ಈ ಹಿಂದೆ ದಕ್ಷಿಣ ಚೀನಾ ಸಮುದ್ರ ವಿವಾದ ಸೃಷ್ಟಿಯಾದಾಗಲೂ ಇದೇ ತಂತ್ರಗಳನ್ನು ಚೀನಾ ಬಳಸಿಕೊಂಡಿತ್ತು. ಅವನ್ನೇ ಈಗ ಭಾರತದ ಮೇಲೂ ಪ್ರಯೋಗಿಸುತ್ತಿದೆ ಎಂದು ಭಾರತದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ(ಆ.14): ಭೂತಾನ್‌ಗೆ ಸೇರಿದ, ಸಿಕ್ಕಿಂ ಸಮೀಪದ ವಿವಾದಿತ ಡೋಕ್ಲಾಮ್ ಪ್ರದೇಶ ವಿಚಾರವಾಗಿ ಭಾರತಕ್ಕೆ ಒಂದರ ಹಿಂದರಂತೆ ಬೆದರಿಕೆ ಹಾಕುತ್ತಿರುವ ಚೀನಾ, ತನ್ನ ‘ಮೂರು ಸಮರ’ ತಂತ್ರಗಳನ್ನು ಪ್ರಯೋಗಿಸಲು ಆರಂಭಿಸಿರುವಂತಿದೆ.
ಯಾವುದೇ ದೇಶದ ಜತೆ ಸಂಘರ್ಷ ಉದ್ಭವವಾದಾಗ ಸಾರ್ವಜನಿಕ ಅಭಿಪ್ರಾಯ/ಮಾಧ್ಯಮಗಳನ್ನು ಬಳಸಿಕೊಂಡು ಸಮರ ಸಾರುವುದು, ಮಾನಸಿಕ ಯುದ್ಧಕ್ಕಿಳಿಯುವುದು ಹಾಗೂ ಕಾನೂನು ಸಮರಕ್ಕಿಳಿಯುವುದು ಚೀನಾದ ಈ 3 ತಂತ್ರಗಾರಿಕೆ.
ಈ ಹಿಂದೆ ದಕ್ಷಿಣ ಚೀನಾ ಸಮುದ್ರ ವಿವಾದ ಸೃಷ್ಟಿಯಾದಾಗಲೂ ಇದೇ ತಂತ್ರಗಳನ್ನು ಚೀನಾ ಬಳಸಿಕೊಂಡಿತ್ತು. ಅವನ್ನೇ ಈಗ ಭಾರತದ ಮೇಲೂ ಪ್ರಯೋಗಿಸುತ್ತಿದೆ ಎಂದು ಭಾರತದ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದಾಗ ಚೀನಾದ ಸರ್ಕಾರಿ ಮಾಧ್ಯಮಗಳು, ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ವಿದೇಶಾಂಗ ಮಂತ್ರಿಗಳು ಭಾರತದ ಮೇಲೆ ಮುಗಿಬಿದ್ದು ಹೇಳಿಕೆ, ಪ್ರಕಟಣೆಗಳು ಹಾಗೂ ಅಭಿಪ್ರಾಯಗಳನ್ನು ನೀಡಿದರು. ಡೋಕ್ಲಾಮ್ ತಮಗೆ ಸೇರಿದ್ದು ಎನ್ನುವ ಮೂಲಕ ಭಾರತವೇ ಅತಿಕ್ರಮಣ ಮಾಡಿದೆ ಎಂದು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಪರ ಅಭಿಪ್ರಾಯ ಸೃಷ್ಟಿಸಲು ಯತ್ನಿಸಿದರು. ಚೀನಾವನ್ನು ಎದುರು ಹಾಕಿಕೊಳ್ಳದಂತೆ ಭಾರತೀಯರು ತಮ್ಮ ಸರ್ಕಾರದ ಮೇಲೆ ಒತ್ತಡ ತರಲಿ ಎಂಬುದು ಆ ದೇಶದ ಗುರಿಯಾಗಿತ್ತು.
ಇನ್ನು ಸುಷ್ಮಾ ಅವರನ್ನು ಸುಳ್ಳುಗಾರ್ತಿ ಎಂದು ಟೀಕಿಸಿ, ಭಾರತಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಎಚ್ಚರಿಸಿ, ಜಮ್ಮು-ಕಾಶ್ಮೀರವನ್ನು ಪ್ರಸ್ತಾಪಿಸುವ ಮೂಲಕ ಮಾನಸಿಕವಾಗಿ ಭಾರತವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿತು. ಆದರೆ ಭಾರತದ ತಣ್ಣನೆಯ ಪ್ರತಿಕ್ರಿಯೆ ಚೀನಾಕ್ಕೆ ಭಾರಿ ಆಘಾತ ಕೊಟ್ಟಿದೆ. ಸರ್ಕಾರವಿರಲಿ, ಪ್ರತಿಪಕ್ಷಗಳೂ ಕೂಡ ಚೀನಾ ಬೆದರಿಕೆಗೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಗುಂಡು ಹಾರಿಸದೇ ಒಂದು ದೇಶವನ್ನು ಮಣಿಸುವ ಚೀನಾದ ತಂತ್ರಗಾರಿಕೆ ಬಹುತೇಕ ವಿಫಲವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
