ಬೆಂಗಳೂರು[ಸೆ.28]: ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡುತ್ತಿದೆ. ರಸ್ತೆಯಲ್ಲಿ ನಿಂತಿದ್ದ ನೀರನ್ನು ಟ್ರಾಫಿಕ್ ಪೊಲೀಸ್ ತಾನೇ ಖುದ್ದು ಹಾರೆ ಮೂಲಕ ತೆರವುಗೊಳಿಸುತ್ತಿರುವ ವಿಡಿಯೋ ಇದಾಗಿದೆ. 

ಹೌದು ಬೆಂಗಳೂರಿನ ರಸ್ತೆಯೊಂದರಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನರು ಪರದಾಡಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ತಾಣೆ ಒಂದು ಹಾರೆಯನ್ನು ಹಿಡಿದು ಈ ನೀರನ್ನು ಚರಂಡಿಗೆ ಬಿಡಿಸಿ ಕೊಟ್ಟಿದ್ದಾರೆ. ಹಲವಾರು ಮಂದಿ ಈ ವಿಡಿಯೋವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ, ಈ ಪೊಲೀಸ್ ಅಧಿಕಾರಿಗೆ ಬಹುಮಾನ ನೀಡಬೇಕೆಂದು ವಿನಂತಿಸಿದ್ದಾರೆ. IPS ಅಧಿಕಾರಿ ಡಿ. ರೂಪಾ ಕೂಡಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಕಾರ್ಯವನ್ನು ಶ್ಲಾಫಿಸಿದ್ದಾರೆ.

ಈ ವಿಡಿಯೋವನ್ನು ರೀ ಟ್ವೀಟ್ ಮಾಡಿರುವ ಡಿ. ರೂಪಾ 'ಇದು ಪೊಲೀಸ್ ಅಧಿಕಾರಿಯ ಕೆಲಸವಲ್ಲ, ಆದ್ರೂ ಅವರದನ್ನು ಮಾಡಿದ್ದಾರೆ ಪೊಲೀಸರು ಒಳ್ಳೆಯ, ಕೆಟ್ಟ ಹಾಗೂ ಕೊಳಕು ಈ ಎಲ್ಲಾ ಗುಣ ಹಾಗೂ ಬಣ್ಣಗಳಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಇದನ್ನೂ ಮೀರಿ ಒಂದು ಹೆಜ್ಜೆ ಮುಂದಿಟ್ಟು, ತಮ್ಮ ಕೆಲಸಕ್ಕೂ ಮಿಗಿಲಾದದ್ದನ್ನು ಮಾಡುವಾಗ ಅವರನ್ನು ಶ್ಲಾಘಿಸಿ. ಹೀಗಂತ ಅವರು ತಪ್ಪು ಮಾಡಿದಾಗ ಪ್ರಶ್ನಿಸಬಾರದೆಂಬ ಅರ್ಥವಲ್ಲ. ಇವೆರಡನ್ನೂ ರೂಢಿಸಿಕೊಳ್ಳಿ' ಎಂದಿದ್ದಾರೆ.

ಇನ್ನು, ನಾಗರಿಕ ಇಲಾಖೆ ಮಾಡಬೇಕಾದ ಕೆಲಸ ಟ್ರಾಫಿಕ್ ಪೊಲೀಸ್ ಅಧಿಕಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಹಲವರು ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೇ ಇಂತಹ ಟ್ವೀಟ್ ಮಾಡಿದವರು ಬಿಬಿಎಂಪಿ ಖಾತೆಗೆ ಟ್ಯಾಗ್ ಮಾಡಿದ್ದಾರೆ.