ಇಸ್ಲಾಮಾಬಾದ್‌[ಜ.02]: ಭಾರತ ಹಾಗೂ ಪಾಕಿಸ್ತಾನ ತಮ್ಮ ಜೈಲುಗಳಲ್ಲಿರುವ ಉಭಯ ರಾಷ್ಟಗಳ ಖೈದಿಗಳ ಮಾಹಿತಿಗಳನ್ನು ವಿನಿಮಯ ಮಾಡಿಕೊಂಡಿದ್ದು, ಪಾಕಿಸ್ತಾನದ ಜೈಲುಗಳಲ್ಲಿ ಒಟ್ಟು 282 ಮಂದಿ ಭಾರತೀಯ ಖೈದಿಗಳು ಇದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಇದರಲ್ಲಿ 55 ನಾಗರಿಕರು ಹಾಗೂ 227 ಮೀನುಗಾರರು ಇದ್ದಾರೆ. ಭಾರತ ಜೈಲುಗಳಲ್ಲಿ ಪಾಕಿಸ್ತಾನದ 99 ಮೀನುಗಾರರು ಹಾಗೂ 267 ನಾಗರಿಕರು ಸೇರಿ ಒಟ್ಟು 366 ಮಂದಿ ಇದ್ದಾರೆ.

2008 ಮೇ.1 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ರಾಜತಾಂತ್ರಿಕ ಒಪ್ಪಂದದ ಪ್ರಕಾರ ಪ್ರತಿ ವರ್ಷ ಜ.1 ಹಾಗೂ ಜು.1 ರಂದು ಉಭಯ ರಾಷ್ಟ್ರಗಳ ಜೈಲುಗಳಲ್ಲಿರುವ ಎರಡೂ ರಾಷ್ಟ್ರಗಳ ಖೈದಿಗಳ ಬಗ್ಗೆ ಮಾಹಿತಿ ವಿನಿಮಯ ಮಾಡಬೇಕು.