ನವದೆಹಲಿ(ಮಾ.01): ಇಡೀ ಭಾರತ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಾಗಿದೆ. ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.

ವಾಘಾ ಗಡಿ ಮೂಲಕ ತಾಯ್ನಾಡಿನ ನೆಲ ಮುಟ್ಟಿದ ಅಭಿನಂದನ್ ಅವರನ್ನು ವಾಯುಸೇನೆ, ಕುಟುಂಬ ಮತ್ತು ಸಾವಿರಾರು ಜನರು ಬರಮಾಡಿಕೊಂಡರು. ಇನ್ನು ಅಭಿನಂದನ್ ಭಾರತಕ್ಕೆ ಮರಳಿರುವ ಕುರಿತು ಮತ್ತು ತದನಂತರದ ಭಾರತ-ಪಾಕ್ ನಡುವಿನ ಸಂಬಂಧ ಕುರಿತು ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ನಿಮ್ಮ ಸುವರ್ಣನ್ಯೂಸ್.ಕಾಂ ಜೊತೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ನಿತಿನ್ ಗೋಖಲೆ ಅವರೊಂದಿಗೆ ಸುವರ್ಣನ್ಯೂಸ್.ಕಾಂ ನಡೆಸಿದ ಮಾತುಕತೆಯ ಸಂಪೂರ್ಣ ವರದಿ ಇಲ್ಲಿದೆ.

ಪ್ರಶ್ನೆ: ಸರ್, ಅಭಿನಂದನ್ ಬಂದಾಗಿದೆ ಮುಂದೆ?
ಉತ್ತರ: ಮೊದಲು ಅಭಿನಂಧನ್ ಬಂದ ಬಗೆ ಕುರಿತು ಮಾತಾಡೋಣ. ಆಮೇಲೆ ಮುಂದೇನು ಎಂಬುದನ್ನು ಅವಲೋಕಿಸೋಣ. ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಧನ್ಯವಾದ ಹೇಳಲೇಬೇಕು.

ಪ್ರಶ್ನೆ: ಭಾರತ-ಪಾಕ್ ಸಂಬಂಧ ತಿಳಿಯಾಗಲಿದೆಯೇ?
ಉತ್ತರ: ತಿಳಿಯಾಗಲಿ ಎಂಬುದೇ ಎಲ್ಲರ ಆಶಯ. ಆದರೆ ಎಲ್ಲಿಯವರೆಗೆ ಪಾಕಿಸ್ತಾನ ಭಯೋತ್ಪಾದಕರ ಆಶ್ರಯ ತಾಣವಾಗಿರುತ್ತದೆಯೋ, ಅಲ್ಲಿಯವರೆಗೆ ಈ ಸಂಬಂಧದಲ್ಲಿ ಏರುಪೇರು ಸಾಮಾನ್ಯ ಸಂಗತಿಯಾಗಿರಲಿದೆ. ಅಭಿನಂದನ್ ಬಂದಾಕ್ಷಣ ಪುಲ್ವಾಮಾ ದಾಳಿಯನ್ನು ಭಾರತ ಮರೆಯಲಿದೆ ಎಂದು ಬಗೆದರೆ ಅದು ಮೂರ್ಖತನ.

ಪ್ರಶ್ನೆ: ಪುಲ್ವಾಮಾ ದಾಳಿಯ ಜಂಟಿ ತನಿಖೆಗೆ ಪಾಕ್ ಆಹ್ವಾನ ನೀಡಿದೆಯಲ್ಲ?
ಉತ್ತರ: ಅಲ್ರೀ, ಭಯೋತ್ಪಾದನೆ ನಮ್ಮ ಜನ್ಮಸಿದ್ಧ ಹಕ್ಕು ಎಂದು ಪಾಕಿಸ್ತಾನದ ಸಂಸದರೊಬ್ಬರು ಹೇಳಿಕೆ ನೀಡಿರುವಾಗ ಇನ್ನೆಲ್ಲಿಯ ಜಂಟಿ ತನಿಖೆ?. ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡ ಇರುವುದರ ಕುರಿತು ಆ ಸಂಸದರೇ ಹೇಳಿರುವಾಗ ಅವರು ತನಿಖೆಗೆ ಸಹಕರಿಸುತ್ತಾರೆ ಎಂಬುದೇ ದೊಡ್ಡ ಜೋಕ್.

ಪ್ರಶ್ನೆ: ಹಾಗಾದರೆ ಭಾರತ-ಪಾಕ್ ಸಂಬಂಧ ಏನಾಗಲಿದೆ?
ಉತ್ತರ: ಸದ್ಯ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಸರಿಯಿಲ್ಲ. ಇನ್ನೂ ಕೆಲವು ದಿನಗಳ ಕಾಲ ಈ ಬಿಗುವಿನ ವಾತಾವರಣ ಮುಂದುವರೆಯಲಿದೆ. ಹಾಗಂತ ಯುದ್ಧದ ಸಂಭಾವ್ಯತೆ ಇದೆ ಎನ್ನಲೂ ಆಗದು. ಎರಡೂ ರಾಷ್ಟ್ರಗಳ ನಾಯಕರು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಇದೆಲ್ಲವೂ ನಿರ್ಧಾರಿತವಾಗಲಿದೆ.

ಪ್ರಶ್ನೆ: ಸರ್, ವಾಪಸ್ ಬಂದ ಅಭಿನಂದನ್ ವೈದ್ಯಕೀಯ ತಪಾಸಣೆಗೆ ಒಳಪಡಲಿದ್ದಾರೆಯೇ?
ಉತ್ತರ: ಖಂಡಿತ ಹೌದು, ಶತ್ರು ರಾಷ್ಟ್ರದ ವಶದಲ್ಲಿದ್ದ ಯೋಧನೋರ್ವ ತಾಯ್ನಾಡಿಗೆ ವಾಪಸ್ ಬಂದ ಬಳಿಕ ಆತನ ವೈದ್ಯಕೀಯ ತಪಾಸಣೆ ಅವಶ್ಯವೂ ಹೌದು, ಅನಿವಾರ್ಯವೂ ಹೌದು. ಅದರಂತೆ ಪಾಕಿಸ್ತಾನದಿಂದ ಆಗಮಿಸುವ ಅಭಿನಂದನ್ ಬಳಿ ಸೇನೆ ಹಲವು ಮಾಹಿತಿ ಸಂಗ್ರಹಿಸಲಿದೆ. ಭಾರತದ ಭದ್ರತೆಗೆ ಸಂಬಂಧಿಸಿದಂತೆ ಏನಾದರೂ ಕೇಳಿದ್ದರಾ ಎಂಬ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಲ್ಲದೇ ದೇಶದ ಬಗ್ಗೆ ಗುಪ್ತ ಮಾಹಿತಿ ಹೇಳಲು ಒತ್ತಡ ಹೇರಿದ್ದರಾ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪಾಕಿಸ್ತಾನದ ಒತ್ತಡಕ್ಕೆ ಒಳಪಟ್ಟು ಅಭಿನಂದನ್ ಏನಾದರೂ ಮಾಹಿತಿ ನೀಡಿದ್ದಾರಾ ಎಂಬ ಆತಂಕ ಇದ್ದೇ ಇರುತ್ತದೆ.

ಪ್ರಶ್ನೆ: ಭಾರತದ ಮುಂದಿನ ನಡೆ ಏನಿರಬಹುದು?
ಉತ್ತರ: ವ್ಯೂಹಾತ್ಮಕ ನಡೆಗಳ ಕುರಿತು ಸದ್ಯದ ಪರಿಸ್ಥಿತಿಯಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಆದರೆ ರಾಜತಾಂತ್ರಿಕ ನಡೆಗಳ ಕುರಿತು ಮಾತನಾಡಬಹುದು. ಅದರಂತೆ ಭಾರತ ಈಗಾಘಲೇ ಹಲವು ಯಶಸ್ವಿ ರಾಜತಾಂತ್ರಿಕ ನಡೆ ಇಟ್ಟಿದ್ದು, ಇಂದೂ ಕೂಡ ಒಐಸಿ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪರೋಕ್ಷವಾಗಿ ಪಾಕ್ ಭಯೋತ್ಪಾದನೆ ಕುರಿತು ಮಾತನಾಡಿದ್ದಾರೆ. ಪಾಕ್ ಈ ಸಭೆ ಬಹಿಷ್ಕರಿಸಿತ್ತು ಎಂಬುದು ಗಮನಾರ್ಹ. ಅದರಂತೆ ಇನ್ನೂ ಕೆಲವು ರಾಜತಾಂತ್ರಿಕ ಮಾರ್ಗೋಪಾಯಗಳು ಭಾರತದ ಮುಂದಿವೆ ಎಂಬುದು ಸತ್ಯ.

ಸುವರ್ಣನ್ಯೂಸ್.ಕಾಂ: ಧನ್ಯವಾದಗಳು ಸರ್
ನಿತಿನ್ ಗೋಖಲೆ: ಧನ್ಯವಾದ್, ಜೈ ಹಿಂದ್....

ಯಾರು ನಿತಿನ್ ಗೋಖಲೆ?
ನಿತಿನ್ ಗೋಖಲೆ 1983 ರಿಂದ ಮಲ್ಟಿಮೀಡಿಯಾ ವರದಿಗಾರರಾಗಿದ್ದಾರೆ. ಇತ್ತೀಚೆಗೆ ಲೇಖಕ, ಮಾಧ್ಯಮ ತರಬೇತುದಾರ ಮತ್ತು ಸಂಶೋಧಕರಾಗಿ ಮತ್ತು ಪೂರ್ಣಾವಧಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ಮಿಲಿಟರಿ, ಯುದ್ಧ, ಸಾಮರಿಕ ಘಟನೆಗಳ ಕುರಿತು ನಿತಿನ್ ಗೋಖಲೆ ಒಟ್ಟು ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಇಷ್ಟೇ ಅಲ್ಲದೇ ನಿತಿನ್ ಅವರದ್ದು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಕಾರ್ಯದಲ್ಲೂ ಎತ್ತಿದ ಕೈ. 

ದೇಶದ ಉನ್ನತ ರಕ್ಷಣಾ ಸಂಸ್ಥೆಗಳಲ್ಲಿ ನಿಯಮಿತ ಭೇಟಿ ನೀಡುವ ಬೋಧಕರಾಗಿಯೂ ನಿತಿನ್ ಗೋಖಲೆ ಕರ್ತವ್ಯನಿರತರಾಗಿದ್ದಾರೆ. ಪ್ರಸ್ತುತ ನಿತಿನ್ ಗೋಖಲೆ ‘Diffense and Security Alert’ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಿತಿನ್ ಗೋಖಲೆ ಭಾರತದ ರಕ್ಷಣಾ ಮತ್ತು ಭದ್ರತಾ ವಿಶ್ಲೇಷಕರಾಗಿ ಮನೆಮಾತಾಗಿದ್ದಾರೆ.