ಕನ್ಸಾಸ್ ಸಿಟಿಯಲ್ಲಿ ಭಾರತದ ಸ್‌ಟಾವೇರ್ ತಂತ್ರಜ್ಞ ಶ್ರೀನಿವಾಸ್ ಅವರ ಹತ್ಯೆಯ ಬಳಿಕ ಅಮೆರಿಕದಲ್ಲಿ ತಾವು ಅಸುರಕ್ಷಿತ ಎಂಬ ಭೀತಿಗೆ ಭಾರತೀಯರು ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ‘ಜಾಗೃತಿ ಸಂದೇಶಗಳು’ ರವಾನೆಯಾಗಲಾರಂಭಿಸಿವೆ.
ವಾಷಿಂಗ್ಟನ್(ಫೆ.26): ಕನ್ಸಾಸ್ ಸಿಟಿಯಲ್ಲಿ ಭಾರತದ ಸ್ಟಾವೇರ್ ತಂತ್ರಜ್ಞ ಶ್ರೀನಿವಾಸ್ ಅವರ ಹತ್ಯೆಯ ಬಳಿಕ ಅಮೆರಿಕದಲ್ಲಿ ತಾವು ಅಸುರಕ್ಷಿತ ಎಂಬ ಭೀತಿಗೆ ಭಾರತೀಯರು ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ‘ಜಾಗೃತಿ ಸಂದೇಶಗಳು’ ರವಾನೆಯಾಗಲಾರಂಭಿಸಿವೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಳ್ವಿಕೆಯ ಆರಂಭವಾದ ನಂತರ ಭಾರತೀಯರು ಜನಾಂಗೀಯ ದ್ವೇಷದ ಭೀತಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಭಾರತೀಯ-ಅಮೆರಿಕನ್ ಸಮುದಾಯದ ಸಂಘಟನೆಗಳು, ‘ಭಾರತೀಯರು ಹೇಗೆ ಸಾರ್ವಜನಿಕವಾಗಿ ವರ್ತಿಸಬೇಕು? ವರ್ತಿಸಬಾರದು?’ ಎಂಬ ಸಲಹೆ-ಸೂಚನೆಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿವೆ.
ಹೀಗೆ ಮಾಡಿ:
- ಸಾರ್ವಜನಿಕ ಸ್ಥಳಗಳಲ್ಲಿ ಯಾರೊಂದಿಗೂ ಯಾವುದೇ ವಿಚಾರದ ಬಗ್ಗೆ ವಾದಕ್ಕಿಳಿಯಬೇಡಿ.
- ಯಾರಾದರೂ ನಿಮ್ಮ ಜತೆಗಿನ ವಾದಕ್ಕೆ ಪ್ರಚೋದಿಸಿದರೆ, ಅದನ್ನು ನಿರ್ಲಕ್ಷಿಸಿ ಆ ಸ್ಥಳದಿಂದ ಬೇರೆಡೆ ನಿರ್ಗಮಿಸಿ.
- ಸಾರ್ವಜನಿಕವಾಗಿ ಮಾತೃಭಾಷೆಯಲ್ಲಿ ಮಾತನಾಡಲು ಮುಂದಾಗುವುದರಿಂದ ಅಪಾಯವೇ ಹೆಚ್ಚು, ಅಲ್ಲದೆ, ಅದನ್ನು ತಪ್ಪಾಗಿ ಭಾವಿಸಲಾಗುತ್ತದೆ. ಹಾಗಾಗಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುವುದು ಒಳಿತು.
- ಪ್ರತ್ಯೇಕವಾಗಿರುವ ಸ್ಥಳಗಳ ಮೇಲೆ ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಹಾಗಾಗಿ, ಒಬ್ಬರೇ ಎಲ್ಲಿಗೂ ಹೋಗುವ ಗೋಜಿಗೆ ಮುಂದಾಗಬೇಡಿ.
- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡಲು ಮೀನಮೇಷ ಎಣಿಸಲೇಬೇಡಿ. ಇಂಥ ಸಂದರ್ಭದಲ್ಲಿ ಅಕಾರಿಗಳು ಬಂದು ನಿಮ್ಮನ್ನು ಅಪಾಯದಿಂದ ಪಾರು ಮಾಡಲು ಅನುಕೂಲವಾದೀತು.
- ನೀವು ವಾಸವಾಗಿರುವ ಸುತ್ತಮುತ್ತಲ ವಾತಾವರಣದ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ಅನುಮಾನಾಸ್ಪದ ಘಟನೆಗಳು ನಿಮ್ಮ ಗಮನಕ್ಕೆ ಬಂದರೆ, ಅದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತನ್ನಿ.
ಎಚ್ಚರಿಕೆ ಏನು?
- ಸಾರ್ವಜನಿಕವಾಗಿ ಇಂಗ್ಲಿಷಲ್ಲೇ ಮಾತಾಡಿ, ಮಾತೃಭಾಷೆ ಬೇಡ
- ಯಾರೊಂದಿಗೂ ಯಾವುದೇ ವಿಷಯದ ಬಗ್ಗೆ ವಾದ ಮಾಡದಿರಿ
- ಒಬ್ಬರೇ ಎಲ್ಲಿಗೂ ಹೋಗದಿರಿ. ಅಗತ್ಯವಿದ್ದರೆ ಪೊಲೀಸರಿಗೆ ಕರೆ ಮಾಡಿ
- ನಿಮ್ಮ ಸುತ್ತಲಿನ ಪ್ರದೇಶದಲ್ಲಿ ಶಂಕಾಸ್ಪದ ವರ್ತನೆ ಕಂಡರೆ ದೂರು ಕೊಡಿ
