ನವದೆಹಲಿ(ಫೆ.28): ತನ್ನ ವಶದಲ್ಲಿರುವ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಪಾಕಿಸ್ತಾನ ನಿರ್ಧರಿಸಿದೆ. ಇತ್ತ ಅಭಿನಂದನ್ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೇ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ.

ಅಭಿನಂದನ್ ಬಿಡುಗಡೆಯನ್ನು ಕೇಂದ್ರ ಸರ್ಕಾರದ ರಾಜತಾಂತ್ರಿಕ ಗೆಲುವು ಎಂದು ಭಾರತ ಪ್ರತಿಪಾದಿಸುತ್ತಿದೆ. ಅತ್ತ ಇಮ್ರಾನ್ ಖಾನ್ ಈ ನಡೆ ಶಾಂತಿಗಾಗಿ ನಮ್ಮ ಬದ್ಧತೆ ತೋರಿಸುತ್ತದೆ ಎಂದು ಪಾಕಿಸ್ತಾನ ಹೇಳುತ್ತಿದೆ.

ಆದರೆ ಭಾರತೀಯರಲ್ಲಿ ಮಾತ್ರ ವಿಂಗ್ ಕಮಾಂಡರ್ ಅಬಿನಂದನ್ ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ನಿಮ್ಮ ಸುವರ್ಣನ್ಯೂಸ್.ಕಾಂ ಜೊತೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ನಿತಿನ್ ಗೋಖಲೆ ಅವರೊಂದಿಗೆ ಸುವರ್ಣನ್ಯೂಸ್.ಕಾಂ ನಡೆಸಿದ ಮಾತುಕತೆಯ ಸಂಪೂರ್ಣ ವರದಿ ಇಲ್ಲಿದೆ.

ಪ್ರಶ್ನೆ: ಸರ್, ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ನಿಮ್ಮ ರಿಯಾಕ್ಷನ್?

ಉತ್ತರ: 130 ಕೋಟಿ ಭಾರತೀಯರ ಈಗಿನ ರಿಯಾಕ್ಷನ್ ಏನಾಗಿದೆಯೋ ಅದೇ ನನ್ನ ರಿಯಾಕ್ಷನ್. ತುಂಬ ಸಂತಸದಲ್ಲಿದ್ದೇನೆ. ಭಾರತದ ವೀರಪುತ್ರ ಶತ್ರುಗಳ ನೆಲದಲ್ಲಿ ನಿಂತು ತೋರಿದ ಧೈರ್ಯ ನನ್ನ ಸಂತಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಪ್ರಶ್ನೆ: ಅಭಿನಂದನ್ ಬಿಡುಗಡೆ ಶಾಂತಿಗಾಗಿ ನಮ್ಮ ಬದ್ಧತೆ ಎಂದು ಪಾಕಿಸ್ತಾನ ಹೇಳುತ್ತಿದೆಯಲ್ಲ?

ಉತ್ತರ: ಪಾಕಿಸ್ತಾನ ಇನ್ನೇನು ಹೇಳಲು ಸಾಧ್ಯ?. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಇದೀಗ ಶಾಂತಿಯ ಮುಖವಾಡ ಹಾಕಿಕೊಂಡಿದೆ. ಅಭಿನಂದನ್ ಬಿಡುಗಡೆಯನ್ನು ಶಾಂತಿಗಾಗಿ ತನ್ನ ಬದ್ಧತೆ ಎನ್ನುತ್ತಿರುವ ಪಾಕಿಸ್ತಾನ, ಅಸಲಿಗೆ ಜಿನಿವಾ ಒಪ್ಪಂದದ ಅಂತರಾಷ್ಟ್ರೀಯ ಕಾನೂನು ಮುರಿದಿರುವುದನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ.

ಪ್ರಶ್ನೆ: ಏನಿದು ಜಿನಿವಾ ಒಪ್ಪಂದ?

ಉತ್ತರ: ಇದಕ್ಕೆ ನಾನು ಬಹಳ ಸುದೀರ್ಘ ಉತ್ತರ ನೀಡಬಾಕಾಗುತ್ತದೆ. ಆದರೆ ಸಮಯದ ಅಭಾವದ ಕಾರಣ ಸಂಕ್ಷಿಪ್ತವಾಗಿ ಹೇಳುತ್ತೇನೆ. ಯುದ್ಧದ ಸಂದರ್ಭ ಹೊರತುಪಡಿಸಿ ಒಂದು ರಾಷ್ಟ್ರದ ಸೈನಿಕ ಮತ್ತೊಂದು ರಾಷ್ಟ್ರಕ್ಕೆ ಸೆರೆ ಸಿಕ್ಕರೆ ಆತನೊಂದಿಗೆ ವ್ಯವಹರಸಿಬೇಕಾದ ರೀತಿಯನ್ನು ಜಿನಿವಾ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಪ್ರಶ್ನೆ: ಹಾಗಾದರೆ ಅಭಿನಂದನ್ ಬಿಡುಗಡೆಗೆ ಕಾರಣಗಳೇನು?

ಉತ್ತರ: ನೀವು ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಒತ್ತಡ ಪಾಕಿಸ್ತಾನದ ಮೇಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹನೋಯಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತ-ಪಾಕ್ ನಡುವಿನ ತ್ವೇಷಮಯ ವಾತಾವರಣದ ಮಧ್ಯೆ ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಬರಲಿದೆ ಎಂದು ಹೇಳಿದ್ದರು. ಅಂದರೆ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆಗೊಳಿಸುವಂತೆ ಅಮೆರಿಕ ಒತ್ತಡ ಹೇರಿರುವ ಸಾಧ್ಯತೆ ಇದೆ. ಅಲ್ಲದೇ ಇಂದು ಸಂಜೆ ಸೌದಿ ಅಧಿಕಾರಿಗಳು ಪಾಕಿಸ್ತಾನಕ್ಕೆ ಬರಲಿದ್ದು, ಅವರು ಬರುವುದಕ್ಕೂ ಮೊದಲು ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲು ಪಾಕ್ ನಿರ್ಧರಿಸಿದೆ.

ಪ್ರಶ್ನೆ: ಅಂದರೆ ಅಭಿನಂದನ್ ಬಿಡುಗಡೆಯನ್ನು ಭಾರತದ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಬಹುದೇ?
ಉತ್ತರ: ಖಂಡಿತ ಇದು ಭಾರತದ ರಾಜತಾಂತ್ರಿಕ ಗೆಲುವು. ನೋಡಿ, ತನ್ನ ಪೈಲೆಟ್ ನನ್ನು ಕಳೆದುಕೊಳ್ಳುವ ಭೀತಿ ಇದ್ದರೂ ಭಾರತ ಮಾತ್ರ ಈ ವಿಷಯದಲ್ಲಿ ಯಾವುದೇ ರಾಜಿ ಅಥವಾ ಮಾತುಕತೆಗೆ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೇ ಅಭಿನಂದನ್ ಅವರನ್ನು ಬೇಷರತ್ ಬಿಡುಗಡೆ ಮಾಡುವಂತೆ ಎಚ್ಚರಿಕೆ ನೀಡಿತ್ತು. ಅಂದರೆ ರಾಜತಾಂತ್ರಿಕ ಮಾರ್ಗದಲ್ಲಿ ತನ್ನ ಸೈನಿಕನನ್ನು ಹೇಗೆ ಕರೆಸಿಕೊಳ್ಳಬೇಕು ಎಂಬುದು ಭಾರತಕ್ಕೆ ಹೇಳಿ ಕೊಡಬೇಕಾದ ಅಗತ್ಯ ಇಲ್ಲ ಎಂದೇ ಇದರ ಅರ್ಥ ಅಲ್ಲವೇ?.

ಪ್ರಶ್ನೆ: ಅಭಿನಂದನ್ ಬಿಡುಗಡೆ ನಾಳೆ ಏಕೆ?, ಮತ್ತು ಬಿಡುಗಡೆ ಪ್ರಕ್ರಿಯೆ ಹೇಗೆ?

ಉತ್ತರ: ಇದು ಪಾಕಿಸ್ತಾನದ ತಂತ್ರ. ಅಭಿನಂದನ್ ಬಿಡುಗಡೆ ಕುರಿತು ಭಾರತ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ತಿಳಿಯಲು ನಾಳೆವರೆಗಿನ ಸಮಯ ತೆಗೆದುಕೊಳ್ಳಲಾಗಿದೆ.

ಇನ್ನು ಬಿಡುಗಡೆ ಪ್ರಕ್ರಿಯೆ ಕುರಿತು ಭಾರತೀಯ ವಾಯುಸೇನೆ ಅಧಿಕೃತ ಹೇಳಿಕೆ ನೀಡಬೇಕಿದ್ದು, ತಮ್ಮ ಅಭಿಪ್ರಾಯದಂತೆ ನಾಳೆ ವಾಘಾ ಗಡಿ ಮೂಲಕ ಅಭಿನಂದನ್ ಭಾರತಕ್ಕೆ ಬರಲಿದ್ದಾರೆ. ಆದರೆ ಈ ಕುರಿತು ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ.

ಸುವರ್ಣನ್ಯೂಸ್.ಕಾಂ: ಧನ್ಯವಾದಗಳು ಸರ್

ನಿತಿನ್ ಗೋಖಲೆ: ಧನ್ಯವಾದ, ಜೈ ಹಿಂದ್.......

 

ಯಾರು ನಿತಿನ್ ಗೋಖಲೆ?
ನಿತಿನ್ ಗೋಖಲೆ 1983 ರಿಂದ ಮಲ್ಟಿಮೀಡಿಯಾ ವರದಿಗಾರರಾಗಿದ್ದಾರೆ. ಇತ್ತೀಚೆಗೆ ಲೇಖಕ, ಮಾಧ್ಯಮ ತರಬೇತುದಾರ ಮತ್ತು ಸಂಶೋಧಕರಾಗಿ ಮತ್ತು ಪೂರ್ಣಾವಧಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ಮಿಲಿಟರಿ, ಯುದ್ಧ, ಸಾಮರಿಕ ಘಟನೆಗಳ ಕುರಿತು ನಿತಿನ್ ಗೋಖಲೆ ಒಟ್ಟು ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಇಷ್ಟೇ ಅಲ್ಲದೇ ನಿತಿನ್ ಅವರದ್ದು ಸಾಕ್ಷ್ಯಚಿತ್ರಗಳನ್ನು ನಿರ್ಮಾಣ ಕಾರ್ಯದಲ್ಲೂ ಎತ್ತಿದ ಕೈ. 

ದೇಶದ ಉನ್ನತ ರಕ್ಷಣಾ ಸಂಸ್ಥೆಗಳಲ್ಲಿ ನಿಯಮಿತ ಭೇಟಿ ನೀಡುವ ಬೋಧಕರಾಗಿಯೂ ನಿತಿನ್ ಗೋಖಲೆ ಕರ್ತವ್ಯನಿರತರಾಗಿದ್ದಾರೆ. ಪ್ರಸ್ತುತ ನಿತಿನ್ ಗೋಖಲೆ ‘Diffense and Security Alert’ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಿತಿನ್ ಗೋಖಲೆ ಭಾರತದ ರಕ್ಷಣಾ ಮತ್ತು ಭದ್ರತಾ ವಿಶ್ಲೇಷಕರಾಗಿ ಮನೆಮಾತಾಗಿದ್ದಾರೆ.