿರುದ್ಧ ಹೈದರಾಬಾದ್'ನಲ್ಲೂ ದೂರು ದಾಖಲಾಗಿದೆ. ಬಳಿಕ ಬೆಂಗಳೂರಿಗೆ ಬಂದಿದ್ದ ಆರೋಪಿ ಖಾಸಗಿ ಸುದ್ದಿವಾಹಿನಿಯ ಸಿಇಒ ಆಗಿದ್ದರು. ಉದ್ಯಮಿಗಳ ಮಾಹಿತಿ ಸಂಗ್ರಹಿಸಿ ಅವರ ವಹಿವಾಟಿನ ದಾಖಲೆ ಸಂಗ್ರಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಸುದ್ದಿ ವಾಹಿನಿಯ ಕಚೇರಿಗೆ ಕರೆಸಿಕೊಂಡು ಟ್ರೈಲರ್ ತೋರಿಸಿ ಹೆದರಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಬೆದರಿದ ಕೆಲ ಮಂದಿ ಹಣ ನೀಡಿರುವ ಶಂಕೆ ಇದೆ. ಈತನಿಂದ ವಂಚನೆಗೊಳಗಾಗಿರುವವರು ದೂರು ನೀಡಬಹುದು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
