ಫ್ರೀ ಟೈಂನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಖಾಕಿ ಮೇಷ್ಟ್ರು..!

Jammu IPS Officer Coaches Students In Free Time
Highlights

ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಐಪಿಎಸ್ ಅಧಿಕಾರಿ

ಯುಪಿಎಸ್‌ಸಿ ಪರೀಕ್ಷಾರ್ಥಿಗಳ ಪಾಲಿನ ಖಾಕಿ ಮೇಷ್ಟ್ರು

೨೦೧೨ ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸಂದೀಪ್ ಚೌಧರಿ

ದಕ್ಷಿಣ ಜಮ್ಮುವಿನ ಪೊಲೀಸ್ ವರಿಷ್ಠಾಧಿಕಾರಿ

ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಮಾಡುವ ಸಂದೀಪ್ 

ಶ್ರೀನಗರ(ಜೂ.7): ಐಪಿಎಸ್ ಆಗುವುದು ಬಹುತೇಕರ ಕನಸು. ಕಷ್ಟಪಟ್ಟು ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಖಾಕಿ ಧರಿಸಿ ಜನಸೇವೆ ಮಾಡುವ ಕನಸು ಹೊತ್ತ ಯುವ ಮನಸ್ಸುಗಳಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ. ಆದರೆ ಯುಪಿಎಸ್‌ಸಿ ಎಂಬ ಕಬ್ಬಿಣದ ಕಡಲೆಯನ್ನು ಪಾಸು ಮಾಡುವುದು ಹೇಗೆ ಎಂಬುದೇ ಮುಖ್ಯ ಪ್ರಶ್ನೆ.

ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಐಪಿಎಸ್ ಅಧಿಕಾರಿಯೊಬ್ಬರು ಎಲ್ಲರಿಗೂ ಆದರ್ಶವಾಗಬಲ್ಲ ಮಾರ್ಗವನ್ನು ಕಂಡುಕೊಂಡಿದ್ದಾರೆ. ದಕ್ಷಿಣ ಜಮ್ಮುವಿನ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಚೌಧರಿ ಪ್ರತಿ ದಿನ ಬೆಳಗ್ಗೆ ಸುಮಾರು 2 ಗಂಟೆ ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿ ಕೊಡುತ್ತಿದ್ದಾರೆ.

ಹೌದು, ಸಂದೀಪ್ ಚೌಧರಿ ಎಂಬ ಐಪಿಎಸ್ ಅಧಿಕಾರಿ ನಿತ್ಯವೂ 2 ಗಂಟೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿ ಕೊಡುತ್ತಾರೆ. ಯುಪಿಎಸ್‌ಸಿ ಪರೀಕ್ಷೆಗಾಗಿ ತಯಾರಿ ನಡೆಸುವ ಪರಿ, ಅಧ್ಯಯನ ವಿಧಾನ ಹೀಗೆ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲೇ ಉಚಿತವಾಗಿ ಮಾರ್ಗದಶರ್ಶನ ಮಾಡುತ್ತಾರೆ ಸಂದೀಪ್ ಚೌಧರಿ.

2012 ರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ಸಂದೀಪ್ ಚೌಧರಿ, ತಮ್ಮ ಬಿಡುವಿನ ವೇಳೆಯಲ್ಲಿ ಆಕಾಂಕ್ಷಿಗಳಿಗೆ ಮಾಗರ್ಗದರ್ಶನ ಮಾಡುತ್ತಾರೆ. ನಿತ್ಯವೂ ಬೆಳಗ್ಗೆ 2 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದೀಪ್ ಚೌಧರಿ, ನಂತರ ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಾರೆ.

ವಿಶೇಷವೆಂದರೆ ಸಂದೀಪ್ ಅವರ ಮಾರ್ಗದಶರ್ಶನ ಪಡೆದ ಸುಮಾರು 10 ವಿದ್ಯಾರ್ಥಿಗಳು ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ. ಇದರಿಂದ ಸ್ಪೂರ್ತಿ ಪಡೆದಿರುವ ಸಂದೀಪ್ ಅವರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲೆಂದೇ ತಮ್ಮ ಕಚೇರಿ ಪಕ್ಕ ಕೋಣೆಯೊಂದನ್ನು ಬಾಡಿಗೆ ಪಡೆದಿದ್ದಾರೆ. ಕಳೆದ ಮೇ 30 ರಂದೇ ಈ ಕೋಣೆ ಉದ್ಘಾಟಿಸಿರುವ ಸಂದೀಪ್, ನಿತ್ಯವೂ ಇಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

loader