ಅತ್ಯಾಚಾರ ಎಸಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ವಿವಾದಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ವಾರಗಟ್ಟಲೆ ತಲೆಮರೆಸಿಕೊಂಡಿದ್ದಳು. ಮೊನ್ನೆಯಷ್ಟೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮ್ ರಹೀಮ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈಕೆ ಸಹಾಯ ಮಾಡಿದ್ದಾಳೆಂಬ ಕಾರಣಕ್ಕೆ ಹಾಗೂ ಬಾಬಾ ವಿರುದ್ಧ ಕೋರ್ಟ್‌ನ ತೀರ್ಪು ಬಂದಾಗ ನಡೆದ ಹಿಂಸಾಚಾರಕ್ಕೆ ಈಕೆಯ ಕುಮ್ಮಕ್ಕಿದೆ ಎಂಬ ಕಾರಣಕ್ಕೆ ಹನಿಪ್ರೀತ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅದಕ್ಕಿಂತ ಹೆಚ್ಚಾಗಿ ಈಕೆ ರಾಮ್ ರಹೀಮನ ಪುತ್ರಿಯಲ್ಲ, ಅನಧಿಕೃತ ಪತ್ನಿ ಎಂಬ ಆರೋಪವೂ ಇದೆ. ಈ ಎಲ್ಲದರ ಬಗ್ಗೆ ಬಂಧನಕ್ಕೂ ಮೊದಲು ಇಂಡಿಯಾ ಟುಡೇ ವಾಹಿನಿಗೆ ಆಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಇಡೀ ಪ್ರಕರಣದ ಬಗ್ಗೆ ಏನು ಹೇಳಬಯಸುತ್ತೀರಿ?

ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದು ಯಾವುದೂ ನಿಜವಲ್ಲ. ಇಡೀ ಪ್ರಕರಣದ ನಂತರ ನನ್ನ ಬಗ್ಗೆ ನನಗೇ ಭಯವಾಗುತ್ತಿದೆ. ನನ್ನ ಮಾನಸಿಕ ಸ್ಥಿತಿಯ ಬಗ್ಗೆ ನಾನೇನೂ ಹೇಳುವ ಪರಿಸ್ಥಿತಿಯಲ್ಲಿಲ್ಲ. ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಲಾಗಿದೆ. ಅದು ತಪ್ಪು. ಅನುಮತಿ ಪಡೆದೇ ನಾನು ಕೋರ್ಟ್ ಆವರಣದಲ್ಲಿದ್ದೆ. ಅಪ್ಪನ ಜೊತೆ ಇರಲು ಕೋರ್ಟ್ ಅನುಮತಿ ನೀಡಿತ್ತು. ಅದಿಲ್ಲದೆ ಅಂತಹ ಭದ್ರತಾ ವ್ಯವಸ್ಥೆಯ ಮಧ್ಯೆ ಮಹಿಳೆಯೊಬ್ಬಳು ಅಲ್ಲಿರಲು ಸಾಧ್ಯವಿತ್ತೇ?

ಗಲಭೆ ಎಬ್ಬಿಸಿ ಹಿಂಸಾಚಾರ ಎಸಗಿದ ಆರೋಪ ನಿಮ್ಮ ಮೇಲಿದೆ. ಆದರೂ ನಿಮ್ಮನ್ನು ನೀವು ಮುಗ್ಧೆ ಎಂದು ಹೇಳಿಕೊಳ್ಳುತ್ತೀರಲ್ಲ?

ನಾನೊಂದು ಪ್ರಶ್ನೆ ಕೇಳುತ್ತೇನೆ. ಒಬ್ಬ ಹುಡುಗಿ ಯಾರ ಬೆಂಬಲ ಅಥವಾ ಅನುಮತಿಯೂ ಇಲ್ಲದೆ ಅಷ್ಟೊಂದು ದೊಡ್ಡ ಪೊಲೀಸ್ ಸೈನ್ಯದ ಮಧ್ಯೆ ಏಕಾಂಗಿಯಾಗಿ ಹೋಗಬಹುದೇ? ಎಲ್ಲರೂ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಿದ್ದಾರೆ. ಜಗತ್ತಿಗೆ ಸತ್ಯ ಏನೆಂದು ತಿಳಿಸಲು ಬೇಕಾದ ಎಲ್ಲಾ ಸಾಕ್ಷ್ಯಗಳು ನನ್ನಲ್ಲಿವೆ. ಗಲಭೆಯಲ್ಲಿ ಭಾಗಿಯಾಗಿ ಹಿಂಸಾಚಾರಕ್ಕೆ ಕಾರಣನಾಗಿದ್ದೇನೆ ಎಂದು ನನ್ನ ಮೇಲೆ ಆರೋಪಿಸಲಾಗಿದೆ. ಆದರೆ ಆರೋಪಕ್ಕೆ ಎಲ್ಲಿ ಯಾದರೂ ಸಾಕ್ಷ್ಯವಿದೆಯೇ? ಗಲಭೆ ನಡೆದ ಸ್ಥಳದಲ್ಲಿ ನನ್ನನ್ನು ಯಾರಾದರೂ ಕಂಡಿದ್ದಾರಾ? ನಾನು ಮುಗ್ಧೆ. ನಾನು ಗಲಭೆ ನಡೆದ ಸ್ಥಳದಲ್ಲಿರಲಿಲ್ಲ.

ಹಾಗಾದರೆ ಹನಿಪ್ರೀತ್‌ಳನ್ನು ಒಬ್ಬ ಖಳನಾಯಕಿಯಂತೆ ಬಿಂಬಿಸಲಾಗಿದೆ ಅಲ್ಲವೇ?

ನಿಮಗೆ (ಮಾಧ್ಯಮಗಳಿಗೆ) ಇಡೀ ಪ್ರಕರಣದ ಮಾಹಿತಿ ಇದೆ. ನಾನು ಹೇಗೆ ತಪ್ಪಿತಸ್ಥೆ? ಮಗಳಾಗಿ ಏನೇನು ಮಾಡಬೇಕೋ ಅದನ್ನು ಮಾಡಿದ್ದೇನೆ. ಗಲಭೆಯಲ್ಲೂ ಭಾಗಿಯಾಗಿಲ್ಲ. ಎಲ್ಲಾ ಒಳ್ಳೆಯದಾಗುತ್ತದೆ, ನಾವು ನಿರಪರಾಧಿಗಳಾಗಿ ಆಶ್ರಮಕ್ಕೆ ಮರಳುತ್ತೇವೆಂದುಕೊಂಡು ಆವತ್ತು ಕೋರ್ಟ್‌ಗೆ ಹೋಗಿದ್ದೆವು. ಆದರೆ, ಕೋರ್ಟ್ ತೀರ್ಪು ನಮ್ಮ ವಿರುದ್ಧವಾಗಿತ್ತು. ತೀರ್ಪು ಕೇಳಿ ನಮಗೆ ಏನೂ ತೋಚದಾಯಿತು. ಆ ಪರಿಸ್ಥಿತಿಯಲ್ಲಿ ಸಂಚು ರೂಪಿಸಲು ಸಾಧ್ಯ ವೇ?

ಗುರ್ಮೀತ್ ರಾಮ್ ರಹೀಮ್ ಜೊತೆ ನಿಮ್ಮ ಸಂಬಂಧ ದ ಬಗ್ಗೆ ಏನು ಹೇಳುತ್ತೀರಿ?

ನೀವು ಅವರ ಮಗಳೋ ಅಥವಾ ಪತ್ನಿಯೋ? ತಂದೆ ಮತ್ತು ಮಗಳ ನಡುವೆ ಇರುವ ಈ ಪವಿತ್ರ ಬಂಧದ ಬಗ್ಗೆ ಕೆಲವರು ಪ್ರಶ್ನಿಸುತ್ತಿರುವುದು ಯಾಕೆಂದು ನನಗೆ ತಿಳಿಯುತ್ತಿಲ್ಲ. ಮಾಧ್ಯಮಗಳು ಹೇಗೆ ಈ ರೀತಿ ಬಿಂಬಿಸಿದವು ಎಂದು ನನಗೆ ಅಚ್ಚರಿಯಾಗುತ್ತಿದೆ. ತಂದೆ ಮಗಳ ಸಂಬಂಧವನ್ನು ಮಾಧ್ಯಮಗಳು ಹೇಗೆ ಕಲ್ಮಶವಾಗಿಸಿದವು? ಒಬ್ಬ ತಂದೆ ತನ್ನ ಮಗಳ ಮೇಲೆ ಕೈ ಇಡಬಾರದೇ? ಮಗಳು ತನ್ನ ತಂದೆಯನ್ನು ಪ್ರೀತಿಸಬಾರದೇ?

ನಿಮ್ಮ ಮಾಜಿ ಪತಿ ವಿಶ್ವಾಸ್ ಗುಪ್ತಾ ಸೇರಿದಂತೆ ನಿಮ್ಮವರೇ ನಿಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರಲ್ಲ?

ಯಾರು ನಮ್ಮವರು? ಅವರಿಗೆ ಏನು ವಿಶ್ವಾಸಾರ್ಹತೆಯಿದೆ? ನನ್ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಈಗ ನನಗೇನೂ ಅಲ್ಲ. ನಾನು ಅವರ ಬಗ್ಗೆ ಮಾತನಾಡಲು ಬಯಸುವುದಿಲ್ಲ.

ನೀವು ಅಪರಾಧಿ ಅಲ್ಲದಿದ್ದರೆ ಏಕೆ ಪೊಲೀಸರಿಂದ 37 ದಿನ ತಪ್ಪಿಸಿಕೊಂಡಿದ್ದಿರಿ?

ನಾನು ಖಿನ್ನತೆಗೆ ಒಳಗಾಗಿದ್ದೆ. ತಂದೆಯೊಂದಿಗೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದ ಹುಡುಗಿ ಜೈಲಿಗೆ ಹೋಗಬೇಕಾಗಿ ಬಂತು. ಆಕೆ ದೇಶದ್ರೋಹದ ಆರೋಪ ಹೊತ್ತಳು. ನನಗೆ ಕಾನೂನು ಪ್ರಕ್ರಿಯೆಗಳು ಗೊತ್ತಿಲ್ಲ. ತಂದೆ ಬಿಟ್ಟುಹೋದ ನಂತರ ನಾನು ಅಸಹಾಯಕಳಾದೆ. ನಾನು ಜನರ ಮಾರ್ಗದರ್ಶನದಂತೆ ನಡೆದೆ.

ನೀವು ಸಿನಿಮಾ ನಟಿಯಾಗಲು ರಾಮ್ ರಹೀಮರ ಅನುಯಾಯಿಯಾದರಾ?

ಅಂತಹ ಪ್ರಶ್ನೆಯೇ ಅಪ್ರಸ್ತುತ. ಚಿತ್ರನಟಿಯಾಗುವ ಉದ್ದೇಶದಿಂದ ನಾನು ಗುರೂಜಿಯನ್ನು ಹಿಂಬಾಲಿಸಿಲ್ಲ. ನನಗೆ ನಟಿಯಾಗಬೇಕೆಂಬ ಆಸೆಯೇ ಇಲ್ಲ. ನಾನು ಯಾವಾಗಲೂ ಕ್ಯಾಮರಾ ಹಿಂದೆ ಇರಲು ಬಯಸುವವಳು.

ಡೇರಾದಲ್ಲಿ ಅಸ್ಥಿಪಂಜರಗಳು ಕಂಡುಬಂದಿವೆ ಎಂಬ ವರದಿ ಬಗ್ಗೆ ಏನು ಹೇಳುತ್ತೀರಾ?

ಹೀಗೆ ಹೇಳುತ್ತಿರುವವರು ಡೇರಾ ಆವರಣದಲ್ಲಿ ಅಸ್ಥಿಪಂಜರಗಳನ್ನು ನೋಡಿದ್ದಾರಾ? ಇಲ್ಲಿಯವರೆಗೆ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ. ಅದೆಲ್ಲ ಕಟ್ಟುಕತೆಯಷ್ಟೇ. ಯಾವುದೂ ಸಾಬೀತಾಗಿಲ್ಲ. ನನ್ನ ತಂದೆ ತಪ್ಪಿತಸ್ಥ ಅಲ್ಲ. ಭವಿಷ್ಯದಲ್ಲಿ ಅವರು ನಿರ್ದೋಷಿಯಾಗಿ ಹೊರ ಬರಲಿದ್ದಾರೆ.

ಡೇರಾದ ಒಳಗೆ ಲೈಂಗಿಕ ಕಿರುಕುಳ ನಡೆಯುತ್ತಿತ್ತು ಎಂಬ ಬಗ್ಗೆ ಏನು ಹೇಳುತ್ತೀರಾ?

ಒಂದು ಪತ್ರವನ್ನು ಆಧಾರವಾಗಿಟ್ಟುಕೊಂಡು ಹೇಗೆ ನನ್ನ ತಂದೆ ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ? ನನ್ನ ತಂದೆ ಮುಗ್ಧರು. ಡೇರಾದಲ್ಲಿ ಯಾವೊಬ್ಬ ಮಹಿಳೆ ಮೇಲೂ ಲೈಂಗಿಕ ಕಿರುಕುಳ ನಡೆದಿಲ್ಲ. ಅಲ್ಲದೆ ಈ ಬಗ್ಗೆ ಡೇರಾದ ಇತರ ಯಾವ ಮಹಿಳೆಯ ಅಭಿಪ್ರಾಯವನ್ನೂ ಪೊಲೀಸರು ಪಡೆದಿಲ್ಲ. ಯಾರು ಈ ಆರೋಪ ಮಾಡಿದ್ದಾರೋ ಅವರು ಕೂಡಾ ಇದುವರೆಗೆ ಮುಖ್ಯವಾಹಿನಿಗೆ ಬಂದಿಲ್ಲ.

ಹಾಗಾದರೆ ನೀವೂ ಕಾನೂನಾತ್ಮಕವಾಗಿ ಮುಂದೆ ಸಾಗಲು ಬಯಸುತ್ತೀರಿ.

ಹೌದು. ನನಗೆ ಮತ್ತು ನನ್ನ ತಂದೆಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ. ಖಂಡಿತವಾಗಿಯೂ ನಮಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ಇದೆ. ನಾನು ಮತ್ತು ನನ್ನ ತಂದೆ ಮುಗ್ಧರು. ಸತ್ಯ ಶೀಘ್ರದಲ್ಲೇ ಹೊರಬೀಳಲಿದೆ. ನನ್ನ ಮತ್ತು ತಂದೆಯ ನಡುವಿನ ಸಂಬಂಧ ಪವಿತ್ರವಾದುದು. ಇಲ್ಲಿಯವರೆಗಿನ ಆಧಾರವಿಲ್ಲದ ಆರೋಪಗಳನ್ನು ನಂಬಬೇಡಿ.

ಇಷ್ಟು ದಿನ ನೀವು ಎಲ್ಲಿ ಅಡಗಿದ್ದಿರಿ?

ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿರಲಿಲ್ಲ. ನನ್ನನ್ನು ಯಾರೂ ಅಡಗಿಸಿಟ್ಟಿರಲಿಲ್ಲ. ತಂದೆಯ ಬಂಧನದ ನಂತರ ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ನಾನು ಖಿನ್ನತೆಗೆ ಒಳಗಾಗಿ, ಅಸಹಾಯಕಳಾಗಿದ್ದೆ. ನಂತರ ಹೇಗೋ ದೆಹಲಿಯನ್ನು ತಲುಪಿದೆ.