ಕುಮಾರಸ್ವಾಮಿ ಬಾಯಲ್ಲಿ ರಾಜಕೀಯ ನಿವೃತ್ತಿ ಮಾತು: ಏನಂದ್ರು ಕೇಳಿ..?
ಲೋಕಸಭೆ ಚುನಾವಣೆಯಲ್ಲಿ ಪುತ್ರನ ಸೋಲು ಹಾಗೂ ಸಿಎಂ ಕುರ್ಚಿ ಕಳೆದುಕೊಂಡು ಸೈಲೆಂಟ್ ಮೂಡ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ರಾಜಕೀಯ ನಿವೃತ್ತಿ ಮಾತನ್ನಾಡಿದ್ದಾರೆ. ಹಾಗಾದ್ರೆ ಎಚ್ ಡಿಕೆ ಏನೆಲ್ಲ ಮಾತನಾಡಿದ್ದಾರೆ ಮುಂದೆ ಓದಿ...
ಹಾಸನ, (ಆ.03): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು [ಶನಿವಾರ] ಹಾಸನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ವೇಳೆ ಎಚ್ ಡಿಕೆ ಬಾಯಲ್ಲಿ ರಾಜಕೀಯ ನಿವೃತ್ತಿಯ ಮಾತುಗಳು ಬಂದಿವೆ.
'ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯವರಿಗೆ ಕಾಲವಿಲ್ಲ. ನನಗೆ ರಾಜಕೀಯದಲ್ಲಿ ಮುಂದುವರಿಯಬೇಕೆಂಬ ಹುಚ್ಚಿಲ್ಲ. ರಾಜಕೀಯದಿಂದ ನಾನೇ ಹಿಂದಕ್ಕೆ ಸರಿಯಬೇಕು ಎಂದುಕೊಂಡಿದ್ದೇನೆ' ಎಂದು ಹೇಳಿದರು.
ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು. ದೇವರು ಕೊಟ್ಟ ಆಶೀರ್ವಾದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸಿಎಂ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳ ಬಗ್ಗೆ ತೃಪ್ತಿ ಇದೆ ಎಂದರು.
ರಾಜಕೀಯದಲ್ಲಿ ನಾನೇನು ಗೂಟ ಹೊಡೆದುಕೊಂಡು ಕೂರುವುದಿಲ್ಲ. ಈ ಹಿಂದೆಯೇ ರಾಜಕೀಯದಿಂದ ನಿವೃತ್ತಿಯಾಗಿವ ಚಿಂತನೆ ಮಾಡಿದ್ದೆ. ನನಗೆ ಮುಖ್ಯಮಂತ್ರಿ ಹುದ್ದೆ ಮೇಲೆ ವ್ಯಾಮೋಹವಿಲ್ಲ. ನನಗೆ ಬೇಕಿರುವುದು ನಾಡಿನ ಜನರ ಹೃದಯದಲ್ಲಿ ಸ್ಥಾನ ಮಾತ್ರ ನಯವಾಗಿ ಹೇಳಿದರು.
ಎಚ್ ಡಿಕೆ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದು ಇದೇನು ಮೊದಲಲ್ಲ. ಈ ಹಿಂದೆಯೂ ಬಿಜೆಪಿ ಹಾಗೂ ಜೆಡಿಎಸ್ 20-20 ಸರ್ಕಾರ ಪತನಗೊಂಡಾಗಲೂ ರಾಜಕೀಯ ನಿವೃತ್ತಿಗೆ ಚಿಂತನೆ ನಡೆಸಿದ್ದೆ ಎಂದು ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.