ನ್ಯೂಯಾರ್ಕ್(ಸೆ.28): ಅಂತರ್ಜಾಲದ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಕುರಿತಂತೆ ಭಾರತ ಸೇರಿ 20 ದೇಶಗಳು ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿವೆ.

ಆನ್‌ಲೈನ್ ಮೂಲಕ ಸುಳ್ಳು ಸುದ್ದಿ ರವಾನಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಫ್ರಾನ್ಸ್, ಬ್ರಿಟನ್ ಮತ್ತು ಭಾರತ ಸೇರಿದಂತೆ 20 ದೇಶಗಳು ಒಡಂಬಡಿಕೆಗೆ ಅಂಕಿತ ಹಾಕಿವೆ. 

ದಕ್ಷಿಣ ಆಫ್ರಿಕಾ, ಕೆನಡಾ ಸೇರಿದಂತೆ ಹಲವು ಪ್ರಮುಖ ದೇಶಗಳು ಸಹ ಇಂತಹ ಸುದ್ದಿಯ ನಿರ್ಬಂಧಕ್ಕೆ ಈಗಾಗಲೇ ಕಾನೂನು ಜಾರಿ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಕಲಿ ಸುದ್ದಿಗಳನ್ನು ನಿರ್ಬಂಧಿಸುವ ತಂತ್ರಕ್ಕೆ ಸಹಮತ ವ್ಯಕ್ತಪಡಿಸಿವೆ.

ಮಾಧ್ಯಮ ಕಣ್ಗಾವಲು ಸಂಸ್ಥೆ ರಿಪೋರ್ಟರ್ಸ್ ಬಿಯಾಂಡ್ ದಿ ಬಾರ್ಡರ್ಸ್ -  ಆರ್.ಬಿ.ಎಫ್ ಮುಕ್ತ ಮಾಧ್ಯಮ ಸ್ವಾತಂತ್ರ್ಯ ಸಂಸ್ಥೆಯ ಸಹಯೋಗದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. 

ಪ್ರಮುಖವಾಗಿ ಚುನಾವಣೆ ಸಂದರ್ಭಗಳಲ್ಲಿ ಸುಳ್ಳು ಸುದ್ದಿ ಹರಡುವ, ಪ್ರಜಾತಂತ್ರ ಮೌಲ್ಯಗಳಿಗೆ ಧಕ್ಕೆ ತರುವ ಸುಳ್ಳು ಸುದ್ದಿಗಳ ಮೇಲೆ ನಿರ್ಬಂಧಿಸುವ ಅಂಶಗಳು ಈ ಒಪ್ಪಂದಲ್ಲಿವೆ.