ಬೆಂಗಳೂರು, (ಜೂನ್.13): ಸಾವಿರಾರು ಜನರಿಗೆ ಮೋಸ ಮಾಡಿ ನಾಪತ್ತೆಯಾಗಿರುವ ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಖಾನ್‌ ಬಳಿ ಟನ್‌ಗಟ್ಟಲೇ ಚಿನ್ನ ಸೇರಿದಂತೆ ಕೋಟ್ಯಾಂತರ ರು. ಆಸ್ತಿ ಹೊಂದಿದ್ದಾನೆ ಎನ್ನಲಾಗಿದೆ.

ತನ್ನ ಐಎಂಎ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಪ್ರಕಟಿಸಿದ್ದ ಎನ್ನಲಾದ ಆಸ್ತಿ ಘೋಷಣಾ ಪತ್ರವೊಂದು ಬುಧವಾರ ವೈರಲ್‌ ಆಗಿದ್ದು, ಇದರಲ್ಲಿ ಆತನ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರವಿದೆ. ಆದರೆ ಈ ಪತ್ರದ ಕುರಿತು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿಲ್ಲ.

ಐಎಂಎ ಪ್ರಕರಣದಲ್ಲಿ ಬೇನಾಮಿ ಆಸ್ತಿ ವಾಸನೆ: ವಂಚಕರ ಬೆನ್ನಟ್ಟಿದ ED

‘ಬಂಗಾರದ ಮನುಷ್ಯ’ ಮನ್ಸೂರ್‌:
ಚಿನ್ನದ ವ್ಯಾಪಾರಿ ಮನ್ಸೂರ್‌ ಖಾನ್‌, ಶಿವಾಜಿನಗರ ಹಾಗೂ ಜಯನಗರದಲ್ಲಿ ಬೃಹತ್‌ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದ್ದ. ಹದಿನಾರು ವರ್ಷಗಳಿಂದ ಚಿನ್ನ ಮತ್ತು ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಆತ, ಔಷಧ ಮಾರಾಟ, ಆಸ್ಪತ್ರೆ ಹಾಗೂ ರಿಯಲ್‌ ಎಸ್ಟೇಟ್‌ನಲ್ಲಿ ಸಹ ಹಣ ಹೂಡಿಕೆ ಮಾಡಿದ್ದ. 

ಹೀಗೆ ವಿವಿಧ ಉದ್ದಿಮೆಗಳಿಂದ ತಾನು ಸಾವಿರಾರು ಕೋಟಿ ರು. ಸಂಪಾದನೆ ಮಾಡಿದ್ದೇನೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಹ ವಿವರ ಸಲ್ಲಿಸಿದ್ದೇನೆ ಎಂದು ಮನ್ಸೂರ್‌ ಹೇಳಿಕೊಂಡಿದ್ದಾನೆ.

IMA ಹಗರಣ ಎಸ್‌ಐಟಿಗೆ: ತನಿಖಾ ತಂಡದಲ್ಲಿ ಯಾರ‍್ಯಾರು?

ತನ್ನ ಸಂಸ್ಥೆಯಾದ ಐಎಂಎ ವೆಬ್‌ಸೈಟ್‌ನಲ್ಲಿ ಮನ್ಸೂರ್‌ ಖಾನ್‌ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿದೆ. ಇದರಲ್ಲಿ ಚಿನ್ನಾಭರಣ, ವಜ್ರ, ಬೆಳ್ಳಿ ವಸ್ತುಗಳು ಸೇರಿದಂತೆ ಸ್ಥಿರ ಮತ್ತು ಚರಾಸ್ತಿ ಕುರಿತು ವಿವರವಾಗಿ ಹೇಳಿದ್ದಾನೆ.

ಮನ್ಸೂರ್‌ ಬಳಿ ಏನೇನಿದೆ?
1888 ಕೆ.ಜಿ. ಚಿನ್ನಾಭರಣ, 18.64 ಕೆ.ಜಿ. ಪ್ಲಾಟಿನಂ, 463 ಕೆ.ಜಿ. ಬೆಳ್ಳಿ ವಸ್ತುಗಳು, 30 ಸಾವಿರ ಕ್ಯಾರೆಟ್‌ ವಜ್ರ, 110 ಕೆ.ಜಿ. ಬಿಳಿ ಬಂಗಾರ, ಐಎಎಂ ಜ್ಯುವೆಲ​ರ್ಸ್‌ನಲ್ಲಿ ಅಡಮಾನ ಪಡೆದ 350 ಕೆ.ಜಿ. ಚಿನ್ನ, ಕೋಟ್ಯಂತರ ಮೌಲ್ಯದ ರತ್ನದ ಹರಳುಗಳು ಹಾಗೂ 488 ಕೋಟಿ ಆಸ್ತಿ ಹೊಂದಿರುವುದಾಗಿ ಮನ್ಸೂರ್‌ ಘೋಷಣೆ ಮಾಡಿಕೊಂಡಿದ್ದ ಎನ್ನಲಾಗಿದೆ.