ನವದೆಹಲಿ(ಜು.24): ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ವಿವಿಧ ಕ್ಷೇತ್ರಗಳ 49 ಗಣ್ಯ ವ್ಯಕ್ತಿಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ದೇಶದಲ್ಲಿ ಒಂದು ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಗುಂಪು ಹಲ್ಲೆಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವುದು ಇಂದಿನ ತುರ್ತು ಅಗತ್ಯ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಪ್ರಧಾನಿ ಮೋದಿ ಅವರಿಗೆ ಬರದಿರುವ ಪತ್ರದಲ್ಲಿ ಪ್ರಮುಖವಾಗಿ ಚಿಂತಕ ರಾಮಚಂದ್ರ ಗುಹಾ, ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್, ಗಾಯಕಿ ಶುಭಾ ಮುದ್ಗಲ್, ನಟಿ ಕೊಂಕಣಾ ಸೇನ್ ಶರ್ಮಾ, ಅನುರಾಗ್ ಕಶ್ಯಪ್, ಹಾಗೂ ಮಣಿರತ್ನಂ ಸೇರಿದಂತೆ ಒಟ್ಟು 49 ಗಣ್ಯ ವ್ಯಕ್ತಿಗಳು ಸಹಿ ಮಾಡಿದ್ದಾರೆ.

ಗುಂಪು ಹಲ್ಲೆಗಳನ್ನು ಮಾಡುವವರ ವಿರುದ್ಧ ತುರ್ತು ಕಠಿಣ ಕ್ರಮ ಕೈಗೊಳ್ಳಲು ಅನುವಾಗುವಂತೆ ಅಗತ್ಯ ಕಾನೂನು ರೂಪಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಲಾಗಿದೆ.