ಸತ್ಯ ಮಾಹಿತಿ ಕೊಟ್ಟ  ಮಹಾ ಅಧಿಕಾರಿಗೆ ಅಮಾನತು ಶಿಕ್ಷೆ ನೀಡಿದ ಸರ್ಕಾರ!.

ಮುಂಬೈ[ಡಿ.31]: ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಒಂದೂ ಸಭೆ ನಡೆಸದೇ ಅನುಮತಿ ಕೊಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರೊಬ್ಬರಿಗೆ ಉತ್ತರ ನೀಡಿದ್ದ ಅಧಿಕಾರಿಯನ್ನು ಮಹಾರಾಷ್ಟ್ರ ಸರ್ಕಾರ ಅಮಾನತುಗೊಳಿಸಿದೆ. ಅಧಿಕಾರಿಯ ಉತ್ತರದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಅವರು ತಪ್ಪು ಮಾಹಿತಿ ನೀಡಿದ ಕಾರಣ ಅಮಾನತು ಮಾಡಿರುವುದಾಗಿ ಸಮರ್ಥನೆ ಮಾಡಿದೆ. ಆದರೆ, ಸರಿ ಉತ್ತರ ಯಾವುದು, ಯಾವಾಗ
ಸಭೆ ನಡೆಯಿತು ಎಂಬುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರ್‌ಟಿಐ ಕಾರ್ಯಕರ್ತ ಜೀತೇಂದ್ರ ಘಾಡ್ಗೆ ಎಂಬುವರು ಬುಲೆಟ್ ರೈಲು ಮಾರ್ಗ ಯೋಜನೆಗೆ ಅನುಮತಿ ನೀಡಿದ ಸಮಿತಿಯ ಸಭೆಯ ವಿವರಗಳನ್ನು ಕೇಳಿದ್ದರು. ಇದಕ್ಕೆ ಉತ್ತರ ನೀಡಿದ್ದ ಸಾರಂಗ ಕುಮಾರ್ ಪಾಟೀಲ್ ಎಂಬ ಅಧಿಕಾರಿ, ಬುಲೆಟ್ ರೈಲು ಮಾರ್ಗ ಯೋಜನೆಗಾಗಿ 2017ರ ಫೆ.27ರಂದು ಗೃಹ ಇಲಾಖೆ ಉಪಸಮಿತಿಯೊಂದನ್ನು ರಚಿಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಮುಖ್ಯಸ್ಥರಾಗಿದ್ದರು. ಬುಲೆಟ್ ರೈಲು ಯೋಜನೆ ಕುರಿತು ಆಳವಾದ ಅಧ್ಯಯನ ನಡೆಸುವುದು ಸಮಿತಿಯ ಉದ್ದೇಶವಾಗಿತ್ತು. ಸೆ.12ರಂದು ಯೋಜನೆಗೆ ಅನುಮತಿ ನೀಡಲಾಯಿತು. ಈ ಆರು ತಿಂಗಳ ಅವಧಿಯಲ್ಲಿ ಸಮಿತಿಯ ಒಂದೇ ಒಂದು ಸಭೆ ನಡೆದಿಲ್ಲ ಎಂದು ಆರ್‌ಟಿಐನಡಿ ಮಾಹಿತಿ ನೀಡಿದ್ದರು