ದೇಶವನ್ನು ಕ್ಯಾಷ್‌ಲೆಸ್‌ ಆರ್ಥಿಕತೆಯತ್ತ ಒಯ್ಯುವ ಇಂಗಿತದಲ್ಲಿ ಪ್ರಧಾನಿ ಕಪ್ಪುಹಣವನ್ನು ನಿಯಂತ್ರಿಸುವ ಜೊತೆಗೇ, ನಗದು ರಹಿತ ವಹಿವಾಟಿಗೆ ಮುನ್ನುಡಿ ಬರೆದಿದ್ದಾರೆ. ಇದು ಗೆಲ್ಲುವುದೇ?

ಅಂಕಣ: ಜಗದ ಜಾಲ
ಲೇಖಕರು: ಕುಮಾರ್ ಎಸ್., ಕನ್ನಡಪ್ರಭ

ಕಪ್ಪುಹಣದ ಬೇಟೆಗೆ ಹೊರಟಿರುವ ಸರ್ಕಾರ ನಿಜವಾಗಿಯೂ ಯಾವ ಗುರಿ ಇಟ್ಟು­ಕೊಂಡಿದೆ ಎಂದು ನಾನು ಕಳೆದ ವಾರ ಅನುಮಾನದ ಮಾತುಗಳ­ನ್ನಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದಿನ ಭಾಷಣದಲ್ಲಿ ಮನದಾಳದ ಅಭಿಲಾಷೆಯನ್ನು ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ. ದೇಶವನ್ನು ಕ್ಯಾಷ್‌ಲೆಸ್‌ ವಹಿವಾಟಿನತ್ತ ಒಯ್ಯುವ ಪ್ರಯತ್ನವಾಗಿ ಈ ಹೆಜ್ಜೆ ಇಟ್ಟಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. 

ಮೋದಿ ಅಭಿಮಾನಿಗಳು ಮತ್ತು ವಿರೋಧಿಗಳು ನೋಟ್‌ ನಿಷೇಧವನ್ನು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನವೆಂದು ಬಣ್ಣಿಸಿ­ದರು. ಅಭಿ­ಮಾನಿ­ಗಳು ದೇಶದ ಹಿತಕ್ಕೆ ಪ್ರಧಾನಿ ನಡೆ­ಯೆಂದರೆ, ವಿರೋಧಿಗಳು ಶೇ. 80ರಷ್ಟುನಗದು ಆರ್ಥಿ­ಕತೆ ಹೊಂದಿ­ರುವ ಭಾರತವನ್ನು ನಿಯಂತ್ರಿಸಲು ಕ್ಯಾಷ್‌ಲೆಸ್‌ ವಹಿವಾ­ಟಿ­ನತ್ತ ಒಯ್ಯುವ ಪ್ರಯತ್ನದಲ್ಲಿ ಕಪ್ಪು ಹಣವನ್ನು ನಿಯಂತ್ರಿ­ಸುವ ನೆಪ ಹೂಡಿ­ದ್ದಾರೆ ಎಂದೂ ಟೀಕಿಸಿದರು.

ಕಳೆದ ಹದಿನೈದು ದಿನಗಳಲ್ಲಿ ಕಪ್ಪು ಹಣ ನಿಯಂ­ತ್ರಿ­ಸುವ ವಿಷಯದಲ್ಲಿ ದಿನಕ್ಕೊಂದು ಘೋಷಣೆ ಹೊರಡಿ­ಸು­ತ್ತಿರುವುದು, ಅಕ್ರಮವಾಗಿ ನಡೆಯುತ್ತಿರುವ ಚಟು­ವಟಿಕೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ, ಇದು ಕಪ್ಪು ಹಣ ನಿಯಂತ್ರಣದ ನಡೆಗಿಂತ ಹೆಚ್ಚಾಗಿ ನಮ್ಮ ಕೈಗಳಲ್ಲಿರುವ ಚಿಲ್ಲರೆಯನ್ನು ಕಸಿದುಕೊಂಡು, ಕಾರ್ಡ್‌ ಕೊಡುವ ನಡೆಯಾಗಿಯೇ ಗೋಚರಿಸುತ್ತಿದೆ. 

ಮೇಲ್ನೋಟಕ್ಕೆ ಇದು ಉತ್ತಮ ನಡೆಯಾಗಿಯೇ ಕಾಣಿಸುತ್ತದೆ. ಎಲ್ಲವೂ ಆನ್‌ಲೈನ್‌ ಮೂಲಕ ನಡೆಯು­ವು­ದರಿಂದ ವಹಿವಾಟಿನ ಮೇಲೆ ನಿಗಾ ಇಡಲು ಸಾಧ್ಯ. ಅಕ್ರಮ ಸಂಗ್ರಹಕ್ಕೆ ಅವಕಾಶವಿರುವುದಿಲ್ಲ, ತೆರಿಗೆ ವಂಚನೆ ಸಾಧ್ಯವಿಲ್ಲ ಎಂದೆನಿಸುತ್ತದೆ. ಅಲ್ಲದೆ ಎಲ್ಲ ರೀತಿಯ ಹಣಕಾಸಿನ ವಹಿವಾಟು ಬೆರಳ ತುದಿಯಲ್ಲಿ­ರುತ್ತದೆ. ಆದ್ದರಿಂದ ಬದುಕು ಸುಲಭವಾಗುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಇಷ್ಟುಸರಳವಾಗಿದ್ದರೆ ಎಲ್ಲವೂ ವಿಮರ್ಶೆಗಳಿಲ್ಲದೆ ಸ್ವೀಕೃತವಾಗುತ್ತದೆ. 

ಇದನ್ನು ಒತ್ತಟ್ಟಿಗಿಟ್ಟು ಆರ್‌ಬಿಐನ ಕೆಲವು ಅಂಕಿ ಅಂಶ­ಗಳನ್ನು ನೋಡೋಣ. ಜುಲೈ 2016ರವರೆಗಿನ ದಾಖಲೆ­ಗಳ ಪ್ರಕಾರ ದೇಶದಲ್ಲಿ 2.59 ಕೋಟಿ ಕ್ರೆಡಿಟ್‌ ಮತ್ತು 69.72 ಕೋಟಿ ಡೆಬಿಟ್‌ಗಳಿವೆ. ಇದರಲ್ಲಿ ಬಳಕೆಯಲ್ಲಿ­ರುವ, ತಿರಸ್ಕೃತವಾಗಿರುವ ಕಾರ್ಡ್‌ಗಳೂ ಸೇರಿವೆ. ವಿವಿಧ ಬ್ಯಾಂಕ್‌ಗಳು ನಿತ್ಯ ವಹಿವಾಟು ನಡೆಯುವ ಸ್ಥಳ­ದಲ್ಲಿ ಕಾರ್ಡ್‌ ಸ್ವೈಪ್‌ ಮಾಡಲು ಇರಿಸಿರುವ ಯಂತ್ರ­ಗಳು 14.4 ಕೋಟಿ ರೂ. ಜೊತೆಗೆ 2 ಲಕ್ಷ ಎಟಿಎಂ ಕೇಂದ್ರ­ಗಳು. ಜುಲೈ ತಿಂಗಳೊಂದರಲ್ಲೇ 881 ಮಿಲಿ­ಯನ್‌ ರೂ. ವಹಿ­ವಾಟುಗಳು ಎಟಿಎಂ ಮತ್ತು ಪಿಒಎಸ್‌ಗಳಲ್ಲಿ ನಡೆದಿದೆ. ಈ ಪೈಕಿ ಶೇ. 85ರಷ್ಟು ವಹಿವಾಟು ನಡೆದಿರು­ವುದು ಎಟಿಎಂಗಳಲ್ಲಿ ಕ್ಯಾಷ್‌ ಡ್ರಾ ಮಾಡುವು­ದಕ್ಕೆ. ಸದ್ಯ ದೇಶದಲ್ಲಿರುವ ಶೇ.92ರಷ್ಟು ಡೆಬಿಟ್‌ ಕಾರ್ಡ್‌'ಗಳನ್ನು ಎಟಿಎಮ್‌ನಿಂದ ನಗದು ಪಡೆಯುವುದಕ್ಕೆ ಬಳಸಲಾಗು­ತ್ತಿದೆ. ಖರೀದಿಗೆ ಬಳಕೆಯಾಗುತ್ತಿಲ್ಲ. 

ಏನಿದರರ್ಥ? ಯೋಚಿಸಿ, ನಮ್ಮ ಊರುಗಳಲ್ಲಿರುವ ಯಾವುದೇ ವ್ಯಕ್ತಿ ಹೇಗೆ ಡೆಬಿಟ್‌ ಕಾರ್ಡ್‌ ಬಳಸಿ ಖರೀದಿ ಮಾಡಬಹುದು? ಅಂಥ ವ್ಯವಸ್ಥೆಯನ್ನು ನಮ್ಮ ಹಳ್ಳಿಗ­ಳಲ್ಲಿ ಸ್ಥಾಪಿಸುವುದಕ್ಕೆ ಏನೆಲ್ಲಾ ಅಗತ್ಯವಿದೆ? ಪ್ರತಿಯೊಬ್ಬ ಭಾರತೀಯನೂ ಈ ಹೊಸ ಆರ್ಥಿಕ ವ್ಯವಸ್ಥೆಯೊಳಗೆ ಸೇರಬೇಕೆಂದು ಸರ್ಕಾರ ಬಯಸಿದ್ದೇ ಆದಲ್ಲಿ ಒಂದಿಷ್ಟುತಾಂತ್ರಿಕವಾದ ಸಿದ್ಧತೆಗಳನ್ನು ನಡೆಸಿಕೊಳ್ಳಬೇಕಿತ್ತು. ಅನುಮಾನಗಳನ್ನು ಸ್ಪಷ್ಟಪಡಿಸಬೇಕಿತ್ತು. ಆ ತಯಾರಿಯೇ ಕಾಣದಿರುವುದು ಆತಂಕಕ್ಕೆ ಕಾರಣ. 

ಕ್ಯಾಷ್‌'ಲೆಸ್‌ ವಹಿವಾಟಿಗೆ ಮುಖ್ಯವಾಗಿ ಬೇಕಾಗು­ವುದು ಸಮರ್ಥ ಇಂಟರ್ನೆಟ್‌ ಸೇವೆ. ಸದ್ಯ ಸರ್ಕಾರದ ಅಧೀನದಲ್ಲಿರುವ ಬಿಎಸ್‌ಎನ್‌ಎಲ್‌ ಇಂದಿಗೂ ಗ್ರಾಮಾಂ­ತರ ಪ್ರದೇಶದಲ್ಲಿ ನೆಟ್‌ವರ್ಕ್ ಇದ್ದರೂ ಅದು ಕ್ಯಾಷ್‌ಲೆಸ್‌ ಆರ್ಥಿಕತೆ ಬೆಂಬಲಿಸುವಷ್ಟುವೇಗದ ಇಂಟರ್ನೆಟ್‌ ನೀಡುವಷ್ಟುಸಮರ್ಥವಾಗಿಲ್ಲ. ಖಾಸಗಿ ಟೆಲಿಕಾಂ ಕಂಪನಿಗಳು 3ಜಿ ಮತ್ತು 4ಜಿ ಸೇವೆಯನ್ನು ನೀಡುತ್ತಿವೆಯಾದರೂ ಬಿಎಸ್‌ಎನ್‌ಎಲ್‌ ಅಂಥ ಸಾಮರ್ಥ್ಯ ತೋರಿಲ್ಲ. ಹಾಗಾದರೆ ತರಾತುರಿಯಲ್ಲಿ ಜಾರಿಯಾಗುತ್ತಿರುವ ಆಧುನಿಕ ಹಣಕಾಸು ವಹಿವಾಟು ಪದ್ಧತಿಗೆ ಸಿದ್ಧತೆ ಎಲ್ಲಿದೆ? ಖಾಸಗಿ ಸಂಸ್ಥೆಯಾದ ರಿಲಯನ್ಸ್‌ ಕಂಪನಿಯಿಂದ ನೀಡಲಾಗುತ್ತಿರುವ ಜಿಯೋ ಸೇವೆಯನ್ನು ನಂಬಿಕೊಳ್ಳಬಹುದೆÜ? ನಮ್ಮ ಮಾಹಿತಿ ಮತ್ತು ವಹಿವಾಟು ಸುರಕ್ಷಿತವಾಗಿರಬಹುದೆ?

ಕ್ಯಾಷ್‌'ಲೆಸ್‌ ವಹಿವಾಟಿಗೆ ನಿರ್ದಿಷ್ಟ ತಿಳಿವಳಿಕೆ ಬೇಕು. ಅದು ತಾಂತ್ರಿಕವಾದದ್ದಾದ್ದರಿಂದ ಭಾರತೀಯ ಹಳ್ಳಿಗರು ಇದನ್ನು ಹೇಗೆ ಒಪ್ಪಿಕೊಳ್ಳಬಹುದು ಎಂಬ ಅನುಮಾನ. ಸದ್ಯದ ಮಾಹಿತಿ ಪ್ರಕಾರ ಮಾಹಿತಿ ತಂತ್ರಜ್ಞಾನ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಒಂದು ಒಳ್ಳೆಯ ಹೆಜ್ಜೆ. 

ಎರಡನೆಯದಾಗಿ ಸುರಕ್ಷತೆ. ಈ ವ್ಯಾಲೆಟ್‌ಗಳು ಬಹಳ­ಷ್ಟಿವೆ. ಪೇಟಿಎಂ, ಮೊಬಿಕ್ವಿಕ್‌, ಪೇಯುಮನಿ, ಫ್ರೀಚಾರ್ಜರ್‌ ಇತ್ಯಾದಿ. ದೈತ್ಯ ಟೆಕ್‌ ಕಂಪನಿ ಗೂಗಲ್‌ ಕೂಡ ವ್ಯಾಲೆಟ್‌ ಸೇವೆ ನೀಡುತ್ತಿದೆ. ತಮ್ಮದು ಅತ್ಯಂತ ಸುರಕ್ಷಿತ ಸೇವೆ ಎಂದು ಹೇಳಿಕೊಳ್ಳುತ್ತದೆ. ಇತ್ತೀಚೆಗೆ ಗೂಗಲ್‌ ಬಳಕೆದಾರರು ತಮ್ಮ ಕಾರ್ಡ್‌ ಮಾಹಿತಿ ದಾಖಲಿಸುವ ಅವಕಾಶವನ್ನು ಬಂದ್‌ ಮಾಡಿತ್ತು. ಅದಕ್ಕೆ ನೀಡಿದ ಕಾರಣ, ದುರ್ಬಲ ಭದ್ರತೆಯ ವ್ಯವಸ್ಥೆ! 

ಎಲೆಕ್ಟ್ರಾನಿಕ್‌ ಫ್ರಾಂಟಿಯ​ರ್‍ಸ್ ಫೌಂಡೇಷನ್‌ನ ರೈನೆ ರೀಟ್‌ಮನ್‌ ತಂತ್ರಜ್ಞಾನ ಆಧರಿಸಿದ ಆರ್ಥಿಕ ವ್ಯವಸ್ಥೆಯ ಬಗ್ಗೆ ಬಲ್ಲವರು, ‘‘ನಮ್ಮ ಎಲ್ಲ ವಹಿವಾಟು­ಗಳು ಆನ್‌ಲೈನ್‌ ಮೂಲಕ ನಡೆಯಲಾರಂಭಿಸಿದರೆ, ಅದರ ಮೇಲೆ ನಿಗಾ ಇಡುವುದು ಸುಲಭವೆನ್ನುವುದು ನಿಜ. ಹಾಗೆಯೇ ಇನ್ನೊಂದು ಆಯಾಮವನ್ನೂ ಗಮನಿಸಿದೆ. ಆನ್‌ಲೈನ್‌ ವಹಿವಾಟು ದೊಡ್ಡ ಪ್ರಮಾಣದ ಮಾಹಿತಿಯನ್ನು ಕಲೆ ಹಾಕುತ್ತದೆ. ಆದರೆ ಅದರ ಮೇಲೆ ಸರ್ಕಾರ ಅಥವಾ ಅದರ ಪ್ರತಿನಿಧಿಯ ಹೊರತು ಯಾರಿಗೂ ನಿಯಂತ್ರಣವಿರುವುದಿಲ್ಲ. ಖಾಸಗಿತನವಿರುವುದಿಲ್ಲ. ಹಾಗಾಗಿ ಸರ್ಕಾರದ ಈ ಮಾಹಿತಿಯನ್ನು ಬಳಸಿ, ನಮ್ಮ ಜೀವನಚರಿತ್ರೆಯನ್ನು ಬೇಕಾದಂತೆ ಬರೆಯುವ ಅವಕಾಶವನ್ನು ಕಲ್ಪಿಸುತ್ತದೆ. ಶ್ರೀಮಂತರಿಗೆ ಇದರಿಂದ ವಿನಾಯಿತಿ ಸಿಗಬಹುದು, ಯಾಕೆಂದರೆ ಅವರ ಬಳಿ ಹಣವಿದೆ'' ಎಂದು ಬೆಚ್ಚಿಬೀಳುವಂತೆ ಅಂಶಗಳನ್ನು ಮುಂದಿಡುತ್ತಾರೆ. 

‘‘ಡಿಜಿಟಲ್‌ ಕ್ಯಾಷ್‌ ಅನ್ನು ಸರ್ಕಾರವೇ ಪ್ರೋತ್ಸಾಹಿ­ಸು­ತ್ತಿದ್ದರೂ, ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳು ಮಾಡುತ್ತವೆ. ಹೀಗಾಗಿ ಒಂದು ಅಂಶ ನಿಮ್ಮ ತಲೆಯಲ್ಲಿ ಸದಾ ಎಚ್ಚರವಾಗಿರಬೇಕು. ಏನೆಂದರೆ ಯಾವುದೇ ವಹಿವಾಟಿನ ವೇಳೆ ನಿಬಂಧನೆಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಯಾಕೆಂದರೆ ನಿಮ್ಮ ಒಂದು ವಹಿವಾಟಿನ ಮಾಹಿತಿ ಮಾರಾಟವಾಗುವ ಸುಳಿವು ಅದರಲ್ಲಿರುತ್ತದೆ'' ಎಂದು ಎಚ್ಚರಿಸುತ್ತಾರೆ ರೈನೆ. 

ಮೇಲಿನ ಅಂಶಗಳನ್ನು ಪ್ರಸ್ತಾಪಿಸುತ್ತಾ ಮುಖ್ಯ­ವಾದ ಎರಡು ಸಮಸ್ಯೆಗಳ ಬಗ್ಗೆ ಗಮನಸೆಳೆಯಲು ಪ್ರಯತ್ನಿ­ಸಿದ್ದೇನೆ. ಬ್ಯಾಂಕ್‌ ಖಾತೆಗಳನ್ನು ಹೊಂದದವರೂ, ಹೊಂದಿದ್ದರೂ ಸಣ್ಣ ಪ್ರಮಾಣದ ಗಳಿಕೆಯ ಕಾರಣಕ್ಕೆ ಬಳಸದವರೂ ಹೇಗೆ ಕ್ಯಾಷ್‌ಲೆಸ್‌ ಆರ್ಥಿಕತೆಯ ಭಾಗ­ವಾ­ಗುತ್ತಾರೆ ಎಂಬ ಅನುಮಾನಗಳು ಉಳಿಯುತ್ತವೆ. 

ಕಪ್ಪು ಹಣ ಅಕ್ರಮವಾಗಿ ಸಂಗ್ರಹವಾಗುತ್ತದೆ ಎಂದು ಹೇಳುವ ಜನ, ಎಲೆಕ್ಟ್ರಾನಿಕ್‌ ರೂಪದಲ್ಲಿ ವಹಿವಾಟಾಗುವ ಅಥವಾ ಸಂಗ್ರಹವಾಗುವ ಹಣಕ್ಕೆ ಅನಾಮಿಕತೆಯ ರೂಪ ಕೊಡಲು ಕಷ್ಟವಾಗದು ಎಂಬುದು ಇನ್ನೂ ತಿಳಿದಂ­ತಿಲ್ಲ. ಭೌತಿಕವಾಗಿ ಕೈಯಲ್ಲಿ ಸಿಗುವ ಹಣಕ್ಕೆ ಲೆಕ್ಕ ಕೇಳಲು ಸಾಧ್ಯ ಆದರೆ, ಕಾಣದಿರುವ ಹಣದ ಕುರಿತು ಯಾರಿಗೂ ಪ್ರಶ್ನಿಸುವ, ತಿಳಿಯುವ ಅವಕಾಶ ಇಲ್ಲದೇ ಹೋಗಬಹುದು ಎಂಬುದು ಈ ಹೊಸ ಹೆಜ್ಜೆಯ ಬಗೆಗಿನ ತಾತ್ವಿಕ ತಕರಾರು. ಪ್ರಜಾಪ್ರಭುತ್ವ ಎಲ್ಲರನ್ನೂ ಸಮಾನವಾಗಿ ಕಾಣು­ತ್ತದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ, ಭಿನ್ನ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಿನ್ನೆಲೆಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕನನ್ನು ಸಮಾನವಾಗಿ ಕಾಣುತ್ತದೆ. ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಆಲೋಚನೆಗಳನ್ನೇ ಬೆಂಬಲಿಸುತ್ತದೆ. 

ನಗದು ಕೂಡ ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲ­ರನ್ನೂ ಒಳಗೊಳ್ಳುವ ವಿಧಾನ. ಅದರೆ ಕ್ಯಾಷ್‌'ಲೆಸ್‌ ವ್ಯವ­ಸ್ಥೆ­ಯಲ್ಲಿ ಎರಡು ವರ್ಗಗಳನ್ನು ಸೃಷ್ಟಿಸುವ ಅಪಾ­ಯ­ವಿದೆ ಎಂದು ಆರ್ಥಿಕ ತಜ್ಞರು ಅನುಮಾನಿಸುತ್ತಿ­ದ್ದಾರೆ. ಕೇಂದ್ರ ಸರ್ಕಾರದ ಕಾಳಜಿ ಏನು ಎಂಬುದು ಕೆಲವೇ ದಿನಗಳಲ್ಲಿ ಬಯಲಾಗುತ್ತದೆ. ಆಗ ಇದು ಜನ­ಪ­ರ­ವೋ, ಜನವಿರೋಧಿಯೋ ಎಂಬುದೂ ಸ್ಪಷ್ಟವಾಗುತ್ತದೆ.