ಕೊಲಂಬೋ: 253 ಜನರನ್ನು ಬಲಿ ಪಡೆದ ಸರಣಿ ಸ್ಫೋಟದ ಆಘಾತ ಮಾಯುವ ಮುನ್ನವೇ, ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ನಂಟು ಇರುವ ಉಗ್ರರು ಭಾರೀ ಆಳವಾಗಿ ಬೇರುಬಿಟ್ಟಿರುವ ಬಗ್ಗೆ ಗಂಭೀರ ಸಾಕ್ಷ್ಯಗಳು ಶುಕ್ರವಾರ ಲಭ್ಯವಾಗಿದೆ. ಖಚಿತ ಮಾಹಿತಿ ಮೇರೆಗೆ ವಿಶೇಷ ಕಾರ್ಯಪಡೆಯ ಪೊಲೀಸರು ಶುಕ್ರವಾರ ಸೈಂತಮರುತು ಎಂಬ ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿದ್ದು ಈ ವೇಳೆ ಭಾರೀ ಪ್ರಮಾಣದ ಸ್ಫೋಟಕ ಪದಾರ್ಥಗಳು ಪತ್ತೆಯಾಗಿವೆ. ಜೊತೆಗೆ ಸ್ಥಳದಲ್ಲಿ ಬಾಂಬ್‌ ಅಳವಡಿಸಿದ ಜಾಕೆಟ್‌ ಕೂಡಾ ಸಿಕ್ಕಿರುವ ಹಿನ್ನೆಲೆಯಲ್ಲಿ, ಇದು ಆತ್ಮಾಹತ್ಯಾ ಬಾಂಬರ್‌ಗಳು ತೊಡುವ ಜಾಕೆಟ್‌ಗಳನ್ನು ತಯಾರಿಸುವ ಫ್ಯಾಕ್ಟರಿ ಇರಬಹುದು ಎಂದು ಶಂಕಿಸಲಾಗಿದೆ.

ಭದ್ರತಾ ಪಡೆಗಳ ದಾಳಿಯ ಬೆನ್ನಲ್ಲೇ, ಮನೆಯೊಳಗಿದ್ದ ಒಂದಿಬ್ಬರು ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ತಮ್ಮನ್ನೇ ತಾವು ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಮತ್ತಷ್ಟುದಾಳಿಯ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂಬ ಸರ್ಕಾರದ ಎಚ್ಚರಿಕೆ ನಡುವೆಯೇ ಪತ್ತೆಯಾಗಿರುವ ಈ ಸ್ಫೋಟಕ ಸಾಮಗ್ರಿಗಳು, ದೇಶದ ಜನರು ಮತ್ತೆ ಬೆಚ್ಚಿಬೀಳುವಂತೆ ಮಾಡಿದೆ.

ಏನಾಯ್ತು?: ಉಗ್ರರು ಸ್ಫೋಟಕ ಪದಾರ್ಥಗಳನ್ನು ಸಂಗ್ರಹಿಸಿದ್ದಾರೆ ಎಂಬ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಸೈಂಥಮಾರುತು ಎಂಬ ನಗರದ, ಮುಸ್ಲಿಮರೇ ಹೆಚ್ಚಾಗಿರುವ ಪ್ರದೇಶದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯೊಳಗಿದ್ದ ಉಗ್ರರು, ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೆಲ ಹೊತ್ತಿನ ಬಳಿಕ ಅವರು ತಮ್ಮನ್ನೇ ತಾವು ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾರೆ. ಬಳಿಕ ಮನೆಯೊಳಗೆ ಪ್ರವೇಶಿಸಿ ಪರಿಶೀಲಿಸಿದ ವೇಳೆ ಮನೆಯಲ್ಲಿ ಐಸಿಸ್‌ ಧ್ವಜ, 150 ಜಿಲೆಟಿನ್‌ ಕಡ್ಡಿಗಳು, ಡ್ರೋನ್‌ ಕ್ಯಾಮೆರಾ, 1 ಲಕ್ಷಕ್ಕೂ ಹೆಚ್ಚು ಬಾಲ್‌ ಬೇರಿಂಗ್‌ ಮತ್ತು ಒಂದು ಆತ್ಮಾಹುತಿ ಜಾಕೆಟ್‌ ಪತ್ತೆಯಾಗಿದೆ.

ಅಲ್ಲದೆ ಇತ್ತೀಚಿನ ದಾಳಿಗೂ ಮುನ್ನ ಎಲ್ಲಾ ಆತ್ಮಾಹುತಿ ದಾಳಿಕೋರರು, ತಾವು ದಾಳಿ ನಡೆಸುತ್ತಿರುವ ಕುರಿತ ಘೋಷಣೆ ಮಾಡಿ, ಅದರ ವಿಡಿಯೋ ಶೂಟ್‌ ಮಾಡಿದ್ದು ಇದೇ ಮನೆಯಲ್ಲಿ ಎಂಬುದು ಖಚಿತಪಟ್ಟಿದೆ.