ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಜವಾಬ್ದಾರಿಯುತ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ (ಮೇ.19): ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಜವಾಬ್ದಾರಿಯುತ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Add Asianetnews Kannada as a Preferred SourcegooglePreferred

ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು 90 ಲಕ್ಷ ನಕಲಿ ಮಾತದಾರರನ್ನು ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಫಲವಾಗಿ ಕೈಬಿಡಲಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯದಂತೆ ಈಗ ನೈಜ ಮತದಾರರಿಂದಾಗಿ ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಗಿದೆ. ಇದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಎನ್ನುವ ಕಾರಣದಿಂದ ಪ್ರಿಯಾಂಕ್‌ ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತ ನಾಯಕರಂತೆ ವರ್ತಿಸುತ್ತಿದ್ದಾರೆ. ಆಪರೇಷನ್ ಸಿಂದೂರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಅನಗತ್ಯ ಮಾತನಾಡುವುದು ಸರಿಯಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಬೆಲೆ ಏರಿಕೆಯಂತಹ ಪ್ರಸಂಗವನ್ನು ದೇಶ ಏದುರಿಸಬೇಕಾಗಿದೆ ಎಂದು ಹೇಳಿದರು.

ಹಣ ಅಪವ್ಯಯ

ಕಳೆದ 3 ವರ್ಷಗಳಿಂದ ಬಡವರಿಗೆ ಮನೆಗಳನ್ನು ಹಂಚಿಲ್ಲ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದೀಗ ಕಾಂಗ್ರೆಸ್‌ನವರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡಲಾರಂಭಿಸಿದೆ. ಈ ಹಿನ್ನೆಲೆ ತಮ್ಮ ಸರ್ಕಾರದ ವೈಫಲ್ಯತೆಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾ ಕಾಲಕಳೆಯುತ್ತಿದ್ದಾರೆ. ಸರ್ಕಾರದ ಸಾಧನ ಸಮಾವೇಶಗಳನ್ನು ಮಾಡುತ್ತಾ ಜನರ ಹಣ ಅಪವ್ಯಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ, ತಮಿಳುನಾಡು ರಾಜ್ಯಗಳಲ್ಲಿ ಜನ ಸಂಪೂರ್ಣವಾಗಿ ಕಾಂಗ್ರೆಸ್ ಅನ್ನು ಧಿಕ್ಕರಿಸಿದ್ದಾರೆ. ಕೊಲ್ಲಿ ಯುದ್ಧದ ಪರಿಣಾಮಗಳನ್ನು ಅಂತರ ರಾಷ್ಟ್ರೀಯಮಟ್ಟದಲ್ಲಿ ಜನ ಎದುರಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ನರೇಂದ್ರ ಮೋದಿಯವರು ತಮ್ಮ ಚಾಣಾಕ್ಷ ಆಡಳಿತ ವೈಖರಿಯಿಂದ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದರು.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ಎರಡು-ಮೂರು ಸಚಿವರು ಪೈಪೋಟಿಗೆ ಬಿದ್ದವರಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಹೊರತು, ಅವರ ಖಾತೆಗಳ ಬಗ್ಗೆ, ಅಭಿವೃದ್ಧಿ ಬಗ್ಗೆ ಕಿಂಚ್ಚಿತ್ತೂ ಗಮನಹರಿಸುತ್ತಿಲ್ಲ.
- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.