ಬೆಂಗಳೂರು, (ಜೂನ್.13): ಮುಖ್ಯಮಂತ್ರಿಗಳ ಆದೇಶ ಹಿನ್ನೆಲೆಯಲ್ಲಿ  ಐಎಂಎ ಸಂಸ್ಥೆ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ವಿರುದ್ಧ ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ಬಿ.ಆರ್‌.ರವಿಕಾಂತೇಗೌಡ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ತನಿಖೆ ಹೊಣೆ ಹೊತ್ತ ಬೆನ್ನಲ್ಲೆ ಕಾರ್ಯಾಚರಣೆಗಿಳಿದ ಎಸ್‌ಐಟಿ ತಂಡವು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೂರ್ವ ವಿಭಾಗದ ಪೊಲೀಸರಿಂದ ಪಡೆದುಕೊಂಡಿದೆ. ಹಾಗೆಯೇ ಬೆಂಗಳೂರಿನ ಶಿವಾಜಿನಗರದಲ್ಲಿರುವ ಐಎಎಂ ಸಂತ್ರಸ್ತರ ದೂರು ಸ್ವೀಕಾರ ಕೇಂದ್ರಕ್ಕೂ ತೆರಳಿ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.

IMA ಮನ್ಸೂರ್ ದತ್ತು ಪಡೆದಿದ್ದ ಸರ್ಕಾರಿ ಶಾಲೆಗೆ ಸಂಕಷ್ಟ

ಮೂರು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ತುತ್ತಾಗಿರುವ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿಗಳು, ಈ ಮಹಾ ಮೋಸದ ಕುರಿತು ಸಮಗ್ರ ತನಿಖೆಗೆ ಎಸ್‌ಐಟಿ ರಚಿಸುವ ನಿರ್ಧಾರ ಪ್ರಕಟಿಸಿದ್ದರು. 

ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಡಿಜಿಪಿ ನೀಲಮಣಿ ಎನ್‌.ರಾಜು ಅವರು, ಅಂತಿಮವಾಗಿ ತನಿಖೆ ಹೊಣೆಗಾರಿಕೆಯನ್ನು ಮುಖ್ಯಮಂತ್ರಿಗಳ ಆಪ್ತ ಅಧಿಕಾರಿ ಎಂದೇ ಬಿಂಬಿತವಾಗಿರುವ ರವಿಕಾಂತೇಗೌಡರ ಹೆಗಲಿಗೆ ಹೊರಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ರವಿಕಾಂತೇಗೌಡರನ್ನು ಹೊರತುಪಡಿಸಿದರೆ ಲೋಕಾಯುಕ್ತ ಮತ್ತು ಎಸಿಬಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸಿಸಿಬಿ ಡಿಸಿಪಿ ಎಸ್‌.ಗಿರೀಶ್‌, ಸಿಸಿಬಿ ಎಸಿಪಿ ಬಿ.ಬಾಲರಾಜ್‌, ಸಿಐಡಿ ಡಿವೈಎಸ್ಪಿ ಕೆ.ರವಿಶಂಕರ್‌, ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್‌ ಖಾದರ್‌, ಇನ್‌ಸ್ಪೆಕ್ಟರ್‌ ಅಂಜನ್‌ ಕುಮಾರ್‌ ಸೇರಿದಂತೆ ಹತ್ತು ಮಂದಿ ಅಧಿಕಾರಿಗಳು ತನಿಖಾ ತಂಡ ಸೇರಿದ್ದಾರೆ. 

ಈ ಪೈಕಿ ಸಿಸಿಬಿ ಡಿಸಿಪಿ ಗಿರೀಶ್‌, ಎಸಿಪಿ ಬಾಲರಾಜ್‌ ಹಾಗೂ ಇನ್ಸ್‌ಪೆಕ್ಟರ್‌ ಅಂಜನ್‌ ಕುಮಾರ್‌ ಅವರಿಗೆ ಐಎಎಂ ಮಾದರಿಯಲ್ಲೇ ಹಿಂದೆ ನಡೆದಿದ್ದ ಆ್ಯಂಬಿಡೆಂಟ್‌ ವಂಚನೆ ಪ್ರಕರಣದ ತನಿಖೆಯನ್ನು ನಡೆಸಿದ ಅನುಭವವಿದೆ.

ಎಡಿಜಿಪಿಗೆ ಎಸ್‌ಐಟಿ ವರದಿ ಸಲ್ಲಿಕೆ
ಅಧಿಕ ಲಾಭಾಂಶದ ಆಸೆ ತೋರಿಸಿದ ಸಾರ್ವಜನಿಕರಿಂದ ಸಾವಿರಾರು ಕೋಟಿ ಬಂಡವಾಳ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಉದ್ಯಮಿ ಮನ್ಸೂರ್‌ ಖಾನ್‌ ತುತ್ತಾಗಿದ್ದಾನೆ. ಈ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿರುವ ಆತನ ಪತ್ತೆಗೆ ಪೊಲೀಸರ ಕಾರ್ಯಾಚರಣೆ ನಡೆದಿದೆ. 

ಈ ಕೃತ್ಯ ಸಂಬಂಧ ಭಾನುವಾರ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ಐಎಎಂ ವಿರುದ್ಧ ವಂಚನೆ (420) ಹಾಗೂ ವಿಶ್ವಾಸ ದ್ರೋಹ (406) ಆರೋಪಗಳಡಿ ಪ್ರಕರಣ ದಾಖಲಾಗಿದೆ. ಈ ಎಫ್‌ಐಆರ್‌ ಆಧರಿಸಿ ಎಸ್‌ಐಟಿ ತನಿಖೆ ನಡೆಸಲಿದೆ ಎಂದು ಡಿಜಿಪಿ ಹೇಳಿದ್ದಾರೆ. 

ಎಸ್‌ಐಟಿ ಮುಖ್ಯಸ್ಥ ರವಿಕಾಂತೇಗೌಡ ಅವರು, ತನಿಖೆ ಪ್ರಗತಿ ಕುರಿತು ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಅಪರಾಧ) ಡಾ.ಎಂ.ಎ.ಸಲೀಂ ಅವರಿಗೆ ವರದಿ ಮಾಡಬೇಕಿದೆ. ತನಿಖೆಗೆ ಅಗತ್ಯವಿದ್ದರೆ ಕೇಂದ್ರ ತನಿಖಾ ಸಂಸ್ಥೆಗಳ ಜತೆ ಸಹ ಎಡಿಜಿಪಿ ಮತ್ತು ಡಿಐಜಿ ಸಹಕಾರ ಪಡೆಯುವಂತೆ ಸಹ ಡಿಜಿಪಿ ಸೂಚಿಸಿದ್ದಾರೆ.

ಸಿಐಡಿಯಲ್ಲಿ ಎಸ್‌ಐಟಿ ಕಚೇರಿ
ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸಲಿರುವ ಎಸ್‌ಐಟಿಗೆ ಸಿಐಡಿ ಆವರಣದಲ್ಲಿ ಕಚೇರಿ ತೆರೆಯಲು ಗೃಹ ಇಲಾಖೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಸಿಐಡಿ ಕೇಂದ್ರ ಕಚೇರಿ ಹೊಸ ಕಟ್ಟಡದಲ್ಲಿ ಎಸ್‌ಐಟಿಯು ಕಚೇರಿ ಹೊಂದಲಿದೆ. ಇಲ್ಲಿ ಹೂಡಿಕೆದಾರರಿಂದ ತನಿಖಾ ತಂಡ ದೂರು ಸ್ವೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿ ತಂಡದಲ್ಲಿ ಯಾರಾರ‍ಯರು?
ಡಿಐಜಿ ಡಾ.ಬಿ.ಆರ್‌.ರವಿಕಾಂತೇಗೌಡ (ಮುಖ್ಯಸ್ಥ), ಡಿಸಿಪಿ ಎಸ್‌.ಗಿರೀಶ್‌ (ಮುಖ್ಯ ತನಿಖಾಧಿಕಾರಿ), ಎಸಿಪಿ ಬಿ.ಬಾಲರಾಜ್‌ (ತನಿಖಾಧಿಕಾರಿ), ಸಿಐಡಿ ಡಿವೈಎಸ್ಪಿ ಕೆ.ರವಿಶಂಕರ್‌, ಗುಪ್ತದಳದ ಡಿವೈಎಸ್ಪಿ ರಾಜಾ ಇಮಾಮ್‌ ಖಾಸಿಮ್‌, ಲೋಕಾಯುಕ್ತ ಡಿವೈಎಸ್ಪಿ ಅಬ್ದುಲ್‌ ಖಾದರ್‌, ಇನ್ಸ್‌ಪೆಕ್ಟರ್‌ಗಳಾದ ಸಿ.ಆರ್‌.ಗೀತಾ, ಎಲ್‌.ವೈ.ರಾಜೇಶ್‌, ಅಂಜನ್‌ ಕುಮಾರ್‌, ಟಿ.ತನ್ವೀರ್‌ ಅಹಮದ್‌ ಹಾಗೂ ಕರ್ಮಷಿಯಲ್‌ ಸ್ಟ್ರೀಟ್‌ ಠಾಣೆ ಇನ್ಸ್‌ಪೆಕ್ಟರ್‌ ಬಿ.ಕೆ.ಶೇಖರ್‌ ಅವರನ್ನು ವಿಶೇಷ ತನಿಖಾ ತಂಡ ಒಳಗೊಂಡಿದೆ. ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿರುವ ಪಿಎಸ್‌ಐ, ಹೆಡ್‌ ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ ಸೇರಿ ಐವತ್ತು ಮಂದಿಯನ್ನು ಎಸ್‌ಐಟಿಗೆ ಎರವಲು ಸೇವೆ ಮೇರೆಗೆ ನಿಯುಕ್ತಿಗೊಳ್ಳಲಿದ್ದಾರೆ.