ನವದೆಹಲಿ(ಜು.,26): ಗುಂಪು ಹಲ್ಲೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ಕ್ಷೇತ್ರಗಳ ಸುಮಾರು 49 ಗಭ್ಯರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದೀಗ ಈ ಪತ್ರಕ್ಕೆ ಪ್ರತಿಯಾಗಿ ಸುಮಾರು 62 ಗಣ್ಯರು ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್‌, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿ ಸೊನಾಲ್ ಮಾನ್‌ಸಿಂಗ್ ಸೇರಿದಂತೆ 62 ಸೆಲೆಬ್ರಿಟಿಗಳು ಈ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದು, ಜಾತ್ಯಾತೀತತೆಯ ಸ್ವಯಂಘೋಷಿತ ಪೋಷಕರು ಮತ್ತು ಆತ್ಮಸಾಕ್ಷಿಯ ಪಾಲಕರು ತಮ್ಮ ರಾಜಕೀಯ ಪೂರ್ವಗ್ರಹಗಳ ಹಿನ್ನೆಲೆಯಲ್ಲಿ ಬರದಿರುವ ಪತ್ರಕ್ಕೆ ಮನ್ನಣೆ ಕೊಡಬೇಡಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

'ಸುಳ್ಳು ಪ್ರತಿಪಾದನೆ ಮತ್ತು ಆಯ್ದ ಆಕ್ರೋಶ' ಎಂಬ ತಲೆಬರಹದಡಿ ಬಹಿರಂಗ ಪತ್ರ ಬರೆದಿರುವ 62 ಸೆಲೆಬ್ರಿಟಿಗಳು, ಗುಂಪು ಹಲ್ಲೆಗೆ ಸಂಬಂಧಿಸಿದಂತೆ ಹಿಂದುತ್ವ ಕುರಿತು ತಪ್ಪು ಕಲ್ಪನೆ ಮೂಡುವಂತೆ ಮಾಡಲು ಕೆಲವರು ಪ್ರಯತ್ನಿಸಿದ್ದು, ಇದಕ್ಕೆ ಸೊಪ್ಪು ಹಾಕದಂತೆ ಮನವಿ ಮಾಡಿದ್ದಾರೆ.

ದೇಶದ ಸಂಸ್ಕೃತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಾಳುಗೆಡವಲು ಕೆಲವು ಆಯ್ದ ಘಟನೆಗಳನ್ನು ತಪ್ಪಾಗಿ ಬಿಂಬಿಸುವ ದುರುದ್ದೇಶವನ್ನು ವಿಫಲಗೊಳಿಸುವುದೇ ನಮ್ಮ ಉದ್ದೇಶ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.