ಗಣಿ ರೆಡ್ಡಿಯನ್ನು ಬಂಧಿಸಿದ್ದ ಅಧಿಕಾರಿ ರಾಜಕೀಯಕ್ಕೆ

First Published 6, Apr 2018, 10:22 AM IST
IPS Officer Contest Election
Highlights

ಗಾಲಿ ಜನಾರ್ದನ ರೆಡ್ಡಿ ಅವರ ಭದ್ರಕೋಟೆಯಂತಿದ್ದ ಬಳ್ಳಾರಿಗೆ ನುಗ್ಗಿ, ಅವರನ್ನು ಬಂಧಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ವಿ.ವಿ. ಲಕ್ಷ್ಮೇನಾರಾಯಣ ಅವರು ಆಂಧ್ರಪ್ರದೇಶದಲ್ಲಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ.

ಹೈದರಾಬಾದ್‌: ಗಾಲಿ ಜನಾರ್ದನ ರೆಡ್ಡಿ ಅವರ ಭದ್ರಕೋಟೆಯಂತಿದ್ದ ಬಳ್ಳಾರಿಗೆ ನುಗ್ಗಿ, ಅವರನ್ನು ಬಂಧಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ವಿ.ವಿ. ಲಕ್ಷ್ಮೇನಾರಾಯಣ ಅವರು ಆಂಧ್ರಪ್ರದೇಶದಲ್ಲಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ.

ಲಕ್ಷ್ಮೇನಾರಾಯಣ ಅವರು ಸಿಬಿಐ ಡಿಐಜಿ ಆಗಿದ್ದಾಗ ಓಬುಳಾಪುರಂ ಮೈನಿಂಗ್‌ ಕಂಪನಿ (ಒಎಂಸಿ) ಅಕ್ರಮ ಸಂಬಂಧ 2011ರ ಸೆ.5ರಂದು ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿ ನಿವಾಸದಿಂದಲೇ ಬಂಧಿಸಿ, ಹೈದರಾಬಾದ್‌ಗೆ ಕರೆದೊಯ್ದಿದ್ದರು. ಈ ಕಾರ್ಯಾಚರಣೆ ಬಳಿಕ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ರೆಡ್ಡಿ ಬ್ರದ​ರ್ಸ್ ಅಬ್ಬರವೇ ತಗ್ಗುವಂತಾಗಿತ್ತು. ಮೂರು ವರ್ಷಗಳ ಕಾಲ ರೆಡ್ಡಿ ಜೈಲಿನಲ್ಲಿರುವಂತಾಗಿತ್ತು. ಅಂದು ಅಸ್ತವ್ಯಸ್ತವಾದ ರೆಡ್ಡಿ ಅವರ ರಾಜಕೀಯ ಬದುಕು ಇನ್ನೂ ಸರಿ ಹೋಗಿಲ್ಲ.

ಮಹಾರಾಷ್ಟ್ರ ಕೇಡರ್‌ ಅಧಿಕಾರಿಯಾಗಿರುವ ಲಕ್ಷ್ಮೇನಾರಾಯಣ ಸದ್ಯ ಅಲ್ಲಿ ಹೆಚ್ಚುವರಿ ಡಿಜಿಪಿ ದರ್ಜೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕಾರಣ ಪ್ರವೇಶಿಸುವ ಸಲುವಾಗಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಅದು ಇನ್ನೂ ಅಂಗೀಕಾರವಾಗಬೇಕಾಗಿದೆ.

ರಾಜಕೀಯ ಪ್ರವೇಶಕ್ಕೆ ಲಕ್ಷ್ಮೇನಾರಾಯಣ ಅವರು ಬೇರೊಂದು ಪಕ್ಷ ಸೇರುತ್ತಾರಾ? ಸೇರಿದರೆ ಅದು ಯಾವ ಪಕ್ಷ? ಎಂಬ ಪ್ರಶ್ನೆಗಳು ಸೃಷ್ಟಿಯಾಗಿವೆ. ಈ ನಡುವೆ ಅವರು ಹೊಸ ಪಕ್ಷ ಕಟ್ಟುವ ಸಾಧ್ಯತೆಯೂ ಇದೆ.

ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಸ್ಥಾನ ತುಂಬಲು ಹಂಬಲಿಸುತ್ತಿದ್ದ ವೈಎಸ್ಸಾರ್‌ ಕಾಂಗ್ರೆಸ್ಸಿನ ಜಗನ್ಮೋಹನ ರೆಡ್ಡಿ ಅವರನ್ನೂ ಇದೇ ಲಕ್ಷ್ಮೇನಾರಾಯಣ ಬಂಧಿಸಿದ್ದರು. ಹೀಗಾಗಿ ಅವರು ಜಗನ್‌ ಪಕ್ಷ ಸೇರುವ ಸಾಧ್ಯತೆ ಇಲ್ಲ. ಒಂದು ವೇಳೆ ತೆಲುಗು ದೇಶಂ ಸೇರಿದರೆ ಜಗನ್‌ ಪಕ್ಷಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ತೆಲುಗು ದೇಶಂ ಪರವಾಗಿ ಸೇವೆಯಲ್ಲಿದ್ದಾಗ ಅವರು ಕೆಲಸ ಮಾಡಿದ್ದಾರೆ ಎಂಬ ಆರೋಪ ಎದುರಿಸಬೇಕಾಗುತ್ತದೆ. ಬಿಜೆಪಿಗೆ ಕಾರ್ಯಕರ್ತರ ಪಡೆ ಇಲ್ಲ. ಜತೆಗೆ ರಾಜ್ಯವನ್ನು ನಿರ್ಲಕ್ಷಿಸಿದ ಆಪಾದನೆಯನ್ನೂ ಎದುರಿಸುತ್ತಿದೆ. ಆದ ಕಾರಣ ಅವರು ಬಿಜೆಪಿ ಸೇರುವ ಸಂಭವವೂ ಕಡಿಮೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಜನಸೇನಾ ಸೇರುವ ಹಾಗೂ ಹೊಸ ಪಕ್ಷ ಕಟ್ಟುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಕಾಪು ಸಮುದಾಯಕ್ಕೆ ಸೇರಿದ ಲಕ್ಷ್ಮೇನಾರಾಯಣ ರಾಜಕಾರಣ ಪ್ರವೇಶದಿಂದ ತೆಲುಗುದೇಶಂನ ಮತ ಬ್ಯಾಂಕ್‌ ಆಗಿರುವ ಕಾಪು ಮತಗಳು ಕೊಂಚ ಪ್ರಮಾಣದಲ್ಲಿ ವಿಭಜನೆಯಾಗಬಹುದು ಎನ್ನಲಾಗುತ್ತಿದೆ. ಆಂಧ್ರದಲ್ಲಿ ಸಿಬಿಐ ಅಧಿಕಾರಿಯಾಗಿದ್ದಾಗ ಗಣಿ ರೆಡ್ಡಿ, ಜಗನ್‌ ಬಂಧಿಸಿದ್ದಲ್ಲದೆ, ಸತ್ಯಂ ಕಂಪ್ಯೂಟ​ರ್‍ಸ್ ಹಗರಣ, ವೈಎಸ್ಸಾರ್‌ ಹೆಲಿಕಾಪ್ಟರ್‌ ಪತನ ಪ್ರಕರಣಗಳ ಬಗ್ಗೆ ತನಿಖೆ ಮಾಡಿದ್ದರು.

loader