ಬರೋಬ್ಬರಿ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತು. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ರಣಬೀರ್ ಆಡಿರುವ ಮಾತುಗಳು ಇದೀಗ ಮತ್ತೊಂದು ಚರ್ಚೆಗೆ ಕಾರಣವಾಗಿವೆ.

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ' ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಬರೋಬ್ಬರಿ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪೌರಾಣಿಕ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತು. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ರಣಬೀರ್ ಆಡಿರುವ ಮಾತುಗಳು ಇದೀಗ ಮತ್ತೊಂದು ಚರ್ಚೆಗೆ ಕಾರಣವಾಗಿವೆ. 'ರಾಮಾಯಣ' ಸಿನಿಮಾ ಮೂರು ಭಾಗಗಳಲ್ಲಿ ಬರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

'ರಾಮಾಯಣ 3' ಬಗ್ಗೆ ಸುಳಿವು ನೀಡಿದ್ರಾ ರಣಬೀರ್?

'ರಿವ್ಯೂ ನೇಷನ್‌'ಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್, 'ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿರುವ ಅನುಭವದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಎರಡನೇ ಭಾಗದ ಚಿತ್ರೀಕರಣದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಎರಡನೇ ಭಾಗದ ಶೇ.50ರಷ್ಟು ಕೆಲಸ ಮುಗಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಇದೇ ವೇಳೆ ಅವರು ಆಡಿದ ಮತ್ತೊಂದು ಮಾತು ಅಭಿಮಾನಿಗಳ ಗಮನ ಸೆಳೆದಿದೆ. "ಎರಡನೇ ಭಾಗ ಅಥವಾ ಮೂರನೇ ಭಾಗ ಯಾವುದಾದರೂ ಇದ್ದರೆ, ಅದನ್ನು ಮುಗಿಸಿದ ನಂತರವೂ ಈ ಸಿನಿಮಾ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ನನಗೆ ಅನಿಸುತ್ತದೆ. ಇದು ಜೀವನದಲ್ಲಿ ಒಮ್ಮೆ ಸಿಗುವ ಅವಕಾಶ. ಇದು ಕೇವಲ ವೃತ್ತಿಜೀವನವನ್ನು ರೂಪಿಸುವ ಸಿನಿಮಾ ಅಲ್ಲ, ಜೀವನವನ್ನೇ ಬದಲಿಸುವ ಅನುಭವ" ಎಂದು ರಣಬೀರ್ ಹೇಳಿದ್ದಾರೆ.

ರಣಬೀರ್ ಮಾತಿನಲ್ಲಿ 'ಮೂರನೇ ಭಾಗ'ದ ಉಲ್ಲೇಖ ಕೇಳಿಬರುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರತಂಡ ಈವರೆಗೆ ಎರಡು ಭಾಗಗಳ ಯೋಜನೆಯನ್ನೇ ಘೋಷಿಸಿದ್ದರೂ, ಮೂರನೇ ಭಾಗದ ಸಾಧ್ಯತೆಯನ್ನು ರಣಬೀರ್ ಪರೋಕ್ಷವಾಗಿ ಹೇಳಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

'ಸ್ಪಾಯ್ಲರ್ ಕಪೂರ್' ಎಂದು ಕಾಲೆಳೆದ ಫ್ಯಾನ್ಸ್!

ರಣಬೀರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. "ರಣಬೀರ್ ಮತ್ತೆ ಸ್ಪಾಯ್ಲರ್ ಕೊಟ್ಟಿದ್ದಾರೆ" ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, "ಈ ಮಾತನ್ನು ಸಂದರ್ಶನದಿಂದ ತೆಗೆದುಹಾಕಬಹುದಿತ್ತು, ಆದರೆ ಯಾಕೆ ಹಾಗೆ ಮಾಡಿಲ್ಲವೋ?" ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಅಭಿಮಾನಿ ಹಾಲಿವುಡ್ ನಟ ಟಾಮ್ ಹಾಲೆಂಡ್‌ಗೆ ಹೋಲಿಸಿ, "ಬಾಲಿವುಡ್‌ನ ಟಾಮ್ ಹಾಲೆಂಡ್" ಎಂದು ಕಾಮೆಂಟ್ ಮಾಡಿದ್ದಾರೆ. ಸಿನಿಮಾ ವಿಚಾರದಲ್ಲಿ ಕೆಲವೊಮ್ಮೆ ಅಚಾನಕ್ ಆಗಿ ರಹಸ್ಯ ಬಿಟ್ಟುಕೊಡುವ ಟಾಮ್ ಹಾಲೆಂಡ್ ರೀತಿಯಲ್ಲೇ ರಣಬೀರ್ ಕೂಡ ನಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ತಮಾಷೆ ಮಾಡುತ್ತಿದ್ದಾರೆ.

'ರಾಮಾಯಣ 3' ಸಾಧ್ಯತೆ ಬಗ್ಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದೇನು?

ಇನ್ನು 'ರಾಮಾಯಣ' ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಮೂರನೇ ಭಾಗದ ಸಾಧ್ಯತೆ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಆರಂಭದಲ್ಲಿ ರಾಮಾಯಣದ ಕಥೆಯನ್ನು ಮೂರು ಭಾಗಗಳಲ್ಲಿ ತೋರಿಸುವ ಆಲೋಚನೆ ಚಿತ್ರತಂಡಕ್ಕಿತ್ತು. ಆದರೆ, ಬಳಿಕ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡು ಎರಡು ಭಾಗಗಳಲ್ಲಿ ಸಿನಿಮಾ ನಿರ್ಮಿಸಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದ್ದರು.

ಆದರೆ, ಭವಿಷ್ಯದಲ್ಲಿ ಮೂರನೇ ಭಾಗ ಸೇರ್ಪಡೆಯಾಗುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. "ಸಿನಿಮಾಗೆ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ನೋಡಿದ ಬಳಿಕ ಮತ್ತೆ ಚರ್ಚೆ ನಡೆಸಬಹುದು. ಕಥೆಗೆ ಇನ್ನೇನಾದರೂ ಸೇರಿಸಬೇಕೇ ಅಥವಾ ಕಡಿತಗೊಳಿಸಬೇಕೇ ಎಂಬುದನ್ನು ಆಗ ನಿರ್ಧರಿಸಬಹುದು. ಈಗಲೇ ಯಾವುದನ್ನೂ ಹೇಳಲು ಸಾಧ್ಯವಿಲ್ಲ" ಎಂಬರ್ಥದಲ್ಲಿ ನಮಿತ್ ಪ್ರತಿಕ್ರಿಯಿಸಿದ್ದರು.

ಯಾವಾಗ ತೆರೆಕಾಣಲಿದೆ 'ರಾಮಾಯಣ'?

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಸಿನಿಮಾದ ಮೊದಲ ಭಾಗವು 2026ರ ನವೆಂಬರ್ 5ರಂದು ದೀಪಾವಳಿಗೂ ಮುನ್ನ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ಭಾಗವು 2027ರ ದೀಪಾವಳಿ ಸಂದರ್ಭದಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

ಸದ್ಯಕ್ಕೆ ಚಿತ್ರತಂಡ ಎರಡು ಭಾಗಗಳನ್ನಷ್ಟೇ ಯೋಜಿಸಿದೆ. ಆದರೆ ರಣಬೀರ್ ಮಾತು ಮತ್ತು ನಿರ್ಮಾಪಕರ ಹಿಂದಿನ ಹೇಳಿಕೆಗಳು 'ರಾಮಾಯಣ 3' ಬಗ್ಗೆ ಹೊಸ ಕುತೂಹಲ ಹುಟ್ಟಿಸಿವೆ. ನಿಜಕ್ಕೂ ಮೂರನೇ ಭಾಗ ಬರಲಿದೆಯೇ ಅಥವಾ ರಣಬೀರ್ ಮಾತು ಕೇವಲ ಆಕಸ್ಮಿಕ ಉಲ್ಲೇಖವೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.