ನವದೆಹಲಿ(ಸೆ.23)  ಪದೇ ಪದೇ ಕಾಲು ಕೆರೆದುಕೊಂಡು ಒಂದಿಲ್ಲೊಂದು ಕಿತಾಪತಿ ಮಾಡುತ್ತಿರುವ ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯಾವುದೇ ರೀತಿಯ ಕ್ರಮ ಪ್ರಯೋಗಿಸಲು ಸೇನೆ ಸದಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಉಗ್ರಗಾಮಿ ಚಟುವಟಿಕೆಗೆ ಬೆಂಬಲ ನೀಡುತ್ತಿರುವುದನ್ನು ಹಲವು ಸಂದರ್ಭದಲ್ಲಿ ಪಾಕಿಸ್ತಾನವೇ ಒಪ್ಪಿಕೊಂಡಿದೆ. ಸ್ಥಳೀಯರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿಕೊಂಡೇ ಉಗ್ರ ಚಟುವಟಿಕೆ ನಡೆಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಲ ಬಿಚ್ಚುವ ಕೆಲಸ ಮಾಡಿದರೆ ಸೇನೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿ ಹಿಂಪಡೆದ ವಿಚಾರ ಇಟ್ಟುಕೊಂಡುಭಾರತದ ವಿರುದ್ದ ಹೋರಾಟ ಮಾಡುತ್ತೇನೆ ಎಂಬ ಮಾತನಾಡುತ್ತಿದೆ. ಅಸಲಿಗೆ ತಾನೇ ಉಗ್ರ ಚಟುವಟಿಕೆಗೆ ಬೆಂಬಲ ನೀಡುತ್ತ ಭಾರತದ ವಿರುದ್ಧ ಮಾತನಾಡುತ್ತಿದೆ ಎಂದು ಗುಡುಗಿದ್ದಾರೆ.

ಬಾಲಾಕೋಟ್‌ನಲ್ಲಿ ಮತ್ತೆ ತಲೆ ಎತ್ತಿತು ಉಗ್ರಗಾಮಿಗಳ ಶಿಬಿರ!

ಸೇನೆಯ ಹದಿನೈದು ತುಕಡಿಗಳು ಯುದ್ಧ ತರಬೇತಿಯನ್ನು ಪಡೆದುಕೊಂಡಿದ್ದು ಸದಾ ಸರ್ವ ಸನ್ನದ್ಧವಾಗಿರುತ್ತದೆ. ಕೆಲವೊಂದು ತುಕಡಿಗಳು ಗಡಿಯಿಂದ ಆಚೆ ಹೋಗಿಯೂ ಕಾರ್ಯಾಚರಣೆ ನಡೆಸುವ ಶಕ್ತಿ ಹೊಂದಿವೆ ಎಂದು ತಿಳಿಸಿದ್ದಾರೆ.

'ಭಯೋತ್ಪಾದಕರ ಒಳನುಸುಳುವಿಕೆಗಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸಿದೆ. ಕದನ ವಿರಾಮ ಉಲ್ಲಂಘನೆಯನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ. ಎದುರಾಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಮ್ಮ ಸೈನಿಕರು ಅರಿತಿದ್ದಾರೆ ಎಂದು ತಿಳಿಸಿದರು.