ಸಿಕ್ಕ ಸಿಕ್ಕ ವಿಡಿಯೋಗಳನ್ನು ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸಿ. ಇಂತಹ ವಿಡಿಯೋಗಳನ್ನು ನೀವು ಶೇರ್ ಮಾಡಿದ್ರೆ ಜೈಲಿಗೆ ಹೋಗೋದು ಗ್ಯಾರಂಟಿ
ನವದೆಹಲಿ: ಪುಟ್ಟ ಮಕ್ಕಳನ್ನು ಕಾಮದಾಟಕ್ಕೆ ದೂಡುವ ಬೆಳವಣಿಗೆಗಳು ಹೆಚ್ಚುತ್ತಿರುವುದರಿಂದ ತೀವ್ರ ಕಳವಳಗೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅರ್ಥಾತ್ ಪೋಕ್ಸೋಗೆ ಮತ್ತಷ್ಟು ಬಲ ತುಂಬಲು ಮುಂದಾಗಿದೆ.
ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರ, ವಿಡಿಯೋಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು, ಅದನ್ನು ನೋಡುವುದು, ಸಂಗ್ರಹಿಸಿಟ್ಟು ಕೊಳ್ಳುವುದು, ಬೇರೆಯವರಿಗೆ ಕಳುಹಿಸುವುದು ಹಾಗೂ ವಿತರಿಸುವುದನ್ನು ಮಾಡುವವರಿಗೆ ಭಾರಿ ದಂಡ ಹಾಗೂ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಗಂಭೀರ ಆಲೋಚನೆಯಲ್ಲಿ ತೊಡಗಿದೆ.
ಅಲ್ಲದೆ ಇಂತಹ ಅಪರಾಧವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲು ಉದ್ದೇಶಿಸಿದೆ. ಒಮ್ಮೆ ಅಪರಾಧಿಯಾದವರು ಮತ್ತೆ ಇದೇ ರೀತಿಯ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಅಂಥವರಿಗೆ 7 ವರ್ಷ ದವರೆಗೂ ಜೈಲು ಶಿಕ್ಷೆ ವಿಧಿಸುಂತೆ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನ ಆರಂಭಿಸಿದೆ.
ಮಕ್ಕಳ ಅಶ್ಲೀಲ ವಿಡಿಯೋ, ಚಿತ್ರದ ಬಗ್ಗೆ ಗೊತ್ತಿದ್ದರೂ ಅದರ ಬಗ್ಗೆ ಮಾಹಿತಿ ನೀಡದವರು ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಹೊಂದಿರುವಂತವರ ವಿರುದ್ಧವೂ ಕ್ರಮ ಕೈಗೊಳ್ಳುವ ಚಿಂತನೆ ಇದೆ. ಈ ಸಂಬಂಧ ಶಿಫಾರಸ್ಸು ಸಿದ್ಧವಿದ್ದು, ಕಾನೂನು ಸಚಿವಾಲಯದ ಒಪ್ಪಿಗೆ ಸಿಗಬೇಕಿದೆ. ಮುಂದಿನ ವಾರ ಸಮ್ಮತಿ ದೊರೆಯಬಹುದು ಎಂಬ ನಿರೀಕ್ಷೆ ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೊಂದಿದೆ. ಸಮ್ಮತಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ತಿದ್ದುಪಡಿ ಮಸೂದೆಯು ಮಂಡನೆಯಾಗಲಿದೆ.
