ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯನ್ನು ಉಳಿಸಿಕೊಂಡಿದೆ. ಮೊದಲ ದಿನವೇ ತಾವು ನೀಡಿದ ಭರವಸೆ ಈಡೇರಿಸಿದೆ. ಮಧ್ಯ ಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ರೈತರ ಸಾಲಮನ್ನಾಗೆ ಸಹಿ ಮಾಡಲಾಗಿದೆ. 

ಭೋಪಾಲ್/ರಾಯ್‌ಪುರ: ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂಬ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ
ಸಾಲ ಮನ್ನಾ ಪ್ರಕಟಿಸಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ತಾಸಿನಲ್ಲಿ ಕಮಲ್ ನಾಥ್ 2 ಲಕ್ಷ ರು. ವರೆಗಿನ ಕೃಷಿ ಸಾಲ ಮನ್ನಾ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಇನ್ನು ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಕೂಡ ಇದೇ ಹಾದಿ ಅನುಸರಿಸಿ, ಮೊದಲ ಸಂಪುಟ ಸಭೆಯಲ್ಲೇ ಸಾಲ ಮನ್ನಾ ನಿರ್ಣಯ ಕೈಗೊಂಡರು. 

ಇಲ್ಲಿ 16.65 ಲಕ್ಷ ರೈತರ ಸಹಕಾರ- ಗ್ರಾಮೀಣ ಬ್ಯಾಂಕ್‌ನ ಎಲ್ಲ ಅಲ್ಪಾವಧಿ ಕೃಷಿಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 6100 ಕೋಟಿ ಹೊರೆಯಾಗಲಿದೆ. ನಂತರದ ದಿನದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲಾಗುತ್ತದೆ. ರಾಜಸ್ಥಾನದಲ್ಲೂ ಇಂಥದ್ದೇ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು ಅಲ್ಲಿ ಇನ್ನೂ ಸಾಲ ಮನ್ನಾ ಘೋಷಣೆ ಬಾಕಿ ಇದೆ.

ಮಧ್ಯಪ್ರದೇಶದಲ್ಲಿ 56 ಸಾವಿರ ಕೋಟಿ ಹೊರೆ: ಮಧ್ಯಪ್ರದೇಶದಲ್ಲಿ ಕಮಲ್‌ನಾಥ ಮಾಡಿದ ಘೋಷಣೆ ಪ್ರಕಾರ 2018ರ ಮಾರ್ಚ್ 31ರೊಳಗೆ ರೈತರು ಮಾಡಿದ 2 ಲಕ್ಷ ರುಪಾಯಿವರೆಗಿನ ಸಾಲ ಮನ್ನಾ ಆಗಲಿದೆ. ರಾಷ್ಟ್ರೀಕೃತ ಹಾಗೂ ಸಹಕಾರ ಸಾಲಗಳಿಗೆ ಮನ್ನಾ ಅನ್ವಯವಾಗಲಿದೆ. ಇದು ಸರ್ಕಾರದ ಬೊಕ್ಕಸಕ್ಕೆ 56 ಸಾವಿರ ಕೋಟಿ ರುಪಾಯಿ ಹೊರೆ ಹೊರಿಸಬಹುದು ಎಂದು ಹೇಳಲಾಗಿದೆ. 

ಇದಲ್ಲದೆ ಅನುತ್ಪಾದಕ ಸಾಲದ ಮೊತ್ತ ಸುಮಾರು 12 ಸಾವಿರ ಕೋಟಿ ರು. ಇದೆ. ಜೂನ್ 7ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಪೀಪ್ಲಿಯಾ ಮಂಡಿ ಎಂಬಲ್ಲಿ ಮೊದಲ ಬಾರಿಗೆ ಸಾಲ ಮನ್ನಾ ಭರವಸೆ ನೀಡಿದ್ದರು.

ಸರ್ಕಾರದಿಂದ ರೈತರಿಗೆ ಮತ್ತೊಂದು ಬಂಪರ್

ಮೋದಿ ಸರ್ಕಾರದ ಭರ್ಜರಿ ಗಿಫ್ಟ್ : ರೈತರ 4 ಲಕ್ಷ ಕೋಟಿ ಸಾಲಮನ್ನಾ