ಬೆಂಗಳೂರು (ಜು.23) : ಜಾರಿ ನಿರ್ದೇಶನಾಲಯದ ತೀವ್ರ ವಿಚಾರಣೆಯಿಂದ ವಿಚಲಿತನಾಗಿರುವ ಬಹಕೋಟಿ ಪ್ರಕರಣದ ಆರೋಪಿ ಐಎಂಎ ಮಾಲೀಕ ಮನ್ಸೂರ್‌ ಖಾನ್‌ಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿದ್ದು, ಸೋಮವಾರ ನಸುಕಿನಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಮನ್ಸೂರ್‌ ಖಾನ್‌ ಮತ್ತೆ ಎದೆನೋವು ಎಂದು ಹೇಳುತ್ತಿದ್ದಂತೆ ಕೂಡಲೇ ಆತನನ್ನು ಶಾಂತಿನಗರದ ಇ.ಡಿ. ಕಚೇರಿಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿ ವಿಚಾರಣೆಯಿಂದ ಪಾರಾಗಲು ಈ ರೀತಿಯಾಗಿ ನಾಟಕವಾಡುತ್ತಿರುವ ಸಾಧ್ಯತೆಯಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.

ಭಾನುವಾರ ಬೆಳಗ್ಗೆ ವಿಚಾರಣೆ ಆರಂಭಿಸುತ್ತಿದ್ದಂತೆ ಎದೆನೋವಿನ ನಾಟಕ ಶುರು ಮಾಡಿದ್ದ ಮನ್ಸೂರ್‌ ಖಾನ್‌ನನ್ನು ಸಂಜೆ ವೇಳೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ದೃಢಪಡಿಸುತ್ತಿದ್ದಂತೆ ಮತ್ತೆ ಇ.ಡಿ. ಕಚೇರಿಗೆ ಕರೆದೊಯ್ದ ಅಧಿಕಾರಿಗಳು ವಿಚಾರಣೆ ನಡೆಸಿದರು. ಆಸ್ಪತ್ರೆಯಲ್ಲಿ ಇಸಿಜಿ, ರಕ್ತದೊತ್ತಡ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ವರದಿಯಲ್ಲಿ ಎಲ್ಲವೂ ಸರಿಯಿದ್ದರೂ, ಮನ್ಸೂರ್‌ ಖಾನ್‌ ಮಾತ್ರ ತನಗೆ ಎದೆನೋವಾಗುತ್ತಿದೆ ಎಂಬ ನಾಟಕವಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.