ಇಷ್ಟಕ್ಕೂ ಈ ನಟಿಗೆ ಹರಿಹರಪುರದಲ್ಲೇನು ಕೆಲಸ? ಹಾಲಿವುಡ್ ಟು ಹರಿಹರಪುರದ ನಡುವೆ ಹುಟ್ಟಿಕೊಂಡಿರುವ ಒಂದು ಆಸಕ್ತಿಕರ ಕತೆ ಇಲ್ಲಿದೆ.
-ಆರ್.ಕೇಶವಮೂರ್ತಿ
ಬೆಂಗಳೂರು(ಮಾ.13): ಎಲ್ಲಿಯ ಹರಿಹರಪುರ, ಎಲ್ಲಿಯ ಹಾಲಿವುಡ್. ಆದರೂ ಆಗಾಗ ಕರ್ನಾಟಕದ ಶೃಂಗೇರಿ ಬಳಿ ಇರುವ ಹರಿಹರಪುರಕ್ಕೆ ಹಾಲಿವುಡ್ ನಟಿಯೊಬ್ಬರು ಬಂದು ಹೋಗುತ್ತಿದ್ದಾರೆ. ಈಗಾಗಲೇ ಗುಟ್ಟಾಗಿ ಮೂರು ಬಾರಿ ಬಂದು ಹೋಗಿರುವ ಈಕೆ ಮತ್ತೊಮ್ಮೆ ಹರಿಹರಪುರಕ್ಕೆ ಆಗಮಿಸಿರುವ ಈ ನಟಿಯ ಹೆಸರು ಇಸಾಬೆಲ್ ಲುಕಾಸ್.
ಇಷ್ಟಕ್ಕೂ ಈ ನಟಿಗೆ ಹರಿಹರಪುರದಲ್ಲೇನು ಕೆಲಸ? ಹಾಲಿವುಡ್ ಟು ಹರಿಹರಪುರದ ನಡುವೆ ಹುಟ್ಟಿಕೊಂಡಿರುವ ಒಂದು ಆಸಕ್ತಿಕರ ಕತೆ ಇಲ್ಲಿದೆ. ಕಳೆದ ಏಳು ವರ್ಷಗಳಿಂದ ಹರಿಹರಪುರದಲ್ಲಿರುವ ಆರೋಗ್ಯ ನಿಕೇತನ ಆಯುರ್ವೇದಾಶ್ರಮದಲ್ಲಿ ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಗುಟ್ಟಾಗಿಯೇ ಬಂದು ಹೋಗಿದ್ದಾರೆ ಇಸಾಬೆಲ್ ಲುಕಾಸ್. ಈ ಬಾರಿಯೂ ಇದೇ ಆಯುರ್ವೇದಾಶ್ರಮಕ್ಕೆ ಬಂದಿದ್ದಾರೆ. ಹಾಲಿವುಡ್‌ನ ಒಬ್ಬ ಸ್ಟಾರ್ ನಟಿ ಇಲ್ಲಿಗೆ ಬರುತ್ತಿದ್ದಾರೆ ಎಂಬುದೇ ವಿಶೇಷ. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದಿರುವ ಈಕೆ ‘ಟ್ರಾನ್ಸ್ ಫಾರ್ಮರ್: ರಿವೇಂಜ್ ಆದಿ ಅಲೆನ್’, ‘ಡೇಬ್ರೇಕರ್ಸ್’, ‘ದಿ ಪೆಸಿಫಿಕ್’, ‘ರೆಡ್ ಡೌನ್’, ‘ದಸ್ ನಾಟ್ ಮೀ’, ‘ದಿ ವೇಟಿಂಗ್ ಸಿಟಿ’ ಸೇರಿದಂತೆ 20ಕ್ಕೂ ಹೆಚ್ಚು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಈಕೆಗೆ ‘ಹೋಂ ಆ್ಯಂಡ್ ವೇ’ ಎನ್ನುವ ಧಾರಾವಾಹಿ ಹೆಸರು ತಂದು ಕೊಟ್ಟಿದೆ.
ಸಿನಿಮಾ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಂಡಿರುವ ಈ ಹಾಲಿವುಡ್ ನಟಿಗೆ ಹರಿಹರಪುರದಲ್ಲಿ ಡಾ ಅಶ್ವಿನ್ ಶಾಸಿ ಅವರ ಆರೋಗ್ಯ ನಿಕೇತನ ಆಯುರ್ವೇದಾಶ್ರಮ ಅಂದರೆ ಪಂಚಪ್ರಾಣ. ಕಳೆದ ಒಂದು ವಾರದಿಂದ ಹರಿಹರಪುರ, ಶೃಂಗೇರಿಯ ವಾತಾವರಣವೇ ಇವರ ವಾಸಸ್ಥಾನವಾಗಿದೆ. ತಾವೊಬ್ಬ ಹಾಲಿವುಡ್‌ನ ಸ್ಟಾರ್ ನಟಿ ಎನ್ನುವುದನ್ನು ಬದಿಗಿಟ್ಟು ತೀರಾ ಸಾಮಾನ್ಯ ಮಹಿಳೆಯಂತೆ ಓಡಾಡಿಕೊಂಡಿರುತ್ತಾರೆ. ಇಷ್ಟಕ್ಕೂ ಹಾಲಿವುಡ್ ನಟಿಗೆ ಹರಿಹರಪುರದಲ್ಲಿರುವ ಈ ಆಯುರ್ವೇದಾಶ್ರಮ ಗೊತ್ತಾಗಿದ್ದಾದರೂ ಹೇಗೆ? ಈ ಬಗ್ಗೆ ‘ಕನ್ನಡಪ್ರಭ’ ಜತೆಗೆ ಇಸಾಬೆಲ್ ಲುಕಾಸ್ ಅವರೇ ಮಾತನಾಡಿದ್ದಾರೆ. ಓವರ್ ಟು ಇಸಾಬೆಲ್ ಲುಕಾಸ್...
ಸ್ನೇಹಿತೆಕೊಟ್ಟಮಾಹಿತಿ
ಅವರ ಹೆಸರು ಜೂಲಿಯಾ ಸ್ಟೋನ್. ಪಾಪ್ ಗಾಯಕಿ. ನನ್ನ ಸ್ನೇಹಿತೆ. ಭಾರತ ಪ್ರವಾಸಕ್ಕೆ ಬಂದ ಈಕೆಯೂ ಹಾಲಿವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಒಮ್ಮೆ ಆಯುರ್ವೇದಿಕ್ ಚಿಕಿತ್ಸೆಗಳ ಕುರಿತು ಮ್ಯಾಗಜೀನ್‌ವೊಂದರಲ್ಲಿ ಬಂದ ಲೇಖನ ಓದುವಾಗ ಅವರಿಗೆ ಹರಿಹರಪುರದಲ್ಲಿರುವ ಆರೋಗ್ಯ ನಿಕೇತನ ಆಯುರ್ವೇದಾಶ್ರಮದ ವಿವರ ಸಿಕ್ಕಿದೆ. ಕುತೂಹಲದಿಂದ ಇಲ್ಲಿಗೆ ಭೇಟಿ ಕೊಟ್ಟ ಜೂಲಿಯಾ ಮುಂದೆ ಇದೇ ಆಯುರ್ವೇದಾಶ್ರಮಕ್ಕೆ ಹೋಗುವಂತೆ ನನಗೂ ಸೂಚಿಸಿದರು. ಸಿನಿಮಾ ಜೀವನ ಸಾಕಷ್ಟು ಒತ್ತಡಗಳು ತಂದಿಟ್ಟಿತು. ಜತೆಗೆ ಆರೋಗ್ಯದಲ್ಲೂ ಏರುಪೇರಾಗಿತ್ತು. ಇದರಿಂದ ಪಾರಾಗುವುದಕ್ಕೆ, ನೆಮ್ಮದಿಯ ಜೀವನಕ್ಕಾಗಿ ಕಾಯುತ್ತಿದ್ದ ನನಗೆ ಜೂಲಿಯಾ ಹೇಳಿದ ಈ ಆರೋಗ್ಯ ನಿಕೇತನ ಆಯುರ್ವೇದಾಶ್ರಮದ ಬಗ್ಗೆ ಕುತೂಹಲ ಬೆಳೆಸಿಕೊಂಡು ಇಲ್ಲಿಗೆ ಬಂದೆ.
ಈಗಆರೋಗ್ಯಜೀವನನನ್ನದು
2010ರಲ್ಲಿ ಇಲ್ಲಿಗೆ ಬಂದೆ. ಮೊದಲು ಬಂದಾಗಲೇ ಇಲ್ಲಿನ ವಾತಾವರಣ ತುಂಬಾ ಇಷ್ಟವಾಯಿತು. ಬಂದವಳು ಒಂದು ವಾರ ಇಲ್ಲೇ ಇದ್ದುಬಿಟ್ಟೆ. ನಂತರ ಬರುಬರುತ್ತ ಇಲ್ಲೇ ಎರಡ್ಮೂರು ವಾರ ಉಳಿದುಕೊಳ್ಳುವುದಕ್ಕೆ ಶುರು ಮಾಡಿದೆ. ಪಂಚಕರ್ಮ ಚಿಕಿತ್ಸೆ ಪಡೆಯುವ ಜತೆಗೆ ಇಲ್ಲಿನ ವಾತಾವರಣವನ್ನೇ ನನ್ನ ಮನೆಯಾಗಿಸಿಕೊಂಡು ಬದುಕಲು ಶುರು ಮಾಡಿದೆ. ಮೊದಲನೇ ಭೇಟಿಯ ಹೊತ್ತಿಗೆ ನನಗೆ ಆರೋಗ್ಯದ ಜತೆಗೆ ಸಂತೋಷಕರವಾಗಿ ಜೀವನ ನಡೆಸುವ ಉತ್ಸಾಹ ಈ ಚಿಕಿತ್ಸೆಯಿಂದ ಸಿಕ್ಕಿದೆ. ನನ್ನ ಪ್ರಕಾರ ಆಯುರ್ವೇದ ಚಿಕಿತ್ಸೆ ಅಂದ್ರೆ ಅದು ಭಾರತದಲ್ಲಿ ಮಾತ್ರ ಸಿಗುವುದು. ಬೇರೆ ದೇಶಗಳಲ್ಲಿ ಇದ್ದರೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವ ಸಂತೋಷ ಬೇರೆ ಕಡೆ ದೊರೆಯುವುದಿಲ್ಲ. ಈ ಕಾರಣಕ್ಕೆ ನಾನು ಈ ಆರೋಗ್ಯ ನಿಕೇತನ
ಆಯುರ್ವೇದಾಶ್ರಮವನ್ನು ಆಯ್ಕೆ ಮಾಡಿಕೊಂಡೆ. ಇಲ್ಲಿಗೆ ಬಂದ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ನೆಮ್ಮದಿ ಸಿಕ್ಕಿದೆ.
ಇಲ್ಲೇಚಿತ್ರಕಥೆಗಳನ್ನುಓದುವೆ
ಚಿತ್ರೀಕರಣದ ನಡುವೆ ಅಥವಾ ಸಿನಿಮಾ ಒಪ್ಪಿಕೊಳ್ಳುವಾಗ ಸಮಯದಲ್ಲಿ ಇಲ್ಲಿಗೆ ಬಂದು ನಾಲ್ಕೈದು ವಾರ ಉಳಿದುಕೊಂಡರೆ ನನ್ನ ಸಿನಿಮಾ ಕೆರಿಯರ್‌ಗೆ ಯಾವುದೇ ಸಮಸ್ಯೆ ಆಗಲ್ಲ. ಯಾಕೆಂದರೆ ಚಿಕಿತ್ಸೆಯ ನಡುವೆ ಇಲ್ಲೇ ಚಿತ್ರಕಥೆಗಳನ್ನು ಓದುತ್ತೇನೆ. ಒಪ್ಪಿಕೊಂಡ ಸಿನಿಮಾಗಳು, ಒಪ್ಪಿಕೊಳ್ಳುವ ಹಂತದಲ್ಲಿರುವ ಸಿನಿಮಾಗಳ ಸ್ಕ್ರಿಪ್ಟ್‌ಗಳನ್ನು ಬರುವಾಗಲೇ ಇಲ್ಲಿಗೆ ತಂದು ಓದುತ್ತೇನೆ. ಇಲ್ಲಿಂದಲೇ ನಿರ್ದೇಶಕರ ಜತೆಗೆ ಮಾತನಾಡಿಕೊಂಡು ಚಿತ್ರಕಥೆಗಳ ಬಗ್ಗೆ ಚರ್ಚಿಸುತ್ತೇನೆ. ಸದ್ಯ ಈಗ ಮೂರು ಸಿನಿಮಾಗಳು ಕೈಯಲ್ಲಿವೆ. ಎರಡು ಚಿತ್ರಗಳ ಸ್ಕ್ರಿಪ್ಟ್ ನೀಡಿದ್ದರು. ಅವುಗಳನ್ನು ಓದುತ್ತಿದ್ದೇನೆ. ಓದುವ ಜತೆಗೆ ಹರಿಹರಪುರ, ಶೃಂಗೇರಿಯಲ್ಲಿ ಸುತ್ತಾಡುತ್ತೇನೆ. ಶೃಂಗೇರಿಗೆ ಭೇಟಿ ಕೊಟ್ಟ ಮೇಲೆ ನನಗೆ ಗಾಡ್ ಈಸ್ ಪವರ್‌ುಲ್ ಅಂತ ಗೊತ್ತಾಯಿತು. ನನಗೆ ಭಾರತೀಯ ಸಿನಿಮಾಗಳ ಬಗ್ಗೆ ಹೆಚ್ಚು ಗೊತ್ತಿಲ್ಲ. ಇಲ್ಲಿಗೆ ಬಂದಾಗ ಒಂದೆರಡು ಬಾಲಿವುಡ್ ಸಿನಿಮಾಗಳನ್ನು ನೋಡಿದ್ದೇನೆ ಅಷ್ಟೆ. ಇದರ ಹೊರತಾಗಿ ‘ಸ್ಲಂಡಾಗ್ ಮಿಲೇನಿಯರ್’ ಚಿತ್ರವನ್ನು ನೋಡಿದ್ದೇನೆ.
(ಕನ್ನಡಪ್ರಭ ವಾರ್ತೆ)
