ರಾಜಧಾನಿ ಬೆಂಗಳೂರಿನಲ್ಲಿ ತಮಿಳುನಾಡು ಮಾದರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುತ್ತಿರುವ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೊಂಚ ಬದಲಾವಣೆಗೆ ನಿರ್ಧರಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಬದಲು ಇಂದಿರಮ್ಮ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಲು ತೀರ್ಮಾನ ಮಾಡಿದೆ.
ಬೆಂಗಳೂರು (ಏ.30): ರಾಜಧಾನಿ ಬೆಂಗಳೂರಿನಲ್ಲಿ ತಮಿಳುನಾಡು ಮಾದರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುತ್ತಿರುವ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೊಂಚ ಬದಲಾವಣೆಗೆ ನಿರ್ಧರಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಬದಲು ಇಂದಿರಮ್ಮ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಲು ತೀರ್ಮಾನ ಮಾಡಿದೆ.
ಅಂದಹಾಗೆ ಗ್ರಾಮೀಣ ಪ್ರದೇಶದಲ್ಲಿ ಸದ್ಯಕ್ಕೆ ಎಲ್ಲಾ ಕಡೆ ಕ್ಯಾಂಟೀನ್ ಸ್ಥಾಪಿಸುವುದಿಲ್ಲ. ಬದಲಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗಾಗಲೇ ಪ್ರಸ್ತಾಪಿಸಿರುವ ರಿಯಾಯಿತಿ ದರದ ತಿನಿಸುಗಳ ಕ್ಯಾಂಟೀನ್‌ಗೇ ಇಂದಿರಮ್ಮ ಹೆಸರಿಡಲು ಮುಂದಾಗಿದೆ.
ರಾಜ್ಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಈ ಕ್ಯಾಂಟೀನ್ ಆರಂಭಿಸಲು ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಟೆಂಡರ್ ಪ್ರಕ್ರಿಯೆಗೂ ಮಂದಾಗಿದೆ.
ಔಷಧ, ಹಾಪ್‌ಕಾಮ್ಸ್, ನಂದಿನ ಹಾಲಿನ ಕೇಂದ್ರ, ಶೌಚಾಲಯ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಒಂದೇ ಸೂರಿನಡಿ ಬರುವಂತೆ ವಿಶೇಷ ಸಂಕೀರ್ಣಗಳ ನಿರ್ಮಾಣ ಮಾಡಿ ಅಲ್ಲಿ ಇಂದಿರಮ್ಮ ಕ್ಯಾಂಟೀನ್ ನಿರ್ಮಿಸಲಾಗುತ್ತದೆ. ಸದ್ಯ ೧೬ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತದೆ. ನಂತರ ೧೪೦ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತದೆ. ಇಂಥ ಕ್ಯಾಂಟೀನ್ ಆರಂಭಿಸುವ ಹೊಣೆಯನ್ನು ಆಸ್ಪತ್ರೆಯ ಸುರಕ್ಷಾ ಸಮಿತಿಗಳಿಗೇ ವಹಿಸಲಾಗಿದೆ. ಅವರೇ ಟೆಂಡರ್ ಆಹ್ವಾನಿಸಬಹುದು. ದರ ನಿಗದಿ ಮಾಡಬಹುದು. ಆದರೆ ಇಲಾಖೆ ನಿಗದಿ ಮಾಡಿದಂತೆ ₹೧೦ಗೆ ಇಡ್ಲಿ, ರೈಸ್ ಬಾತ್, ₹೫ ಚಹಾ, ಕಾಫಿ ಸೇರಿದಂತೆ ತಿಂಡಿ ತಿನಿಸುಗಳ ದರ ಕಡಿಮೆ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಡ ರೋಗಿಗಳಿಗೆ ಕಡಿಮೆ ದರದ ಔಷಧ, ಕಡಿಮೆ ದರ ಊಟ, ತಿಂಡಿ ತಿನಿಸು ಸಿಗಬೇಕೆಂದು ಕ್ಯಾಂಟೀನ್ ಸೌಲಭ್ಯ ಆರಂಭಿಸಲಾಗುತ್ತಿದೆ. ಅದಕ್ಕೆ ಯಾವ ಹೆಸರಿಡಬೇಕೆಂದು ಸರ್ಕಾರ ನಿರ್ಧರಿಸುತ್ತದೆ. ಒಟ್ಟಾರೆ ಉದ್ದೇಶ ಬಡ ರೋಗಿಗಳಿಗೆ ಸೌಲಭ್ಯ ನೀಡುವುದಾಗಿದೆ. ಇದು ಶೀಘ್ರವೇ ಆರಂಭವಾಗುತ್ತದೆ.
-ಶಾಲಿನಿ ರಜನೀಶ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ
