ನವದೆಹಲಿ (ಡಿ. 18): ಮೂರು ಬಾರಿ ಮಧ್ಯಪ್ರದೇಶದಲ್ಲಿ ಅನಾಯಾಸವಾಗಿ ಚುನಾವಣೆ ಗೆದ್ದುಕೊಂಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಈ ಬಾರಿ ನೋಟಾ ಲೆಕ್ಕಾಚಾರದಿಂದಾಗಿ ಸೋತಿದ್ದು ಕೇವಲ 4,337 ಮತಗಳಿಂದ. ಕಾಂಗ್ರೆಸ್‌ಗಿಂತ 42 ಸಾವಿರ ಮತಗಳನ್ನು ಜಾಸ್ತಿ ಪಡೆದರೂ ಕ್ಷೇತ್ರವಾರು ಲೆಕ್ಕ ಹಾಕಿದಾಗ ಅತ್ಯಂತ ತುರುಸಿನ 10 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡರೆ ಬಿಜೆಪಿ ಗೆದ್ದಿದ್ದು ಕೇವಲ ಮೂರು.

ಅಧಿಕಾರ ಸ್ವೀಕರಿಸುತ್ತಿದ್ದಂತೆ ರೈತರ ಸಾಲ ಮನ್ನಾಕ್ಕೆ ಸಹಿ ಹಾಕಿದ ಸಿಎಂ

ಲೆಕ್ಕಾಚಾರದ ಪ್ರಕಾರ 4337 ಮತಗಳನ್ನು ಹೆಚ್ಚು ಪಡೆದಿದ್ದರೆ ಸಾಕಿತ್ತು ಶಿವರಾಜ್ 120 ಸೀಟ್ ಪಡೆದಿರುತ್ತಿದ್ದರು. ಆದರೆ ಕಮಲನಾಥ್ ಅದೃಷ್ಟ ಗಟ್ಟಿಯಿತ್ತು ಅನಿಸುತ್ತದೆ. ಇಂದಿರಾರ ಮೂರನೇ ಪುತ್ರ 72 ನೇ ವಯಸ್ಸಿನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿರುವ ಕಮಲನಾಥ್ ಸಂಜಯ್ ಗಾಂಧಿ ಜೊತೆ ಡೂನ್ ಶಾಲೆಯಲ್ಲಿ ಓದಿದವರು.

ನುಡಿದಂತೆ ನಡೆದ ಕಾಂಗ್ರೆಸ್ : ಮೊದಲ ದಿನವೇ ರೈತರಿಗೆ ಬಂಪರ್

ಕಾನ್ಪುರದವರಾದ ಕಮಲನಾಥ್‌ರನ್ನು ಸಂಜಯ ಗಾಂಧಿ ಮಧ್ಯಪ್ರದೇಶದ ಚಿಂದ್ವಾರಾಕ್ಕೆ ಒಯ್ದು ಗೆಲ್ಲಿಸಿದ್ದರು. ಆಗ ಪ್ರಚಾರಕ್ಕೆ ಹೋದಾಗ ಇಂದಿರಾ ಗಾಂಧಿ ಹೇಳಿದ್ದು ‘ಕಮಲ್ ನನ್ನ ಮೂರನೇ ಮಗ’ ಎಂದು. ಇದಕ್ಕೆ ಮುಖ್ಯ ಕಾರಣ ತುರ್ತು ಪರಿಸ್ಥಿತಿ ನಂತರ ಬಂದ ಜನತಾ ಸರ್ಕಾರ ಕೆಡವುವಲ್ಲಿ ಕಮಲನಾಥ್ ವಹಿಸಿದ ಪಾತ್ರ. ಮೊರಾರ್ಜಿ ಭಾಯಿ ಸರ್ಕಾರದ ವಿರುದ್ಧ ಮೊದಲ ದಿನದಿಂದಲೇ ರಾಜನಾರಾಯಣ್‌ರನ್ನು ಭೇಟಿ ಆಗಲು ಆರಂಭಿಸಿದ ಕಮಲನಾಥ್ ಸೂಕ್ತ ಸಂದರ್ಭ ಬಂದಾಗ ಚೌಧರಿ ಚರಣ್ ಸಿಂಗ್‌ರಿಗೆ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಲು ಸಿದ್ಧವಿದೆ ಎಂದು ನಂಬಿಸಿದರು.

ವೈರಲ್ ಚೆಕ್| ರೈತರ ಸಾಲಮನ್ನಾ: ಗೆದ್ದಾಕ್ಷಣ ಉಲ್ಟಾಹೊಡೆದ ರಾಹುಲ್‌ ಗಾಂಧಿ!?

ಕಮಲ್ ಮಾತನ್ನು ನಂಬಿ ಹೊರಗೆ ಬಂದ ಚರಣ್ ಸಿಂಗ್‌ರಿಗೆ ಪಾರ್ಲಿಮೆಂಟ್‌ಗೆ ಹೋಗಲೂ ಅವಕಾಶ ನೀಡದೆ, ಸರ್ಕಾರ ಕೆಡವಿ ಮುಂದಿನ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭರ್ಜರಿ ಜಯ ಸಾಧಿಸಿದ್ದರು. ಹೀಗೆ ಕಮಲ್ ಮಾಡಿದ ಸಹಾಯಕ್ಕಾಗಿ ಇಂದಿರಾಗಾಂಧಿ ಮೂರನೇ ಮಗ ಎಂದು ಕರೆಯುತ್ತಿದ್ದರು.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ