ಕೆಎಸ್‌ಡಿಎಲ್ ಭ್ರಷ್ಟಾಚಾರ ಕುರಿತು ಶಾಸಕ ಎಚ್.ಟಿ.ಮಂಜು ಮಾಡಿರುವ ಆರೋಪ ಸುಳ್ಳಾಗಿದ್ದರೆ, ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು (ಡಿ.06): ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ (ಕೆಎಸ್‌ಡಿಎಲ್) ಭ್ರಷ್ಟಾಚಾರ ಕುರಿತು ಶಾಸಕ ಎಚ್.ಟಿ.ಮಂಜು ಮಾಡಿರುವ ಆರೋಪ ಸುಳ್ಳಾಗಿದ್ದರೆ, ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನನ್ನ ವಿರುದ್ಧವೂ ಮಂಜು ಅವರು ಅಕ್ರಮದ ಆರೋಪ ಮಾಡಿದ್ದು, ಈ ರೀತಿ ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕಬೇಕಾಗುತ್ತದೆ ಎಂದೂ ಅವರು ಗುಡುಗಿದ್ದಾರೆ.
ಜೆಡಿಎಸ್ ಶಾಸಕ ಎಚ್.ಟಿ.ಮಂಜು ಅವರು ಕೆಎಸ್‌ಡಿಎಲ್ ಗುತ್ತಿಗೆ ನೀಡುವ ವಿಚಾರದಲ್ಲಿ ಅಕ್ರಮ ನಡೆದಿರುವ ಕುರಿತು ಮಾಡಿರುವ ಆರೋಪಕ್ಕೆ ಉತ್ತರಿಸಿದ ಸಚಿವರು, ಕೆಎಸ್‌ಡಿಎಲ್‌ನಲ್ಲಿ ಅಕ್ರಮ ನಡೆದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮದಲ್ಲಿ ಸಚಿವರೂ ಪಾಲುದಾರರು ಎಂದು ಹೇಳಿದ್ದಾರೆ ಎಂಬ ಮಾಹಿತಿಯಿದೆ. ಅವರು ಏನು ಆರೋಪಿಸಿದ್ದಾರೆ ಎಂದು ತಿಳಿದಿಲ್ಲ. ಈ ರೀತಿ ಸುಳ್ಳು ಆರೋಪ ಮಾಡಿದರೆ ಒದ್ದು ಒಳಗೆ ಹಾಕುತ್ತೇನೆ. ಅಕ್ರಮದ ಆರೋಪದ ಬಗ್ಗೆ ಪರಿಶೀಲಿಸುತ್ತೇವೆ. ಇದು ಸುಳ್ಳಾಗಿದ್ದರೆ ಎಚ್.ಟಿ. ಮಂಜು ವಿರುದ್ಧ ಮಾನನಷ್ಟ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದರು.
ಮಾಡಾಳ್ ವಿರುಪಾಕ್ಷಪ್ಪ ಅಧ್ಯಕ್ಷರಾಗಿದ್ದಾಗಿನ ಕೆಎಸ್‌ಡಿಎಲ್ ಈಗಿಲ್ಲ. ಬಹಳ ದೊಡ್ಡದಾಗಿ ಬೆಳೆಸುತ್ತಿದ್ದೇವೆ. ಆದರೂ ಕೆಲ ತಿಮಿಂಗಲಗಳು ಕೆಎಸ್‌ಡಿಎಲ್ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಬೇಜವಾಬ್ದಾರಿ ಆರೋಪ ಮಾಡುವುದು ಸರಿಯಲ್ಲ. ಆ ರೀತಿ ಮಾಡುವುದನ್ನು ಸಹಿಸುವುದಿಲ್ಲ. ಅವರ ಎಲ್ಲ ಆರೋಪಕ್ಕೂ ಉತ್ತರ ನೀಡುತ್ತೇವೆ. ಇನ್ನೆರಡು ದಿನಗಳಲ್ಲಿ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಲಿಖಿತ ಉತ್ತರ ನೀಡಲಾಗುವುದು ಎಂದು ತಿಳಿಸಿದರು.
ಬಸವಾದಿ ಶರಣರ ಕೃತಿಗಳಿಗೆ ₹ 5 ಕೋಟಿ ದೇಣಿಗೆ
ಸಾಂಸ್ಕೃತಿಕ ನಾಯಕ ಬಸವಣ್ಣ ಸೇರಿ ಶರಣರು, ಅನುಭವ ಮಂಟಪದ ಚಿಂತನೆಗಳ ಬಗ್ಗೆ ಜಾಗತಿಕ ಮಟ್ಟದ ಕೃತಿ ಹೊರ ತರಲು 5 ಕೋಟಿ ರು. ದೇಣಿಗೆ ನೀಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು. ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ರಮಣಶ್ರೀ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ, ಅಂಕಣಕಾರ ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು-ಆಣಿ ಮುತ್ತು ಭಾಗ-15 ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಬಸವಾದಿ ಶರಣರು ಮತ್ತು ಅನುಭವ ಮಂಟಪದಲ್ಲಿನ ಚಿಂತನೆಗಳನ್ನು ಕುರಿತು ಆರು ಭಾಷೆಗಳಲ್ಲಿ ಜಾಗತಿಕ ಮಟ್ಟದ ಕೃತಿ ಹೊರತರಬೇಕು. ಇದಕ್ಕಾಗಿ 5 ಕೋಟಿ ರು. ದೇಣಿಗೆ ನೀಡಲಾಗುವುದು. ಅಗತ್ಯವಾದರೆ ಇನ್ನೂ 5 ಕೋಟಿ ರು. ನೀಡಲು ತಾವು ಸಿದ್ಧ. ಇದರಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

