ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಉರುಳುಸೇವೆ ಮಾಡುವುದು, ದೀರ್ಘದಂಡ ನಮಸ್ಕಾರ ಹಾಕುವುದು, ಸಾಲದೆ ಹೋದ್ರೆ ನಗ ನಾಣ್ಯಗಳನ್ನು ದೇಣಿಗೆ ಅರ್ಪಿಸುವುದು ಸಾಮಾನ್ಯ, ಆದ್ರೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಸರಾಯಿ ಬಾಟಲಿಗಳ ಹರಕೆ ಹೊತ್ತು ಅದು ಸಿದ್ಧಿಯಾದರೆ ಸರಾಯಿ ಬಾಟಲಿಗಳನ್ನೇ ತಂದು ನೈವೇದ್ಯ ಅರ್ಪಿಸುತ್ತಾರೆ ಅಂದರೆ ನಂಬ್ತೀರಾ. ಹೌದು, ನಂಬಲೇಬೇಕು. ಇಂತಹ ವಿಶೇಷಕ್ಕೆ ಸಾಕ್ಷಿಯಾಗುವುದು ಬಾಗಲಕೋಟೆ ಜಿಲ್ಲೆಯ ಕೆಲೂಡಿಯ ರಂಗನಾಥಸ್ವಾಮಿ ಜಾತ್ರೆ. ಈ ಕುರಿತ ವಿಶೇಷ ವರದಿ

ಬಾಗಲಕೋಟೆ(ಮಾ.23): ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಉರುಳುಸೇವೆ ಮಾಡುವುದು, ದೀರ್ಘದಂಡ ನಮಸ್ಕಾರ ಹಾಕುವುದು, ಸಾಲದೆ ಹೋದ್ರೆ ನಗ ನಾಣ್ಯಗಳನ್ನು ದೇಣಿಗೆ ಅರ್ಪಿಸುವುದು ಸಾಮಾನ್ಯ, ಆದ್ರೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಸರಾಯಿ ಬಾಟಲಿಗಳ ಹರಕೆ ಹೊತ್ತು ಅದು ಸಿದ್ಧಿಯಾದರೆ ಸರಾಯಿ ಬಾಟಲಿಗಳನ್ನೇ ತಂದು ನೈವೇದ್ಯ ಅರ್ಪಿಸುತ್ತಾರೆ ಅಂದರೆ ನಂಬ್ತೀರಾ. ಹೌದು, ನಂಬಲೇಬೇಕು. ಇಂತಹ ವಿಶೇಷಕ್ಕೆ ಸಾಕ್ಷಿಯಾಗುವುದು ಬಾಗಲಕೋಟೆ ಜಿಲ್ಲೆಯ ಕೆಲೂಡಿಯ ರಂಗನಾಥಸ್ವಾಮಿ ಜಾತ್ರೆ. ಈ ಕುರಿತ ವಿಶೇಷ ವರದಿ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲೂಡಿ ರಂಗನಾಥಸ್ವಾಮಿಗೆ ಪ್ರತಿವರ್ಷ ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ವಿಶೇಷತೆಯೆಂದರೆ ಇಲ್ಲಿ ಮದ್ಯದ ಸರಾಯಿ ಬಾಟಲಿಗಳದ್ದೇ ದರ್ಬಾರ್. ಅಲ್ಲಿಗೆ ಹೋಗುವ ಭಕ್ತರು ದೇವರಿಗೆ ಸರಾಯಿ ತುಂಬಿದ ಬಾಟಲಿಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಸಂತಾನ ಭಾಗ್ಯ ಇಲ್ಲದವರು, ಮದುವೆಯಾಗದವರು, ಮನೆಯ ಆರ್ಥಿಕ ದುಸ್ಥಿತಿಯಿಂದ ಬಳಲಿದವರು ತಮ್ಮ ಬಯಕೆ ಈಡೇರಿದರೆ ಇಂತಿಷ್ಟು ಸರಾಯಿ ಬಾಟಲಿಗಳನ್ನು ದೇವಾಲಯಕ್ಕೆ ತಂದು ನೈವೇದ್ಯ ನೀಡುವುದಾಗಿ ಬೇಡಿಕೊಳ್ಳುತ್ತಾರೆ. ಬಳಿಕ ವರ್ಷದ ಜಾತ್ರೆ ಸಮಯದಲ್ಲಿ ತಮ್ಮ ಹರಕೆಯ ಈಡೇರಿಸಿದ ನಿಮಿತ್ಯ ವಿವಿಧ ರೀತಿಯ ಸರಾಯಿಯ ಹತ್ತೋ ಇಪ್ಪತ್ತೋ ಅಥವಾ ಮೂವತ್ತೋ ಬಾಟಲಿಗಳನ್ನ ತಂದು ದೇವರಿಗೆ ನೈವೇದ್ಯ ನೀಡಿ ಅದನ್ನೇ ತೀರ್ಥವಾಗಿ ಪಡೆದು ಕೃತಾರ್ಥರಾಗುತ್ತಾರೆ.

ಸಾಮಾನ್ಯವಾಗಿ ಈ ಜಾತ್ರೆಗೆ ಪ್ರತಿವರ್ಷ ಆಂದ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಭಕ್ತರು ಆಗಮಿಸುವುದು ವಿಶೇಷ. ಈ ರೀತಿ ಸಂಪ್ರದಾಯ ನಡೆದುಕೊಂಡು ಬಂದಿರುವುದು ಅಚ್ಚರಿಯ ಸಂಗತಿ. ಇದು ರಂಗನಾಥ ಸ್ವಾಮಿಯ ಮಹಿಮೆ ಅಂತಾರೆ ಜಾತ್ರೆಗೆ ಬಂದ ಯಾತ್ರಿಕರು.

ಒಟ್ಟಿನಲ್ಲಿ ಹರಕೆ ತೀರಿಸಲು ಸರಾಯಿ ಬಾಟಲಿಗಳೇ ಬೇಕು ಎನ್ನುವುದು ಬಾಗಲಕೋಟೆ ಜಿಲ್ಲೆಯ ಕೆಲೂಡಿ ರಂಗನಾಥಸ್ವಾಮಿಯ ಜಾತ್ರೆಯ ವಿಶೇಷ.