ಸಿಬಿಐ ಮಾಡಿರುವ ಆರೋಪಗಳನ್ನು ಇಂದ್ರಾಣಿ ಮತ್ತು ಪೀಟರ್ ಮುಖರ್ಜಿಯವರ ಪರ ವಕೀಲರು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಆರೋಪವನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ ಎಂದವರು ಹೇಳಿದ್ದಾರೆ.
ಮುಂಬೈ(ಜ. 17): ಭಾರೀ ಕುತೂಹಲ ಮೂಡಿಸಿರುವ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆಕೆಯ ತಾಯಿ ಇಂದ್ರಾಣಿ ಮುಖರ್ಜಿ ಹಾಗೂ ಮಲತಂದೆಯರಾದ ಪೀಟರ್ ಮುಖರ್ಜಿ ಮತ್ತು ಸಂಜೀವ್ ಖನ್ನಾ ಅವರ ವಿರುದ್ಧ ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡಿದೆ. ಕೋರ್ಟ್'ನಲ್ಲಿ ಆ ಮೂವರ ವಿರುದ್ಧ ಹತ್ಯೆ ಮತ್ತು ಕೊಲೆಸಂಚು ಆರೋಪಗಳ ಮೇಲೆ ಪ್ರಕರಣ ದಾಖಲಾಗಿದೆ. ಫೆಬ್ರವರಿ 1ರಿಂದ ಕೋರ್ಟ್'ನಲ್ಲಿ ವಿಚಾರಣೆ ನಡೆಯಲಿದೆ.
ಸಿಬಿಐ ಆರೋಪಿಸಿರುವ ಪ್ರಕಾರ, ಆಸ್ತಿ ವಿವಾದದಲ್ಲಿ ಶೀನಾ ಬೋರಾಳನ್ನು ಆಕೆಯ ತಾಯಿ ಇಂದ್ರಾಣಿ ಮುಖರ್ಜಿ ಹತ್ಯೆಗೈದಿದ್ದಾಳೆ. ಮುಂಬೈನ ಹೊರವಲಯದಲ್ಲಿ ಕಾರಿನೊಳಗೆ ಶೀನಾಳ ಕತ್ತುಹಿಸುಕಿ ಸಾಯಿಸಿದ್ದಾಳೆ. ಈ ವೇಳೆ, ಇಂದ್ರಾಣಿಯ ಎರಡನೇ ಪತಿ ಸಂಜೀವ್ ಖನ್ನಾ ಹಾಗೂ ಡ್ರೈವರ್ ಶ್ಯಾಮವರ್ ರಾಯ್ ಇದ್ದರೆನ್ನಲಾಗಿದೆ. ಶೀನಾ ಹತ್ಯೆಯಲ್ಲಿ ಇಂದ್ರಾಣಿಗೆ ಪೀಟರ್ ಮುಖರ್ಜಿ ಸಹಾಯ ಮಾಡಿದ್ದನೆಂದು ಸಿಬಿಐ ಆರೋಪಿಸಿದೆ. ಇಂದ್ರಾಣಿಯ ಮೂರನೇ ಪತಿ ಪೀಟರ್ ಮುಖರ್ಜಿಗೆ ಶೀನಾ ಹತ್ಯೆಯ ಕುರಿತು ಸಂಚು ರೂಪಿಸಿದ್ದೆಲ್ಲಾ ಮೊದಲಿಂದಲೂ ತಿಳಿದಿತ್ತು. ಆದರೂ ಅವರು ಏನೂ ಮಾಡದೇ ಸುಮ್ಮನಿದ್ದರೆನ್ನಲಾಗಿದೆ.
ಇದೇ ವೇಳೆ, ಸಿಬಿಐ ಮಾಡಿರುವ ಆರೋಪಗಳನ್ನು ಇಂದ್ರಾಣಿ ಮತ್ತು ಪೀಟರ್ ಮುಖರ್ಜಿಯವರ ಪರ ವಕೀಲರು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಆರೋಪವನ್ನು ಸಾಬೀತುಪಡಿಸಲು ಸಿಬಿಐ ವಿಫಲವಾಗಿದೆ ಎಂದವರು ಹೇಳಿದ್ದಾರೆ.
2015ರಲ್ಲಿ 24 ವರ್ಷದ ಶೀನಾ ಬೋರಾಳ ಅರೆಬೆಂದ ಮೃತದೇಹವು ಮುಂಬೈನ ಹೊರಗಿರುವ ಕಾಡಿನಲ್ಲಿ ಪತ್ತೆಯಾಗಿತ್ತು. ಆರಂಭದಿಂದಲೂ ತನಿಖಾ ಸಂಸ್ಥೆಗಳಿಗೆ ಇಂದ್ರಾಣಿ ಮುಖರ್ಜಿಯೇ ಪ್ರಮುಖ ಶಂಕಾಸ್ಪದ ವ್ಯಕ್ತಿಯಾಗಿದ್ದರು. ಅದೇ ವರ್ಷ ಆಗಸ್ಟ್'ನಲ್ಲಿ ಶೀನಾ ಬೋರಾಳನ್ನು ಬಂಧಿಸಲಾಗಿತ್ತು. ಕಳೆದ ವರ್ಷದ ನವೆಂಬರ್'ನಲ್ಲಿ ಪೀಟರ್ ಮುಖರ್ಜಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಇಂದ್ರಾಣಿಯ ಕಾರು ಚಾಲಕ ಶ್ಯಾಮ್'ವರ್ ರಾಯ್ ಸಿಬಿಐಗೆ ಅಪ್ರೂವರ್ ಆಗಿ ಬದಲಾಗಿದ್ದಾನೆ.
