ಕೊಟ್ಟೂರು :  ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್‌ ಆದ ವಿದ್ಯಾರ್ಥಿಗೆ ನಿಶ್ಚಿತ ಗುರಿಯಿರುತ್ತದೆ. ಉನ್ನತ ವಿದ್ಯಾಭ್ಯಾಸದೊಂದಿಗೆ ಐಎಎಸ್‌, ಐಪಿಎಸ್‌, ಸಂಶೋಧನೆ ಎಂದೆಲ್ಲಾ ಭವಿಷ್ಯತ್ತಿನ ಬಗ್ಗೆ ಸಾವಿರ ಕನಸುಗಳಿರುವತ್ತವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಪಿಯುಸಿ ಕಲಾ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ರಾಜ್ಯಕ್ಕೆ ಮೊದಲ ರಾರ‍ಯಂಕ್‌ ಪಡೆಯುತ್ತಿರುವ ಕೊಟ್ಟೂರಿನ ಇಂದು ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಬಡತನದ ಕಾರಣಕ್ಕಾಗಿ ತಮ್ಮ ಕನಸುಗಳನ್ನೆಲ್ಲಾ ಪಕ್ಕಕ್ಕಿಟ್ಟಿದ್ದಾರೆ. ಉನ್ನತ ಶಿಕ್ಷಣದಿಂದ ದೂರ ಉಳಿದ ಇವರು ಶಿಕ್ಷಣವನ್ನು ಪಿಯುಸಿಗೇ ಮೊಟಕುಗೊಳಿಸಿ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮ ಲೆಕ್ಕಿಗ (ವಿಲೇಜ್‌ ಅಕೌಂಟೆಂಟ್‌) ಹುದ್ದೆಗೆ ಪಿಯುಸಿ ಆರ್ಹತೆಯಾಗಿರುವುದರಿಂದ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರು ಸುಲಭವಾಗಿ ಆಯ್ಕೆಯಾಗುತ್ತಾರೆ. ಹೆಚ್ಚಿನ ಅಂಕಗಳ ಆಧಾರದ ಮೇಲೆ ನೇರವಾಗಿ ಸರ್ಕಾರ ಹುದ್ದೆಗೆ ನೇಮಕವಾಗಿರುವ ಈ ನಾಲ್ವರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ವ್ಯಾಸಂಗ ಮುಂದುವರಿಸಲು ದೂರ ಶಿಕ್ಷಣದ ಮೊರೆ ಹೋಗಿದ್ದಾರೆ. ‘ಕೌಟುಂಬಿಕ ಸಮಸ್ಯೆ ಅರಿತು ಮುಂದಿನ ಹೆಜ್ಜೆ ಇಡಬೇಕಾಗಿರುವುದರಿಂದ ಈ ಆಯ್ಕೆ ನಮಗೆ ಅನಿವಾರ್ಯವಾಗಿದೆ’ ಎಂದು ಈ ಟಾಪರ್‌ಗಳು ಹೇಳುತ್ತಿದ್ದಾರೆ.

ಬಡತನವೇ ಕಾರಣ:‘ಮನೆಯಲ್ಲಿನ ಬಡತನ ಖುದ್ದು ನೋಡಿಯೂ ಕೈಗೆ ಬಂದ ಕೆಲಸ ಬಿಟ್ಟು ಉನ್ನತ ಶಿಕ್ಷಣ ಮುಂದುವರಿಸಲು ಮನಸ್ಸಾಗಲಿಲ್ಲ. ಬದುಕಿಗೆ ಭದ್ರತೆ ಮುಖ್ಯವೆಂದು ಕೆಲಸಕ್ಕೆ ಸೇರಿಕೊಳ್ಳುವ ನಿರ್ಧಾರ ಕೈಗೊಂಡೆ’ ಎನ್ನುತ್ತಾರೆ ಕುರುಗೋಡಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಎಂ.ಬಿ.ನೇತ್ರಾವತಿ. 2015ರಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 579 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರಾರ‍ಯಂಕ್‌ ಪಡೆದ ನೇತ್ರಾವತಿ, ಮೂಲತಃ ಜಗಳೂರು ತಾಲೂಕಿನ ಚಿಕ್ಕಬಂಟನಹಳ್ಳಿ ಗ್ರಾಮದವರು. ಕೃಷಿ ಕುಟುಂಬ ಹಿನ್ನೆಲೆಯ ನೇತ್ರಾವತಿ ಮನೆಯಲ್ಲಿನ ಬಡತನದ ಕಾರಣಕ್ಕಾಗಿ ಶಿಕ್ಷಣ ಸ್ಥಗಿತಗೊಳಿಸಿ ಸರ್ಕಾರಿ ಹುದ್ದೆಯತ್ತ ಮನಸ್ಸು ಮಾಡಿದ್ದಾರೆ.

ಐಎಎಸ್‌ ಆಸೆಯಿತ್ತು: 2016ರಲ್ಲಿ ರಾಜ್ಯಕ್ಕೆ ಅತ್ಯಧಿಕ ಅಂಕ (585 ಅಂಕಗಳು) ಆದ ಕೊಟ್ಟೂರಿನ ನಿವಾಸಿ ಪಿ. ಅನಿತಾ ಕೂಡ ಮನೆಯ ಬಡತನ ನೋಡಿಯೇ ಮುಂದಿನ ಶಿಕ್ಷಣ ಮೊಟಕುಗೊಳಿಸಿ ಗ್ರಾಮ ಲೆಕ್ಕಾಧಿಕಾರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರ ತಂದೆ ಬಜಾರ್‌ನಲ್ಲಿ ತಳ್ಳುಬಂಡಿಯಲ್ಲಿ ಬಾಳೆಹಣ್ಣು ವ್ಯಾಪಾರಿಯಾಗಿದ್ದು, ತಂದೆಗೆ ಆರ್ಥಿಕವಾಗಿ ನೆರವಾಗಬೇಕು ಎಂಬ ಕಾರಣಕ್ಕೆ ಸರ್ಕಾರ ಉದ್ಯೋಗದ ಕೈ ಹಿಡಿದಿದ್ದಾರೆ. ‘ಐಐಎಸ್‌ ಮಾಡಬೇಕು ಎಂಬ ಹೆಬ್ಬಯಕೆ ಇತ್ತು. ಆದರೆ, ಮನೆಯ ಪರಿಸ್ಥಿತಿ ನೋಡಿ ಮೊದಲು ಕೆಲಸಕ್ಕೆ ಸೇರಿಕೊಂಡುಬಿಡೋಣ ಎಂದು ನಿರ್ಧರಿಸಿದೆ. ವಿ.ಎ. ಕೆಲಸಕ್ಕೆಂದು ಅರ್ಜಿ ಹಾಕಿದೆ, ಸಿಕ್ಕಿತು. ಇದೀಗ 19 ಸಾವಿರ ಸಂಬಳ ಬರುತ್ತಿದೆ. ಇದರಿಂದ ಕುಟುಂಬಕ್ಕೂ ಸಹಾಯವಾಗಿದೆ. ಬಿಎ ಪದವಿ ಪಡೆಯಲು ದೂರ ಶಿಕ್ಷಣದ ಮೊರೆ ಹೋಗಿದ್ದೇನೆ ಎನ್ನುತ್ತಾರೆ ಅನಿತಾ.

2017ರಲ್ಲಿ ರಾಜ್ಯಕ್ಕೆ ಟಾಪರ್‌ ಆದ ಬಿ.ಚೈತ್ರಾ (589 ಅಂಕಗಳು) ಹಾಗೂ 2018ರಲ್ಲಿ ರಾಜ್ಯಕ್ಕೆ ಟಾಪರ್‌ ಆದ (595) ಎಸ್‌.ಸ್ವಾತಿ ಕೂಡ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಇಬ್ಬರು ಕೂಡ ಮನೆಯ ಬಡತನ ಹಿನ್ನೆಲೆಯೇ ಉನ್ನತ ಶಿಕ್ಷಣದಿಂದ ದೂರ ಉಳಿದು ಸರ್ಕಾರಿ ಕೆಲಸಕ್ಕೆ ಸೇರಿದ್ದು ಪ್ರಮುಖ ಕಾರಣ ಎನ್ನುತ್ತಾರೆ. ಚೈತ್ರಾ ಕೂಡ್ಲಿಗಿಯ ತಹಸೀಲ್ದಾರ್‌ ಕಚೇರಿಯಲ್ಲಿ ವಿ.ಎ. ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಎಸ್‌.ಸ್ವಾತಿ ಕೂಡ ಬಳ್ಳಾರಿ ಜಿಲ್ಲೆಯಲ್ಲಿ ವಿ.ಎ. ಆಗಿದ್ದಾರೆ.

ಇದೇ ಹಾದಿಯಲ್ಲಿ ಕುಸುಮಾ:

2019ರಲ್ಲಿ ರಾಜ್ಯಕ್ಕೆ ಮೊದಲ ರಾರ‍ಯಂಕ್‌ ಪಡೆದ ಕುಸುಮಾ ಉಜ್ಜಯಿನಿ ಕೂಡ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ತಂದೆ ದೇವೇಂದ್ರಪ್ಪ ಟೈರ್‌ ಪಂಕ್ಚರ್‌ ಹಾಕಿಯೇ ಜೀವನ ನಡೆಸಬೇಕು. ದಿನಕ್ಕೆ 250 ಗಳಿಸುತ್ತಾರೆ. ಇದು ಸಾಕಾಗುತ್ತಿಲ್ಲ. ತಂದೆಗೆ ನೆರವಾಗಲು ಉನ್ನತ ಶಿಕ್ಷಣದಿಂದ ದೂರ ಉಳಿದು ಸರ್ಕಾರಿ ಕೆಲಸಕ್ಕೆ ಸೇರುವ ಬಯಕೆ ನನ್ನದು ಎನ್ನುತ್ತಾರೆ.


ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ ಮೊದಲ ರಾರ‍ಯಂಕ್‌ ಪಡೆದ ಕಲಾ ವಿಭಾಗದ ನಾಲ್ವರು ವಿದ್ಯಾರ್ಥಿನಿಯರು ಗ್ರಾಮಲೆಕ್ಕಾಧಿಕಾರಿ ಕೆಲಸಕ್ಕೆ ಸೇರಿದ್ದಾರೆ. ಅಂತೆಯೇ ಬೇರೆ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು ಸಹ ವಿವಿಧ ಸರ್ಕಾರಿ ಉದ್ಯೋಗದಲ್ಲಿದ್ದಾರೆ.

- ವೀರಭದ್ರಪ್ಪ, ಪ್ರಾಚಾರ್ಯರು, ಇಂದು ಕಾಲೇಜು, ಕೊಟ್ಟೂರು


- ಬಡತನದಿಂದ ಸರ್ಕಾರಿ ಉದ್ಯೋಗ ಸೇರಿದ ನಾಲ್ವರು

1. ನೇತ್ರಾವತಿ: 2015ರಲ್ಲಿ 579 ಅಂಕ ಗಳಿಸಿದ್ದಾಕೆ ಕುರುಗೋಡಿನ ಗ್ರಾಮ ಲೆಕ್ಕಾಧಿಕಾರಿ

2. ಅನಿತಾ: 2016ರಲ್ಲಿ 585 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್‌ ಆಗಿದ್ದಾಕೆ ಬಳ್ಳಾರಿ ವಿ.ಎ.

3. ಚೈತ್ರಾ: 2017ರಲ್ಲಿ 589 ಅಂಕ ಗಳಿಸಿದ್ದ ಚೈತ್ರಾ ಕೂಡ್ಲಿಗಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ

4. ಸ್ವಾತಿ: 2017ರಲ್ಲಿ 595 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್‌ ಆಗಿದ್ದ ಸ್ವಾತಿ ಬಳ್ಳಾರಿ ವಿ.ಎ.

ಇಂದು ಕಾಲೇಜಿನಿಂದ 1200ಕ್ಕೂ ಹೆಚ್ಚು ವಿ.ಎಗಳು

ಇಂದು ಕಾಲೇಜಿನಲ್ಲಿ 2006ರಿಂದ ಈವರೆಗೆ ಓದಿದ ವಿದ್ಯಾರ್ಥಿಗಳ ಪೈಕಿ 1200ಕ್ಕೂ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳಾಗಿದ್ದಾರೆ! 450ಕ್ಕೂ ಹೆಚ್ಚು ಪೊಲೀಸರು (ಪಿಸಿ), 150 ಕೆಎಸ್‌ಆರ್‌ಟಿಸಿ ಕಂಡಕ್ಟರ್‌ಗಳು, 80ಕ್ಕೂ ಅಧಿಕ ಜನರು ಅರಣ್ಯ ಇಲಾಖೆ ವಿವಿಧ ಹುದ್ದೆಗಳಲ್ಲಿದ್ದಾರಂತೆ.

ವರದಿ :  ಜಿ. ಸೋಮಶೇಖರ