ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಾಗಿದೆ. ಪುಲ್ವಾಮಾ ಹುತಾತ್ಮರಿಗೆ ನೀಡಿದ್ದ ವಚನದಂತೆ ಭಯೋತ್ಪಾದಕರ ಚೆಂಡಾಡಿಯಾಗಿದೆ. ಭಾರತೀಯ ವಾಯುಸೇನೆಯ 12 ಮಿರಾಜ್-2000 ಯುದ್ಧ ವಿಮಾನಗಳು ಬಾಲಾಕೋಟ್‌ನಲ್ಲಿದ್ದ ಜೆಇಎಂ ಕ್ಯಾಂಪ್‌ನ್ನು ಧ್ವಂಸಗೊಳಿಸಿದೆ.

ಇನ್ನು ಭಾರತೀಯ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನ ಭಾರತೀಯ ಸೇನೆಯ ಮೇಲೆ ದಾಳಿ ಮಾಡಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದೊಮ್ಮೆ ಪಾಕಿಸ್ತಾನ ದಾಳಿಗೆ ಮುಂದಾದರೆ ಪೂರ್ಣ ಪ್ರಮಾಣದ ಯುದ್ಧ ಖಚಿತ ಎಂದು ಹೇಳಲಾಗುತ್ತಿದೆ.

ಈ ಕುರಿತು ಜನಪ್ರಿಯ ರಕ್ಷಣಾ ತಜ್ಞ, ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ನಿಮ್ಮ ಸುವರ್ಣನ್ಯೂಸ್.ಕಾಂ ಜೊತೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ನಿತಿನ್ ಗೋಖಲೆ ಅವರೊಂದಿಗೆ ಸುವರ್ಣನ್ಯೂಸ್.ಕಾಂ ನಡೆಸಿದ ಮಾತುಕತೆಯ ಸಂಪೂರ್ಣ ವರದಿ ಇಲ್ಲಿದೆ.

ಪ್ರಶ್ನೆ: ಸರ್, ವಾಯುಸೇನೆಯ ಈ ದಾಳಿಯ ಕುರಿತು ನಿಮ್ಮ ಅಭಿಪ್ರಾಯ?
ಉತ್ತರ: ಇದೊಂದು ತುಂಬ ಅವಶ್ಯಕವಾಗಿದ್ದ ದಾಳಿ. ಭಾರತದ ಮೇಲೆ ಮತ್ತೆ ದಾಳಿ ಮಾಡಲು ಸಜ್ಜಾಗಿದ್ದ ಜೆಇಎಂ ಉಗ್ರರನ್ನು ಮಟ್ಟ ಹಾಕುವಲ್ಲಿ ವಾಯುಸೇನೆ ಯಶಸ್ವಿಯಾಗಿರುವುದು ನಿಜಕ್ಕೂ ಸಂತಸ ತಂದಿದೆ.

ಪ್ರಶ್ನೆ: ಈ ಹಿಂದೆಯೂ ವಾಯುಸೇನೆಯಿಂದ ಸರ್ಜಿಕಲ್ ದಾಳಿ ನಡೆದಿತ್ತೇ?
ಉತ್ತರ: ಹೌದು, ನಡೆದಿತ್ತು. 1971ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ದಾಳಿ ಮಾಡಿತ್ತು. ಮುಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕ್ ವಾಯುಗಡಿ ದಾಟಲು ಅನುಮತಿ ನೀಡದ ಕಾರಣ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಹಿಂದಿರುಗಿದ್ದವು.

ಪ್ರಶ್ನೆ: ನಿರ್ದಿಷ್ಟವಾಗಿ ದಾಳಿ ನಡೆದಿರುವುದು ಎಲ್ಲಿ?
ಉತ್ತರ: ಎಲ್ಲರೂ ತಿಳಿದಂತೆ ವಾಯುಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿಲ್ಲ. ಪಾಕಿಸ್ತಾನದ ಖೈಬರ್ ಪಶ್ತುನ್ ಭಾಗದಲ್ಲಿ ದಾಳಿ ನಡೆದಿದ್ದು, ಇದು ಸಂಪೂರ್ಣವಾಗಿ ಪಾಕಿಸ್ತಾನದ ಭಾಗವಾಗಿದೆ. ಇಲ್ಲಿದ್ದ ಜೆಇಎಂ ಉಗ್ರ ಅಡಗುತಾಣದ ಕುರಿತು ಮಾಹಿತಿ ಪಡೆದ ಬಳಿಕವಷ್ಟೇ ದಾಳಿ ಮಾಡಲಾಗಿದೆ.

ಪ್ರಶ್ನೆ: ಪಾಕಿಸ್ತಾನದ ಸೈನಿಕರೂ ದಾಳಿಯಲ್ಲಿ ಸತ್ತಿರಬಹುದೇ?
ಉತ್ತರ: ಈ ಕುರಿತು ಖಚಿತತೆ ಇಲ್ಲ. ಸಾಮಾನ್ಯವಾಗಿ ಪಾಕ್ ಸೈನಿಕರೂ ಕೂಡ ಉಗ್ರ ಅಡಗುತಾಣಗಳಲ್ಲಿ ಆಶ್ರಯ ಪಡೆಯವುದುಂಟು. ಅಲ್ಲದೇ ಪಾಕ್ ಸೈನಿಕರು ಎಂದು ಗೊತ್ತಾಗದಿರಲು ಉಗ್ರರ ರೀತಿಯಲ್ಲೇ ಬಟ್ಟೆ ಧರಿಸಿರುತ್ತಾರೆ. ಹೀಗಾಗಿ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಸೈನಿಕರು ಸತ್ತಿರುವ ಕುರಿತು ಖಚಿತತೆ ಸಿಗುವುದು ಕಷ್ಟ. ಒಂದು ವೇಳೆ ಸೈನಿಕರಿದ್ದರೂ ಪಾಕ್ ಆ ಸತ್ಯವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

ಪ್ರಶ್ನೆ: ದಾಳಿಯ ರಾಜಕೀಯ ಪರಿಣಾಮಗಳೇನು?
ಉತ್ತರ: ಖಂಡಿತ ಇದೊಂದು ಸಶಕ್ತ ರಾಜಕೀಯ ತೀರ್ಮಾನ ಅನ್ನೋದರಲ್ಲಿ ಎರಡು ಮಾತಿಲ್ಲ. ಶತ್ರು ರಾಷ್ಟ್ರದ ನೆಲದಲ್ಲಿ ದಾಳಿ ಮಾಡುವ ನಿರ್ಣಯ ಕೈಗೊಳ್ಳಲು ಗುಂಡಿಗೆ ಬೇಕಾಗುತ್ತದೆ. ಉದಾಹರಣೆಗೆ 2006ರ ಮುಂಬೈ ದಾಳಿಯ ಬಳಿಕ ಅಂದಿನ ವಾಯುಸೇನೆ ಮುಖ್ಯಸ್ಥರು ಇದೇ ರೀತಿಯ ದಾಳಿಗೆ ಸಲಹೆ ನೀಡಿದ್ದರು. ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಈ ಸಲಹೆಯನ್ನು ತಳ್ಳಿ ಹಾಕಿತ್ತು.

ಪ್ರಶ್ನೆ: ಪಾಕಿಸ್ತಾನದ ಮೇಲೆ ಬೀರಬಹುದಾದ ಪರಿಣಾಮಗಳೇನು?
ಉತ್ತರ: ನಾವು ದಾಳಿ ಮಾಡಿದರೆ ಭಾರತ ಈ ಮೊದಲಿನಂತೆ ಸುಮ್ಮನಿರಲ್ಲ, ಬದಲಿಗೆ ಪ್ರತಿದಾಳಿ ಮಾಡಿ ಮರ್ಮಾಘಾತ ನೀಡುತ್ತದೆ ಎಂಬ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ರವಾನೆಯಾಗಿದೆ. ಈ ದಾಳಿಯಿಂದ ಭಯಭೀತವಾಗಿರುವ ಪಾಕ್, ಪೂರ್ಣ ಪ್ರಮಾಣದ ಯುದ್ಧಕ್ಕೆ ಮುಂದಾಗುವ ದುಸ್ಸಾಹಸ ಮಾಡದು. ಅಲ್ಲದೇ ತನ್ನ ನೆಲದಲ್ಲಿರುವ ಉಗ್ರ ಅಡಗುತಾಣಗಳನ್ನು ನಾಶಗೊಳಿಸುವ ಒತ್ತಡ ಇದೀಗ ಪಾಕ್ ಮೇಲಿದೆ.

ಪ್ರಶ್ನೆ: ಹಾಗಾದರೆ ಪಾಕ್ ಏನು ಮಾಡುವುದಿಲ್ಲವೇ?
ಉತ್ತರ: ಹಾಗಂತ ಹೇಳಿದರೆ ಅದು ನಮ್ಮ ಮೂರ್ಖತನವಾದೀತು. ಕಾರಣ ತನ್ನ ನೆಲದಲ್ಲಿ ಭಾರತ ದಾಳಿ ಮಾಡಿದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತವನ್ನೂ ಅವಮಾನಿಸುವ ಯಾವುದೇ ಅವಕಾಶವನ್ನು ಪಾಕಿಸ್ತಾನ ಕಳೆದುಕೊಳ್ಳುವುದಿಲ್ಲ. ಈ ಮೊದಲೇ ಹೇಳಿದಂತೆ ಪಾಕಿಸ್ತಾನ ಪೂರ್ಣ ಪ್ರಮಾಣದ ಯುದ್ಧಕ್ಕೆ ಸಜ್ಜಾಗದಿದ್ದರೂ, ಭಾರತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ವೇಳೆ ಹಿಂಸಾಚಾರ ಭುಗಿಲೇಳುವಂತೆ ಮಾಡುವ ಸಾಧ್ಯತೆಗಳಿವೆ.

ಪ್ರಶ್ನೆ: ಮುಂದೇನು?
ಉತ್ತರ: ಈ ಪ್ರಶ್ನೆ ನಿಮ್ಮದೋ?, ಪಾಕಿಸ್ತಾನದ್ದೋ?(ನಗು).. ಮೊದಲು ಈ ದಾಳಿಯಿಂದ ಪಾಕ್ ಚೇತರಿಸಿಕೊಳ್ಳಲಿ. ಆ ನಂತರ  ಮುಂದೇನು ಎಂಬುದು ಅದಕ್ಕೆ ಸ್ಪಷ್ಟವಾಗಿ ಗೊತ್ತಾಗಲಿದೆ. ಒಂದಂತೂ ಸತ್ಯ, ನಮ್ಮ ಮೇಲೆ ದಾಳಿ ಮಾಡಿದರೆ ಸಮ್ಮನಿರಲು ಸಾಧ್ಯವೇ ಇಲ್ಲ ಎಂಬುದು ವಿಶ್ವಕ್ಕೆ ಮನವರಿಕೆಯಾಗಿದೆ. ನಮ್ಮ ಸೈನಿಕರ ಬಲಿದಾನಕ್ಕೆ ಇಂದು ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಈಗಲಾದರೂ ಪಾಕಿಸ್ತಾನ ಸುಮ್ಮನಿದ್ದರೆ ಒಳಿತು, ಇಲ್ಲವೇ ಅದಕ್ಕೆ ಅದರ ಹಣೆಬರಹ ಏನು ಎಂಬುದನ್ನು ತೋರಿಸಿಕೊಡಲಾಗುವುದು.

ಜೈ ಹಿಂದ್.......

ಯಾರು ನಿತಿನ್ ಗೋಖಲೆ?
ನಿತಿನ್ ಗೋಖಲೆ 1983 ರಿಂದ ಮಲ್ಟಿಮೀಡಿಯಾ ವರದಿಗಾರರಾಗಿದ್ದಾರೆ. ಇತ್ತೀಚೆಗೆ ಲೇಖಕ, ಮಾಧ್ಯಮ ತರಬೇತುದಾರ ಮತ್ತು ಸಂಶೋಧಕರಾಗಿ ಮತ್ತು ಪೂರ್ಣಾವಧಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ಮಿಲಿಟರಿ, ಯುದ್ಧ, ಸಾಮರಿಕ ಘಟನೆಗಳ ಕುರಿತು ನಿತಿನ್ ಗೋಖಲೆ ಒಟ್ಟು ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಇಷ್ಟೇ ಅಲ್ಲದೇ ನಿತಿನ್ ಅವರದ್ದು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಕಾರ್ಯದಲ್ಲೂ ಎತ್ತಿದ ಕೈ. 

ದೇಶದ ಉನ್ನತ ರಕ್ಷಣಾ ಸಂಸ್ಥೆಗಳಲ್ಲಿ ನಿಯಮಿತ ಭೇಟಿ ನೀಡುವ ಬೋಧಕರಾಗಿಯೂ ನಿತಿನ್ ಗೋಖಲೆ ಕರ್ತವ್ಯನಿರತರಾಗಿದ್ದಾರೆ. ಪ್ರಸ್ತುತ ನಿತಿನ್ ಗೋಖಲೆ ‘Diffense and Security Alert’ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಿತಿನ್ ಗೋಖಲೆ ಭಾರತದ ರಕ್ಷಣಾ ಮತ್ತು ಭದ್ರತಾ ವಿಶ್ಲೇಷಕರಾಗಿ ಮನೆಮಾತಾಗಿದ್ದಾರೆ.