Asianet Suvarna News Asianet Suvarna News

ಸಿದ್ದುಗೆ ಸವಾಲ್, ಮೋದಿಯನ್ನೂ ಮೀರಿಸ್ತಾರಾ? 1100 ಅಸ್ತ್ರ! ಇದು ಬಾಬು ‘ಬಾಂಬ್’

ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಶಾಕ್ ಆಗಿರಲಿಲ್ಲ. ಆದರೆ ಇದೇ ಫಸ್ಟ್ ಟೈಂ. ಮೋದಿ ಮೈಂಡು ಫಾಸ್ಟಾಗಿ ಆಲೋಚನೆ ಮಾಡೋದಕ್ಕೆ ಶುರು ಮಾಡಿದೆ. ಆಂಧ್ರಪ್ರದೇಶದಲ್ಲಿ ಆಗ್ತಾ ಇರೋ ಬದಲಾವಣೆಗಳನ್ನ ಕಂಡು, ಬೆರಗುಗಣ್ಣಿನಿಂದ ನೋಡುವಂತಾಗಿದೆ. ಇದಕ್ಕೆ ಕಾರಣವಾಗಿರೋದು ಆಂಧ್ರದ ಭವಿಷ್ಯವನ್ನೇ ಬದಲಾಯಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.ಮತ್ತು ಇವರು ತೆಗೆದುಕೊಂಡ ದಿಟ್ಟ ನಿರ್ಧಾರ.

In Andhra Pradesh dial 1100 and hope corrupt official returns your bribe

ಎನ್​​.ಚಂದ್ರಬಾಬು ನಾಯ್ಡು.. ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿ,. ಸದ್ದೇ ಇಲ್ಲದೇ ಆಂದ್ರದಲ್ಲಿ ಬದಲಾವಣೆಯ ಬಿರುಗಾಳಿ ಎಬ್ಬಿಸ್ತಿರೋ ನಾಯಕ.

ವಿಭಜಿತ ಆಂಧ್ರಪ್ರದೇಶದ ಮೊಟ್ಟ ಮೊದಲ ಮುಖ್ಯಮಂತ್ರಿ. 2014ರಲ್ಲಿ ಆಂಧ್ರಪ್ರದೇಶ ಇಬ್ಭಾಗವಾದಾಗ ಸಾಕಷ್ಟು ಸವಾಲುಗಳು ನಾಯ್ಡುಗೆ ಎದುರಾಗಿದ್ವು. ಎಲ್ಲಿ ನಿಂತ್ಕೊಂಡು ಆಳ್ವಿಕೆ ಮಾಡ್ಬೇಕು? ಅಡಳಿತ ಯಂತ್ರವನ್ನು ಎಲ್ಲಿ ಸ್ಥಾಪಿಸಬೇಕು ಅನ್ನೋದೇ ದೊಡ್ಡ ಸವಾಲಾಗಿತ್ತು. ಆ ಸವಾಲುಗಳ ಮಧ್ಯೆಯೂ ಆಂಧ್ರವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ನಾಯ್ಡು.

ಆಂಧ್ರಪ್ರದೇಶದ ಇತಿಹಾಸವನ್ನ ಕೆದಕಿ ನೋಡಿದ್ರೆ, ನಾಯ್ಡು ವರ್ಚಸ್ಸು ಎಂಥಾದ್ದು ಅನ್ನೋದು ಗೊತ್ತಾಗುತ್ತೆ. ತೆಗೆದುಕೊಂಡ ಒಂದೊಂದು ನಿರ್ಧಾರಗಳೂ ಚರಿತ್ರೆಯ ಪುಟ ಸೇರಿವೆ. ದೇಶದ ರಾಜಕೀಯವನ್ನೇ ಬದಲಾಯಿಸಿವೆ. ಇಂಥಾ ಖಡಕ್​ ಲೀಡರ್​ ಈಗ ಸದ್ದೇ ಇಲ್ಲದೇ ಒಂದು ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ. ನಾಯ್ಡು ಇಟ್ಟ ಈ ದಿಟ್ಟ ಹೆಜ್ಜೆಯನ್ನ ಕಂಡು, ಒಂದು ಕ್ಷಣ ಅವಕ್ಕಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಮೋದಿಗೆ ಶಾಕ್ ಆಗಿತ್ತು

ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಶಾಕ್ ಆಗಿರಲಿಲ್ಲ. ಆದರೆ ಇದೇ ಫಸ್ಟ್ ಟೈಂ. ಮೋದಿ ಮೈಂಡು ಫಾಸ್ಟಾಗಿ ಆಲೋಚನೆ ಮಾಡೋದಕ್ಕೆ ಶುರು ಮಾಡಿದೆ. ಆಂಧ್ರಪ್ರದೇಶದಲ್ಲಿ ಆಗ್ತಾ ಇರೋ ಬದಲಾವಣೆಗಳನ್ನ ಕಂಡು, ಬೆರಗುಗಣ್ಣಿನಿಂದ ನೋಡುವಂತಾಗಿದೆ. ಇದಕ್ಕೆ ಕಾರಣವಾಗಿರೋದು ಆಂಧ್ರದ ಭವಿಷ್ಯವನ್ನೇ ಬದಲಾಯಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.ಮತ್ತು ಇವರು ತೆಗೆದುಕೊಂಡ ದಿಟ್ಟ ನಿರ್ಧಾರ.

ಆಂಧ್ರಪ್ರದೇಶದ ಸಿಎಂ ಆಗಿರೋ ಚಂದ್ರಬಾಬು ನಾಯ್ಡು ಒಂದು ಅಸ್ತ್ರವನ್ನ ಪ್ರಯೋಗಿಸಿದ್ದಾರೆ. ಆ ಅಸ್ತ್ರವನ್ನ ಕಂಡು ಇದೀಗ ಇಡೀ ಆಂಧ್ರಪ್ರದೇಶವೇ ಬೆಚ್ಚಿ ಬಿದ್ದಿದೆ. ಯಾಕಂದ್ರೆ ನಾಯ್ಡು ಪ್ರಯೋಗಿಸಿದ ಅಸ್ತ್ರ ಭ್ರಷ್ಟರ ವಿರುದ್ಧ. ಸರ್ಕಾರಿ ಕಚೇರಿಗಳಲ್ಲಿ ಕೂತ್ಕೊಂಡು ಲಂಚ ತಗೊಳ್ಳೋ ಲಂಚ ಬಾಕರ ವಿರುದ್ಧ.

ಆಂಧ್ರದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ

ಆಂಧ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಂಡ ಕಂಡಲ್ಲಿ ಲಂಚಬಾಕರು ಹುಟ್ಟಿಕೊಳ್ತಿದ್ದಾರೆ. ಕುಂತ್ರೂ ಲಂಚ ನಿಂತ್ರೂ ಲಂಚ. ಹೆಜ್ಜೆ ಹೆಜ್ಜೆಗೂ ಲಂಚಾವತಾರ ಮಿತಿ ಮೀರಿದೆ. ಒಂದು ಸಣ್ಣ ಕೆಲಸ ಆಗ್ಬೇಕು ಅಂದ್ರೂ ದುಡ್ಡು ಕೊಡಲೇಬೇಕು. ಲಂಚ ಇಲ್ದಿದ್ರೆ ಗರ್ಭದಲ್ಲಿರೋ ಮಗೂನು ಹುಟ್ಟಲ್ಲ. ಲಂಚ ಇಲ್ದಿದ್ರೆ ಸತ್ತವನೂ ಸಮಾಧಿ ಸೇರಲ್ಲ. ಲಂಚವೇ ಪ್ರಪಂಚ ಅನ್ನುವ ಮಂದಿ ವಿರುದ್ಧ ಪ್ರಬಲ ಅಸ್ತ್ರವನ್ನ ಪ್ರಯೋಗಿಸಿದ್ದಾರೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು.

ಭ್ರಷ್ಟಾಚಾರದ ವಿರುದ್ಧ ಮೋದಿನೂ ಹೋರಾಡ್ತಿದ್ದಾರೆ. ಆದರೆ ಮೋದಿಯ ಅಸ್ತ್ರಕ್ಕಿಂತ ಚಂದ್ರಬಾಬು ನಾಯ್ಡು ಪ್ರಯೋಗಿಸಿದ ಅಸ್ತ್ರ ತುಂಬಾನೇ ಪವರ್​​ಫುಲ್ಲಾಗಿದೆ. ಭ್ರಷ್ಟರ ವಿರುದ್ಧ ಅಸ್ತ್ರ ಪ್ರಯೋಗಿಸಿದ ಮೋದಿ, ಹಳೆಯ ನೋಟ್​ಗಳನ್ನ ಬ್ಯಾನ್ ಮಾಡಿದ್ರು. ಆ ಮೂಲಕ ಕಾಳಧನಿಕರಿಗೆ ಶಾಕ್​ ನೀಡಿದ್ರು. ಇದರ ಜೊತೆಗೆ ಬೇನಾಮಿ ಆಸ್ತಿ ಹೊಂದಿದ ಭ್ರಷ್ಟರ ವಿರುದ್ಧ ಮತ್ತೊಂದು ಅಸ್ತ್ರವನ್ನೂ ಬೀಸಿದ್ರು. ಆ ಅಸ್ತ್ರಕ್ಕೆ ದೊಡ್ಡ ದೊಡ್ಡ ಕುಳಗಳೇ ನೆಲಕ್ಕಚ್ಚಿದ್ವು.

1100 ಬಾಂಬ್'ಗೆ ಭ್ರಷ್ಟರು ಸುಸ್ತು

ಭ್ರಷ್ಟರ ವಿರುದ್ಧ ಮೋದಿ ಕಠಿಣ ಕಾನೂನುಗಳನ್ನ ಜಾರಿಗೆ ತರ್ತಿದ್ದಾರೆ. ಇದ್ರಿಂದ ದೊಡ್ಡ ದೊಡ್ಡ ಕುಳಗಳು ನೆಲಕ್ಕಚ್ಚಿವೆ. ಆದರೂ ಲಂಚಾವತಾರ ತಪ್ಪಿಲ್ಲ. ಸರ್ಕಾರಿ ಕಚೇರಿಗಳಲ್ಲಿ ದುಡ್ಡಿಗಾಗಿ ಕೈ ಒಡ್ಡೋ ಅಧಿಕಾರಿಗಳ ಕೃತ್ಯಕ್ಕೆ ಬ್ರೇಕ್​ ಬಿದ್ದಿಲ್ಲ. ಇದನ್ನರಿತ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಭ್ರಷ್ಟರ ವಿರುದ್ಧ ಮಹಾನ್ ಅಸ್ತ್ರವನ್ನ ಬೀಸಿದ್ದಾರೆ. ಆ ಅಸ್ತ್ರವೇ 1100.

1100, ಅರೇ ಇದೇನಪ್ಪಾ ಇದು. ಹಳೇ ನೋಕಿಯಾ ಫೋನ್​ ಮಾಡೆಲ್​ ಬಗ್ಗೆ ಹೇಳ್ತಿದ್ದಾರಲ್ಲ ಅಂತ ಅನ್ಕೋಬೇಡಿ. ಭ್ರಷ್ಟರ ವಿರುದ್ಧ ಚಂದ್ರಬಾಬು ನಾಯ್ಡು ಪ್ರಯೋಗಿಸಿದ ಅಸ್ತ್ರ ಇದು. ಈ ಅಸ್ತ್ರವನ್ನ ಜನಸಾಮಾನ್ಯರ ಕೈಗೆ ಕೊಟ್ಟಿರೋ ಚಂದ್ರಬಾಬು ನಾಯ್ಡು, ಭ್ರಷ್ಟರ ವಿರುದ್ಧ ಪ್ರಯೋಗಿಸಿ ಅಂತ ಆಂಧ್ರ ಜನತೆಗೆ ಕರೆ ಕೊಟ್ಟಿದ್ದಾರೆ. ನಾಯ್ಡುವಿನ ಹೊಸ ಅಸ್ತ್ರವನ್ನ ಕಂಡ ಭ್ರಷ್ಟರು ಅಕ್ಷರಶಃ ಬೆವರುತ್ತಿದ್ದಾರೆ. ಆ ಮಟ್ಟಕ್ಕೆ ಆಂಧ್ರದಲ್ಲಿ ಬಿರುಗಾಳಿ ಎನ್ನಿಸಿದೆ ನಾಯ್ಡು ಬಾಂಬ್​.

ಅಂದ್ಹಾಗೆ 1100 ಅನ್ನೋದು ಒಂದು ಫೋನ್​ ನಂಬರ್​. ಈ ಫೋನ್​ ನಂಬರ್​​ ಜನತೆಗೆ ನೀಡಿರೋ ನಾಯ್ಡು, ಲಂಚ ಪಡೆದವರ ಮಾಹಿತಿಯನ್ನ ನೀಡುವಂತೆ ಹೇಳಿದ್ದಾರೆ. ದೂರುಗಳನ್ನ ಸ್ವೀಕರಿಸೋದಕ್ಕೆ ಅಂತಲೇ ಆಂಧ್ರದಲ್ಲಿ ಒಂದು ಕಾಲ್​ ಸೆಂಟರ್​ ಕೂಡ ಓಪನ್ ಮಾಡಿದ್ದಾರೆ. ರಾಜ್ಯದ ಹಳ್ಳಿ ಹಳ್ಳಿಗಳಿಂದ ಬರೋ ಕರೆಗಳನ್ನ ಸ್ವೀಕರಿಸಿ, ಭ್ರಷ್ಟರ ವಿರುದ್ಧ ದೂರು ದಾಖಲಿಸಿಕೊಂಡು ಬೆಂಡೆತ್ತುತ್ತಿದೆ ನಾಯ್ಡು ಅಂಡ್​ ಟೀಂ.

ಈಗಾಗಲೇ 1100 ಕಾಲ್​ ಸೆಂಟರ್​ ಕಾರ್ಯಾರಂಭವಾಗಿದೆ. ಸಾಕಷ್ಟು ಮಂದಿ ಫೋನ್ ಮಾಡಿ ಭ್ರಷ್ಟರ ಮಾಹಿತಿಯನ್ನ ನೀಡ್ತಾ ಇದ್ದಾರೆ. ಅಷ್ಟೇ ಅಲ್ಲ.. ಇದ್ರಿಂದ ಭ್ರಷ್ಟರ ಎದೆಯಲ್ಲಿ ನಡುಕ ಶುರುವಾಗಿದ್ದು, ಲಂಚ ಕಂಡ್ರೆ ಸಾಕು ಕುಂತಲ್ಲೆ ಬೆವರುತ್ತಿದ್ದಾರೆ ಸರ್ಕಾರಿ ಅಧಿಕಾರಿಗಳು.

ಭಾರತಕ್ಕೆ ಐಟಿಬಿಟಿ ತಂದಿದ್ದೇ ನಾಯ್ಡು

ಚಂದ್ರಬಾಬು ನಾಯ್ಡು ಆಲೋಚನಾಶೀಲ ವ್ಯಕ್ತಿ. ಪ್ರಗತಿಪರ ಚಿಂತನೆಗಳು, ಆಧುನಿಕತೆಯ ಪ್ರಯೋಗಗಳನ್ನ ಸದಾ ಮಾಡ್ತಾನೇ ಇರ್ತಾರೆ. ಭಾರತಕ್ಕೆ ಮೊಟ್ಟ ಮೊದಲಿಗೆ ಐಟಿಬಿಟಿ ತಂದಿದ್ದೇ ನಾಯ್ಡು. ಇಂಥಾ ನಾಯ್ಡು ಇದೀಗ ಭ್ರಷ್ಟರ ವಿರುದ್ಧದ ಸಮರಕ್ಕೆ ಮುಂದಾಗಿದ್ದಾರೆ. ಅದಕ್ಕೆ ಬಳಸ್ತಿರೋ ಅಸ್ತ್ರ ಡಬಲ್ ಒನ್.. ಡಬಲ್ ಜೀರೋ..

ಚಂದ್ರಬಾಬು ನಾಯ್ಡು.. ರಾಷ್ಟ್ರ ರಾಜಕಾರಣದಲ್ಲೂ ತನ್ನದೇ ಆದ ಛಾಪು ಮೂಡಿಸಿರೋ ಜನನಾಯಕ. ಟಿಡಿಪಿ ಪಕ್ಷದ ನಾಯಕರಾಗಿರೋ ನಾಯ್ಡು, ಆಂಧ್ರದಲ್ಲಿ ಬದಲಾವಣೆಯ ಬಿರುಗಾಳಿ ತಂದಿದ್ರು. ಇವರ ಕಾರ್ಯವೈಖರಿ ಮತ್ತು ಆಲೋಚನೆಗಳನ್ನ ನೋಡಿದ್ದ ಜನ, ಇವರನ್ನೇ ಸಿಎಂ ಮಾಡಿದ್ರು. ನಾಯ್ಡು ಮೊಟ್ಟ ಮೊದಲ ಬಾರಿಗೆ ಸಿಎಂ ಆಗಿದ್ದು 1995ರಲ್ಲಿ.

ಆಗೆಲ್ಲಾ ಆಂಧ್ರಪ್ರದೇಶ ವಿಶಾಲವಾಗಿತ್ತು. ತೆಲಂಗಾಣ ಮತ್ತು ಆಂಧ್ರ ಎರಡೂ ಸೇರಿ ಅಖಂಡ ಆಂಧ್ರಪ್ರದೇಶ ಅಸ್ತಿತ್ವದಲ್ಲಿತ್ತು. ಆಗಲೇ ಟಿಡಿಪಿ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಿದ್ರು ಚಂದ್ರಬಾಬು ನಾಯ್ಡು.

ನಾಯ್ಡುರದ್ದು ಕ್ರಿಯಾಶೀಲ ವ್ಯಕ್ತಿತ್ವ

ಉದ್ಯೋಗ ಸೃಷ್ಟಿ ಆಂಧ್ರದ ಪ್ರಗತಿಗಾಗಿ ಸಾಕಷ್ಟು ಆಲೋಚನೆಗಳನ್ನ ಮಾಡಿದ್ರು ನಾಯ್ಡು. ಪರಿಣಾಮಕಾರಿ ಪ್ಲಾನ್​ಗಳನ್ನ ಜಾರಿಗೊಳಿಸಿದ್ರು. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಐಟಿಬಿಟಿಯನ್ನ ತಂದ ಖ್ಯಾತಿ ನಾಯ್ಡುಗೆ ಸಲ್ಲುತ್ತೆ. 1995ರಿಂದ 2004ರವರೆಗೆ 9 ವರ್ಷಗಳ ಕಾಲ ಸಿಎಂ ಆಗಿ ಆಳ್ವಿಕೆ ನಡೆಸಿದ್ರು. ಇವ್ರ ಕಾರ್ಯವೈಖರಿಯನ್ನ ಕಂಡಿದ್ದ ಜನ ಎರಡನೇ ಸಲವೂ ಇವ್ರನ್ನೇ ಸಿಎಂ ಮಾಡಿದ್ರು. ಆಗಲೂ ಆಂಧ್ರ ಪ್ರಗತಿಪಥದತ್ತ ಮುಖ ಮಾಡಿತ್ತು. ಆದ್ರೆ ನಂತರದಲ್ಲಿ ವೈ.ಎಸ್. ರಾಜಶೇಖರ್​ ನೇತೃತ್ವದಲ್ಲಿ ಕಾಂಗ್ರೆಸ್​ ಸರ್ಕಾರ ಆಂಧ್ರದಲ್ಲಿ ಅಧಿಕಾರ ಹಿಡೀತು. 2014ರಲ್ಲಿ ಅಖಂಡ ಆಂಧ್ರಪ್ರದೇಶ ಇಬ್ಭಾಗವಾಯ್ತು. ಕೆಸಿಆರ್​ ನೇತೃತ್ವದಲ್ಲಿ ತೆಲಂಗಾಣ ಸ್ವಾತಂತ್ರ್ಯ ರಾಜ್ಯವಾಗಿ ಉದಯವಾಯ್ತು. ಇಬ್ಭಾಗವಾದ ಆಂಧ್ರದ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ರು ಚಂದ್ರಬಾಬು ನಾಯ್ಡು.

ಕೊಟ್ಟ ಲಂಚ ವಾಪಸ್ ಬರ್ತಿದೆ

1995 ರಿಂದ 2004ರವರೆಗೆ. ನಾಯ್ಡು ಆಡಳಿತವನ್ನ ಮೆಚ್ಚಿಕೊಂಡಿದ್ರು ಜನ. ಆಂಧ್ರ ಇಬ್ಭಾಗವಾದಾಗ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿದ್ವು. ಈ ಸಮಸ್ಯೆಗಳನ್ನ ಮೆಟ್ಟಿ ನಿಂತು, ಮತ್ತೆ ಆಂಧ್ರವನ್ನ ಶೈನಿಂಗ್ ಮಾಡೋ ತಾಕತ್ತು ನಾಯ್ಡುಗೆ ಒಬ್ಬರಿಗೇ ಇದೆ ಅನ್ನೋದನ್ನ ಅರಿತುಕೊಂಡಿದ್ರು ಜನ. ಹೀಗಾಗಿ ವಿಭಜಿತ ಆಂಧ್ರದ ಸಿಎಂ ಆಯ್ಕೆ ಮತ್ತೆ ನಾಯ್ಡುರನ್ನೇ ಆಯ್ಕೆ ಮಾಡಿದ್ರು. ಹೀಗೆ ಆಂಧ್ರದ ಸಿಎಂ ಆಗಿರೋ ನಾಯ್ಡು ಇದೀಗ ಭ್ರಷ್ಟರ ವಿರುದ್ಧ ಸಮರ ಸಾರಿದ್ದಾರೆ. ಲಂಚಬಾಕರಿಂದ ತತ್ತರಿಸಿದ ಜನರೆಲ್ಲಾ 1100ಗೆ ಕರೆ ಮಾಡಿ, ದೂರು ಸಲ್ಲಿಸ್ತಿದ್ದಾರೆ. ದೂರು ಸ್ವೀಕರಿಸೋ ಅಧಿಕಾರಿಗಳು, ಜನರು ಕೊಟ್ಟ ಸಂಬಂಧ ಪಟ್ಟವರ ವಿರುದ್ಧ ಕ್ರಮ ಜರುಗಿಸ್ತಿದ್ದಾರೆ. ಇದರಿಂದ ಬೆಚ್ಚಿ ಬಿದ್ದಿರೋ ಲಂಚಬಾಕರು ಲಂಚಕ್ಕೆ ಕೈ ಒಡ್ಡೋದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಈ ಹಿಂದೆ ಯಾರಿಂದ ಲಂಚ ಇಸ್ಕೊಂಡಿದ್ರೀ, ಅವರ ಮನೆ ಬಾಗಿಲಿಗೇ ಹೋಗಿ ಲಂಚದ ಹಣವನ್ನ ವಾಪಸ್ ಕೊಡ್ತಿದ್ದಾರೆ. ನಂದು ತಪ್ಪಾಯ್ತು ಕ್ಷಮಿಸಿ ಬಿಡಿ ಅಂತ ಜನರಿಗೆ ಕೈ ಮುಗಿದು ಬರ್ತಿದ್ದಾರೆ. ಹೀಗೆ ಲಂಚಬಾಕರ ಉಪಟಳಕ್ಕೆ ಬ್ರೇಕ್ ಹಾಕೋ ಮೂಲಕ ಮೋದಿ ಸರ್ಕಾರವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ರು ಚಂದ್ರಬಾಬು ನಾಯ್ಡು.

1100 ಸಹಾಯವಾಣಿ ಆರಂಭಿಸಬೇಕು. ಭ್ರಷ್ಟರ ವಿರುದ್ಧ ಸಮರ ಸಾರಬೇಕು ಅಂತ ನಾಯ್ಡುಗೆ ಅನ್ನಿಸಿದ್ದು ಯಾವಾಗ ಗೊತ್ತಾ? ಇತ್ತೀಚೆಗಷ್ಟೇ ಒಂದು ಅಂಕಿ ಅಂಶ ರಿಲೀಸ್ ಆಗಿತ್ತು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್​ ಒನ್​ ಮತ್ತು ಆಂಧ್ರ ಎರಡನೇ ಸ್ಥಾನದಲ್ಲಿದೆ ಅನ್ನೋದು ಆ ಅಂಕಿ ಅಂಶದಿಂದ ಗೊತ್ತಾಗಿತ್ತು. ಇದನ್ನ ಸೀರಿಯಸ್ಸಾಗಿ ಪರಿಗಣಿಸಿದ ನಾಯ್ಡು, ಭ್ರಷ್ಟಾಚಾರ ರಾಜ್ಯ ಎಂಬ ಹಣೆ ಪಟ್ಟಿಯನ್ನ ಕಿತ್ತೊಗೆಯಲು ಪಣ ತಿಟ್ಟು ನಿಂತರು. ಇದರ ಪರಿಣಾಮವಾಗಿ ಆರಂಭವಾಗಿದ್ದೇ 1100 ಕಾಲ್​ ಸೆಂಟರ್​. ಈ ನಂಬರ್​ ಕೇಳಿದ್ರೆ ಸಾಕು.. ಭ್ರಷ್ಟರ ಗುಂಡಿಗೆಯೇ ನಡುಗುತ್ತಿದೆ.

ಸಿಂಗಾಪುರ ತಂತ್ರಜ್ಞರಿಂದ ಅಮರಾವತಿ ನಿರ್ಮಾಣ

ಆಂಧ್ರ ಇಬ್ಭಾಗವಾದ ನಂತರ, ರಾಜಧಾನಿಯ ಸಮಸ್ಯೆ ನಾಯ್ಡುರನ್ನ ಕಾಡ್ತಾ ಇತ್ತು. ಅದನ್ನ ಸವಾಲಾಗಿ ಸ್ವೀಕರಿಸಿದ ​ನಾಯ್ಡು, ಇಡೀ ಜಗತ್ತೇ ತಿರುಗಿ ನೋಡುವಂಥ ರಾಜಧಾನಿಯನ್ನ ನಿರ್ಮಿಸ್ತಾ ಇದ್ದಾರೆ. ಗುಂಟೂರು ಮತ್ತು ವಿಜಯವಾಡ ನಡುವೆ ಅಮರಾವತಿ ಅನ್ನೋ ಪ್ರದೇಶವಿದೆ. ಇಲ್ಲೇ ಆಂಧ್ರದ ಹೊಸ ರಾಜಧಾನಿ ನಿರ್ಮಾಣವಾಗ್ತಿದೆ. ಈ ರಾಜಧಾನಿಯ ಪ್ಲಾನಿಂಗ್ ರೂಪಿಸಿರೋದು ಸಿಂಗಪೂರ್​​ ತಂತ್ರಜ್ಞರು.

ಅಮರಾವತಿ ವಿಶ್ವದಲ್ಲಿಯೇ ಸುಸಜ್ಜಿತ ಮತ್ತು ಅದ್ಭುತ ರಾಜಧಾನಿಯನ್ನಾಗಿ ಮಾಡಬೇಕು ಅಂತ, ನಾಯ್ಡು ಪಣತೊಟ್ಟು ನಿಂತಿದ್ದಾರೆ. ಹೀಗಾಗಿ ದೂರದೃಷ್ಟಿಯನ್ನ ಇಟ್ಕೊಂಡು ಹೊಸ ರಾಜಧಾನಿಯನ್ನ ಮಾಡ್ತಿದ್ದಾರೆ. ಅದಕ್ಕಾಗಿ ಅಮರಾವತಿಯಲ್ಲಿ 33 ಸಾವಿರ ಎಕರೆಯನ್ನ ಖರೀದಿಸಲಾಗಿದ್ದು, 217 ಕಿಮೀ ವಿಸ್ತೀರ್ಣದಲ್ಲಿ ಅಂತಾರಾಷ್ಟ್ಟೀಯ ಮಟ್ಟದ ರಾಜಧಾನಿಯನ್ನ ನಿರ್ಮಿಸುತ್ತಿದ್ದಾರೆ ನಾಯ್ಡು.

ಹೈದ್ರಾಬಾದ್​ ತೆಲಂಗಾಣದ ತೆಕ್ಕೆಗೆ ಸೇರಿತ್ತು. ಹೀಗಾಗಿ ಹೈದ್ರಾಬಾದನ್ನೂ ಮೀರಿಸೋ ರಾಜಧಾನಿಯನ್ನ ನಿರ್ಮಿಸಬೇಕು ಅಂತ ನಾಯ್ಡು ಸಜ್ಜಾದ್ರು. ಅಮರಾವತಿ ಇತಿಹಾಸದ ಪುಟ ಸೇರುವಂತೆ ಆಗಬೇಕು ಅಂತ, ವಿಶ್ವ ಮಟ್ಟದ ತಜ್ಞರನ್ನು ಒಗ್ಗೂಡಿಸಿದ್ರು ಚಂದ್ರಬಾಬು ನಾಯ್ಡು. ರಾಜಧಾನಿಯ ಕಾರ್ಯಗಳು ಭರದಿಂದ ನಡೀತಾ ಇದ್ದು, ವಿದ್ಯುತ್ತಿನ ಸಂಪರ್ಕ, ಕುಡಿಯೋ ನೀರಿನ ಸಂಪರ್ಕದ ವ್ಯವಸ್ಥೆಯನ್ನ ಮಾಡಲಾಗ್ತಿದೆ. ಅತ್ಯದ್ಭುತ ಚತುಷ್ಪತ ರಸ್ತೆಗಳು, 3 ರಾಷ್ಟ್ರೀಯ ಹೆದ್ದಾರಿಗಳನ್ನ ಒಳಗೊಂಡಿರೋ ಅಮರಾವತಿಯಲ್ಲಿ 400 ಬ್ರಿಡ್ಜ್​ಗಳು ನಿರ್ಮಾಣಗೊಳ್ಳಲಿವೆ. ವಾಸ್ತು ಪ್ರಕಾರ ರಾಜಧಾನಿ ನಿರ್ಮಾಣವಾಗುತ್ತಿದ್ದು, ಜಗತ್ತಿನ ಅತ್ಯಂತ ಸುಸಜ್ಜಿತ ರಾಜಧಾನಿಯಾಗಲಿದೆ ಅಂತ ಹೇಳಲಾಗುತ್ತಿದೆ.

ರಾಜಧಾನಿಯೇ ಇಲ್ಲದ ರಾಜ್ಯಕ್ಕೆ, ವಿಶ್ವವೇ ತಿರುಗಿ ನೋಡುವಂಥ ರಾಜಧಾನಿಯನ್ನ ನಿರ್ಮಿಸ್ತಿದ್ದಾರೆ ನಾಯ್ಡು.. ಹೀಗೆ ದೂರದೃಷ್ಟಿಯನ್ನ ಹೊಂದಿರೋ ಆಂಧ್ರ ಸಿಎಂ ಭ್ರಷ್ಟರನ್ನ ಬಗ್ಗು ಬಡಿಯೋದಕ್ಕೆ 1100 ಸಹಾಯವಾಣಿ ಆರಂಭಿಸಿದ್ದಾರೆ. ಇಂಥಾ ಕಾರ್ಯಗಳು ಕರ್ನಾಟಕ ಸಿಎಂ ಸಿದ್ದರಾಮಯ್ಯನವರಿಂದ ಆಗಬೇಕಿತ್ತು. ಯಾಕಂದ್ರೆ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಇದೆ. ಆದರೂ ಸಿದ್ದರಾಮಯ್ಯನವರು ಇದರ ಬಗ್ಗೆ ಚಿಂತೇನೇ ಮಾಡ್ತಿಲ್ಲ. ಆದ್ರೆ ನಾಯ್ಡು ಅದನ್ನೇ ಸೀರಿಯಸ್ಸಾಗಿ ತಗೊಂಡು, ಭ್ರಷ್ಟಾಚಾರದ ವಿರುದ್ಧ ಸಮರಕ್ಕಿಳಿದಿದ್ದಾರೆ. ನಾಯ್ಡು ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗ್ತಿದ್ದು, ಎಲ್ರೂ ಶಭಾಷ್​ ಅಂತಿದ್ದಾರೆ.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

Follow Us:
Download App:
  • android
  • ios