ಬೆಂಗಳೂರು [ಆ.26]:  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ ಮತ್ತು ಮಾನಸಿಕ ಹಿಂಸೆ ಸಹಿಸಿಕೊಳ್ಳಲಾಗದೆ ಕೆಫೆ ಕಾಫಿ ಡೇ ಸಂಸ್ಥಾಪಕ ಉದ್ಯಮಿ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆಯಾದರೂ ಉದ್ಯಮಿಗಳಿಗೆ ವಿನಾ ಕಾರಣ ತೊಂದರೆ ನೀಡದಿರುವಂತೆ ಕೇಂದ್ರ ಸರ್ಕಾರಕ್ಕೆ ಭಗವಂತ ಸದ್ಬುದ್ದಿ ನೀಡಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮಲೆನಾಡಿನ ಸಂಘ ಸಂಸ್ಥೆಗಳ ಒಕ್ಕೂಟ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ವಿ.ಜೆ.ಸಿದ್ಧಾರ್ಥ ಹೆಗ್ಡೆ ಅವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಅಧೀನಲ್ಲಿರುವ ಸಂಸ್ಥೆಗಳು ನೀಡುವ ಕಿರುಕುಳದಿಂದಾಗಿ ನಮ್ಮ ದೇಶ ಒಬ್ಬ ಅತ್ಯತ್ತಮ ಉದ್ಯಮಿಯನ್ನು ಕಳೆದುಕೊಂಡಂತಾಗಿದೆ. ಇನ್ನು ಮುಂದೆಯಾದರೂ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವವರಿಗೆ ತೊಂದರೆ ನೀಡುವುದನ್ನು ಕಡಿಮೆ ಮಾಡಲಿ ಎಂದರು.

ವಿಧಾನ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಮಾತನಾಡಿ, ಸಂವಿಧಾನ ಬದ್ಧವಾಗಿ ಸ್ಥಾಪಿತವಾಗಿರುವ ಸಂಸ್ಥೆಗಳು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವ ಜನರ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ದಿವಾಳಿಯಾಗಿರುವವರು ಮತ್ತು ದೇಶ ಬಿಟ್ಟು ಹೋಗಿರುವವರಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿವೆ ಎಂದರು.

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಹೇಮಚಂದ್ರ ಸಾಗರ್‌, ಮಲೆನಾಡಿನ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಾದ ಎಂ.ಜೆ.ಮಣಿ ಹೆಗಡೆ, ಕೆ.ಟಿ.ನಾಗರಾಜ್‌ ಮತ್ತಿತರರಿದ್ದರು.

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರನ್ನು ರಾಜ್ಯಸಭೆಯಲ್ಲಿ ನೋಡಬೇಕು ಎಂಬ ಆಸೆಯಿತ್ತು. ಇದೇ ಕಾರಣದಿಂದ ಎರಡು ಬಾರಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು ಪಕ್ಷದ ವರಿಷ್ಠರ ಜೊತೆ ಚರ್ಚೆ ನಡೆಸಿದ್ದೆ. ಆದರೆ, ರಾಜಕೀಯ ನನಗೆ ಬೇಡ, ನೆಮ್ಮದಿ ಜೀವನ ನಡೆಸಿದರೆ ಸಾಕು ಎಂದು ಹೇಳಿ ಅವರು ನಿರಾಕರಿಸಿದರು.

-ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ.