20 ನಿಮಿಷಗಳ ಕಾಲ ಪರಿಶೀಲನೆ ನಡೆಸಿದ ಅಧಿಕಾರಿಗಳು ಜನಾರ್ದನ ರೆಡ್ಡಿಗೆ 16 ಪ್ರಶ್ನೆಗಳನ್ನೊಳಗೊಂಡ ನೋಟಿಸ್​ ನೀಡಿದ್ದಾರೆ.

ಬೆಂಗಳೂರು(ನ.21): ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದ ಗಣಿ ಧಣಿ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಮಾಡಿ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಮದುವೆಗೆ ಖರ್ಚು ಮಾಡಲಾದ ಹಣದ ಪ್ರತೀ ವಿವರವನ್ನೂ ನೀಡುವಂತೆ ಐಟಿ ಅಧಿಕಾರಿಗಳು 16 ಪ್ರಶ್ನೆಗಳಿರುವ ನೋಟಿಸ್​ ನೀಡಿದ್ದಾರೆ.

ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವ್ಯಯಿಸಿ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಎಲ್ಲರ ಹುಬ್ಬೇರಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿದ ಎರಡು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಒಡೆತನದ ಮನೆ ಮತ್ತು ಒಎಂಸಿ ಹಾಗೂ ಎಎಂಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂರು ಪುಟಗಳ ನೋಟಿಸ್​ ಜಾರಿ ಮಾಡಿದ್ದಾರೆ.

ಆದಾಯ ತೆರಿಗೆ ಸಹಾಯಕ ನಿರ್ದೇಶಕ ಸಂಜೀವ್​ ಕುಮಾರ್​ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಮೂರು ಪುಟಗಳ ನೋಟಿಸ್​ ನೀಡಿದ್ದಾರೆ.

ರೆಡ್ಡಿಗೆ ಐಟಿ ಅಧಿಕಾರಿಗಳಿಂದ 16 ಪ್ರಶ್ನೆಗಳು

1. ಮದುವೆಗೆ ಮೊದಲು, ಮದುವೆಯಲ್ಲಿ ಮತ್ತು ಮದುವೆ ನಂತರ ನಡೆದ ಕಾರ್ಯಕ್ರಮಗಳ ವಿವರ ಕೊಡಿ?

2. ಇವೆಂಟ್​ ಮ್ಯಾನೇಜ್​ಮೆಂಟ್​ ಸಂಸ್ಥೆ ನಿರ್ವಹಣೆ ಮಾಡಿದ ಕಾರ್ಯಕ್ರಮಗಳ ವಿವರ ನೀಡಿ?

3. ಮದುವೆಯಲ್ಲಿ ಮನರಂಜನೆಗಾಗಿ ಖರ್ಚಾದ ಹಣ ಎಷ್ಟು?

4. ಊಟ,ಪೆಂಡಾಲ್, ಫ್ಲವರ್​ ಡೆಕೋರೇಷನ್​, ಸೆಕ್ಯೂರಿಟಿ, ಫೋಟೋಗ್ರಫಿ, ಹೂವಿನ ಅಲಂಕಾರ, ಧಾರ್ಮಿಕ ಕಾರ್ಯಕ್ರಮಗಳಿಗೆ ಖರ್ಚಾದ ಹಣದ ಮೊತ್ತ ಎಷ್ಟು?

5. ಅದ್ದೂರಿ ಮದುವೆ ಪತ್ರಿಕೆಯ ಖರ್ಚಿನ ಬಗ್ಗೆ ವಿವರಣೆ ಕೊಡಿ

6. ಒಡವೆ, ವಸ್ತ್ರ ಸರಬರಾಜು ಮಾಡಿದ ವಿವರ ಮತ್ತು ಖರ್ಚಿನ ಬಗ್ಗೆ ಮಾಹಿತಿ

7. ಕ್ರೆಡಿಟ್​,ಡಿಬಿಟ್​ ಕಾರ್ಡ್​ ಮೂಲಕ ಖರ್ಚಾದ ಹಣವೆಷ್ಟು?

8. ನಗದು ರೂಪದಲ್ಲಿ ಖರ್ಚು ಮಾಡಿದ ಹಣ ಎಷ್ಟು?, ಅದರ ಮೂಲದ ಏನು?

9. ಬೇರೆ ರೂಪದಲ್ಲಿ ಪಾವತಿ ಮಾಡಿದ ಖರ್ಚಿನ ವಿವರ ಕೊಡಿ

10. ಮದುವೆಯ ಸಂದರ್ಭದಲ್ಲಿ ಖರ್ಚಾದ ಹಣ ಎಷ್ಟು, ಅದರ ಮೂಲ ಯಾವುದು?

11.ಅತಿಥಿಗಳಿಂದ ಪಡೆದ ಗಿಫ್ಟ್​ ಮತ್ತು ಕೊಟ್ಟ ಗಿಫ್ಟ್​ ಬಗ್ಗೆ ಮಾಹಿತಿ ನೀಡಿ

12. ಇನ್ನೂ ಪಾವತಿಸಬೇಕಾದ ಹಣ ಎಷ್ಟು? ಈ ಬಗ್ಗೆ ಮಾಹಿತಿ ನೀಡಿ

13. ಮದುವೆಯನ್ನು ನಿರ್ವಹಿಸಿದವರ ಬಗ್ಗೆಯೂ ಪೂರ್ಣ ವಿವರ ತಿಳಿಸಿ

14. ಮದುವೆಗೆ ವಿವಿಧ ಸೇವೆ ನೀಡಿದವರ ಬಗ್ಗೆ ಮಾಹಿತಿ ನೀಡಿ

15. ಮದುವೆಗೆ ಸಂಬಂಧಿಸಿದ ಇನ್ಯಾವುದೇ ಮಾಹಿತಿ ಇದ್ದರೆ ನೀಡಿ?

16. ನೀವು ಕೊಟ್ಟ ಎಲ್ಲ ಮಾಹಿತಿಗಳು ಸತ್ಯವಾಗಿದೆ ಎಂದು ದೃಡೀಕರಿಸಿ

ಈ ಎಲ್ಲ ಪ್ರಶ್ನೆಗಳಿಗೆ ನವೆಂಬರ್​ 25ರ ಒಳಗೆ ಉತ್ತರಿಸುವಂತೆ ಜನಾರ್ದನ ರೆಡ್ಡಿಗೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಳೆದ ವಾರ ಆರ್​ಟಿಐ ಕಾರ್ಯಕರ್ತ ನರಸಿಂಹಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ.

ಬಳ್ಳಾರಿ ಪ್ರವೇಶಕ್ಕೆ ಜನಾರ್ದನ ರೆಡ್ಡಿಗೆ ನಿರ್ಬಂಧವನ್ನು ಮಗಳ ಮದುವೆಯ ಹಿನ್ನೆಲೆಯಲ್ಲಿ ಸಡಿಲಿಸಿ ಅನುಮತಿ ನೀಡಲಾಗಿತ್ತು. ಕೋರ್ಟ್​`ನ ಆದೇಶದಂತೆ ಇಂದು ಜನಾರ್ದನ ರೆಡ್ಡಿ ಬಳ್ಳಾರಿ ತೊರೆಯಬೇಕಾಗಿದೆ. ಕೊನೆಯ ದಿನವೇ ಐಟಿ ಅಧಿಕಾರಿಗಳು ರೇಡ್ ನಡೆಸಿ ಶಾಕ್​ ನೀಡಿದ್ದಾರೆ.

 ಶಶಿಶೇಖರ್​ ಮತ್ತು ಶ್ರೀನಿವಾಸಶೆಟ್ಟಿ ಸುವರ್ಣ ನ್ಯೂಸ್​ ಬೆಂಗಳೂರು ಮತ್ತು ಬಳ್ಳಾರಿ