ಬೆಂಗಳೂರು, (ಜೂನ್.12): ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಕಾರ್ಯಪ್ರವೃತ್ತವಾಗಿ ತನಿಖೆಗೆ ಮುಂದಾಗಿದ್ದು, ವಂಚನೆಯ ಮೌಲ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುವಲ್ಲಿ ನಿರತವಾಗಿದೆ.

ಹವಾಲಾ ದಂಧೆಯಲ್ಲಿ ತೊಡಗಿರುವುದು ಮತ್ತು ಬೇನಾಮಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಕಾರ್ಯಪ್ರವೃತ್ತವಾಗಿದೆ. ಹಗರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಈ ಮೊದಲು ಘೋಷಿಸಿಕೊಂಡಿದ್ದ ಆಸ್ತಿ ಮತ್ತು ಆತನ ಹಣಕಾಸು ವ್ಯವಹಾರದ ಬಗ್ಗೆ ಮಾಹಿತಿ ಕಲೆಹಾಕಿದೆ ಎಂದು ಮೂಲಗಳು ತಿಳಿಸಿವೆ. 

IMA ಹಗರಣ ಎಸ್‌ಐಟಿಗೆ: ತನಿಖಾ ತಂಡದಲ್ಲಿ ಯಾರ‍್ಯಾರು?

ಪೊಲೀಸರು ದೂರುಗಳನ್ನು ಸ್ವೀಕರಿಸುತ್ತಿದ್ದು, 19 ಸಾವಿರ ದೂರುಗಳು ದಾಖಲಾಗಿವೆ. ದೂರುಗಳಲ್ಲಿ ದಾಖಲಾಗಿರುವ ಮೊತ್ತಗಳ ವಿವರಗಳನ್ನು ಕಲೆಹಾಕುವಲ್ಲಿ ನಿರತವಾಗಿದೆ. ಪೊಲೀಸರ ಸಹಕಾರದೊಂದಿಗೆ ಇ.ಡಿ. ಅಧಿಕಾರಿಗಳು ಹಣದ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ದೂರುಗಳು ದಾಖಲಾದ ಬಳಿಕ ಒಟ್ಟಾರೆ ಚಿತ್ರಣ ಗೊತ್ತಾಗಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಮನ್ಸೂರ್‌ ಖಾತೆಯ ವಿವರದ ದಾಖಲೆಗಳನ್ನು ಇ.ಡಿ. ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ನಡುವೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಕೋಟ್ಯಂತರ ರು. ವಂಚನೆಯಾಗಿರುವ ಕಾರಣ ಐಟಿ ಅಧಿಕಾರಿಗಳು ತನಿಖೆಗೆ ಮುಂದಾಗುವ ಸಾಧ್ಯತೆ ಇದೆ. 

ಪೊಲೀಸ್‌ ಇಲಾಖೆಯು ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದ ಬಳಿಕ ವರದಿಯನ್ನು ಪಡೆದುಕೊಳ್ಳಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.