Asianet Suvarna News Asianet Suvarna News

ಇತರೆ ಭಾಷೆಗಳ ಮೇಲೆ ಹಿಂದಿ ಹೇರಿಕೆ ಸರಿಯಲ್ಲ: ಪ್ರೊ.ಚಂಪಾ

ಹಿಂದಿ ಹೇರಿಕೆಯನ್ನು ಮೊದಲ ಬಾರಿಗೆ ವಿರೋಧಿಸಿದವರು ತಮಿಳರು. ಕನ್ನಡಿಗರು ಈ ಬಗ್ಗೆ ಚಕಾರ ಎತ್ತಲಿಲ್ಲ. ಇತ್ತೀಚೆಗೆ ಅಲ್ಲಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟಗಳು ಆರಂಭವಾಗಿವೆ. ಹಿಂದಿ ಹೇರಿಕೆ ವಿರುದ್ಧ ಹೋರಾಟವನ್ನು ಇನ್ನಷ್ಟುತೀವ್ರಗೊಳಿಸಬೇಕಿದೆ ಎಂದು ಚಂದ್ರಶೇಖರ್‌ ಪಾಟೀಲ್‌ ಕರೆ ನೀಡಿದರು.

Imposing Hindi is not right says Champa

ಬೆಂಗಳೂರು: ದೇಶದ ಇತರೆ ಭಾಷೆಗಳ ಮೇಲೆ ಹಿಂದಿ ಹೇರಿದರೆ ಅದು ಹಿಂದಿ ಸಾಮ್ರಾಜ್ಯಶಾಹಿ ಧೋರಣೆಯಾಗುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಜನದನಿ ಬಳಗ ಬೆಂಗಳೂರು, ಕನ್ನಡಪರ ಸಂಘಟನೆಗಳ ಕೂಟ ಹಾಗೂ ಕರ್ನಾಟಕ ಸ್ವಾಭಿಮಾನಿ ವೇದಿಕೆ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಮ್ಮ ಒಕ್ಕೂಟ ವ್ಯವಸ್ಥೆ ಮತ್ತು ಹಿಂದಿ ಹೇರಿಕೆ' ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಹಿಂದಿ ಹೇರಿಕೆ ವಿಚಾರ ಗಂಭೀರ, ಸಂಕೀರ್ಣ ಹಾಗೂ ಗೊಂದಲದ ವಿಚಾರವಾಗಿದೆ. ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಭಾವನಾತ್ಮಕ ಬೆಸುಗೆ ಬೆಸೆಯಲು ಹಿಂದೂಸ್ತಾನಿ ಎಂದು ಕರೆದರು.

ಅವರು ಆರಂಭದಲ್ಲಿ ಮಾತೃಭಾಷೆ ಗುಜರಾತಿಯಲ್ಲಿ ಬರೆದು ಬಳಿಕ ಹಿಂದಿ ಸೇರಿದಂತೆ ಇತರೆ ಭಾಷೆಗಳಿಗೆ ಭಾಷಾಂತರ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಹಿಂದಿ ಐಕ್ಯತೆಯ ಭಾಷೆಯಾಗಿ ಎಲ್ಲರ ಮನ ಸೆಳೆದಿತ್ತು. ಆದರೂ ಗಾಂಧೀಜಿ ಅವರು ಮಾತೃ ಭಾಷೆಯಿಂದ ಮಾತ್ರ ಅತ್ಯುತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು ಎಂದು ವಿವರಿಸಿದರು.

ಹಿಂದಿ ಹೇರಿಕೆಯನ್ನು ಮೊದಲ ಬಾರಿಗೆ ವಿರೋಧಿಸಿದವರು ತಮಿಳರು. ಕನ್ನಡಿಗರು ಈ ಬಗ್ಗೆ ಚಕಾರ ಎತ್ತಲಿಲ್ಲ. ಇತ್ತೀಚೆಗೆ ಅಲ್ಲಲ್ಲಿ ಹಿಂದಿ ಹೇರಿಕೆ ವಿರೋಧಿ ಹೋರಾಟಗಳು ಆರಂಭವಾಗಿವೆ. ಹಿಂದಿ ಹೇರಿಕೆ ವಿರುದ್ಧ ಹೋರಾಟವನ್ನು ಇನ್ನಷ್ಟುತೀವ್ರಗೊಳಿಸಬೇಕಿದೆ ಎಂದು ಚಂದ್ರಶೇಖರ್‌ ಪಾಟೀಲ್‌ ಕರೆ ನೀಡಿದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಮಾತನಾಡಿ, ಮಾತೃ ಭಾಷೆ ಕನ್ನಡದ ಜತೆಗೆ ಇತರೆ ಭಾಷೆಗಳನ್ನು ಕಲಿಯುವುದು ಉತ್ತಮ. ಈಗ ರಾಜ್ಯದಲ್ಲಿ ಡಬ್ಬಿಂಗ್‌ ವಿರೋಧಿಸಲಾಗುತ್ತಿದೆ. ಡಬ್ಬಿಂಗ್‌ ಬಂದರೆ ನಮ್ಮ ಭಾಷೆಯೇ ಬೆಳವಣಿಗೆ ಕಾಣುತ್ತದೆ. ಬೇರೆ ಭಾಷೆಯ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ನೋಡುವುದರಿಂದ ಸಮಸ್ಯೆ ಏನು ಎಂದು ಪ್ರಶ್ನಿಸಿದ ಅವರು, ಭಾಷೆ ಎನ್ನುವುದು ಸಂಪತ್ತಿನ ಹಾಗೆ. ಅದರ ಬಳಕೆಯ ಮೇಲೆ ಎಲ್ಲವೂ ಅಡಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡಪರ ಚಿಂತಕ ಡಾ.ಪಿ.ವಿ.ನಾರಾಯಣ, ಕೈಗಾರಿಕೆ ಮತ್ತು ವಾಣಿಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಜನದನಿ ಬಳಗದ ಅಧ್ಯಕ್ಷ ನೇ.ಭ.ರಾಮಲಿಂಗ ಶೆಟ್ಟಿ, ಯುವ ಚಿಂತಕ ಅರುಣ್‌ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios