ರಾಜ್ಯದಲ್ಲಿ ಗಾಂಜಾ, ಅಫೀಮು ಸೇರಿ ಡ್ರಗ್ಸ್ ಹಾವಳಿ ಹೆಚ್ಚಾಗಿರುವುದರಿಂದಲೇ ಮದ್ಯ ಮಾರಾಟ ಬೋರಲು ಬಿದ್ದಿದೆ. ಯುವಜನರು ಬಿಯರ್‌ನಿಂದ ವಿಮುಖರಾಗಿ ಡ್ರಗ್ಸ್‌ನತ್ತ ಮುಖ ಮಾಡುತ್ತಿರುವುದೇ ಮದ್ಯ ಮಾರಾಟ ಕುಸಿಯಲು ಪ್ರಮುಖ ಕಾರಣ ಎಂಬ ಸಂಗತಿ ಹೊರಬಿದ್ದಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ರಾಜ್ಯದಲ್ಲಿ ಗಾಂಜಾ, ಅಫೀಮು ಸೇರಿ ಡ್ರಗ್ಸ್ ಹಾವಳಿ ಹೆಚ್ಚಾಗಿರುವುದರಿಂದಲೇ ಮದ್ಯ ಮಾರಾಟ ಬೋರಲು ಬಿದ್ದಿದೆ. ಯುವಜನರು ಬಿಯರ್‌ನಿಂದ ವಿಮುಖರಾಗಿ ಡ್ರಗ್ಸ್‌ನತ್ತ ಮುಖ ಮಾಡುತ್ತಿರುವುದೇ ಮದ್ಯ ಮಾರಾಟ ಕುಸಿಯಲು ಪ್ರಮುಖ ಕಾರಣ ಎಂಬ ಸಂಗತಿ ಹೊರಬಿದ್ದಿದೆ.
ಇತ್ತೀಚಿನ ವರ್ಷಗಳ ಅಂಕಿ-ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೆ, ಮೇಲಿನ ಸಾಲಿಗೆ ಪುಷ್ಟಿ ದೊರೆಯುತ್ತದೆ. ರಾಜಧಾನಿ ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಡ್ರಗ್ಸ್ ಮಾರಾಟ-ಖರೀದಿ ಜೋರಾಗಿದೆ. ಇದರ ಪರಿಣಾಮ ಮದ್ಯ ಸೇವಿಸುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ, ಯುವಜನರು ಡ್ರಗ್ಸ್‌ಗೆ ದಾಸರಾಗುತ್ತಿರುವುದರಿಂದ ಬಿಯರ್‌ನಿಂದ ವಿಮುಖರಾಗುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರು ಆರೋಪಿಸುತ್ತಿದ್ದಾರೆ.
ಮದ್ಯ ಮಾರಾಟ ಕಡಿಮೆಯಾದರೂ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಸ್ವಕ್ಕೇನೂ ಕೊರತೆಯಾಗಿಲ್ಲ ಎಂದು ಅಬಕಾರಿ ಇಲಾಖೆ ಸಮರ್ಥಿಸಿಕೊಳ್ಳುತ್ತಿದ್ದರೂ ವಾಸ್ತವ ಬೇರೆಯೇ ಇದೆ. ಹಲವು ಬಾರಿ ಮದ್ಯದ ದರ ಹೆಚ್ಚಳ ಮಾಡಿರುವುದರಿಂದಲೇ ರಾಜಸ್ವ ಸಂಗ್ರಹ ಅಧಿಕವಾಗುತ್ತಿದೆ.
ಪಾತಾಳ ಸೇರಿದ ಬಿಯರ್ ಬಿಕರಿ:
2024 ರಲ್ಲಿ ಏಪ್ರಿಲ್‌ನಿಂದ ನವೆಂಬರ್‌ವರೆಗೂ 313.45 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, 2025ರಲ್ಲಿ ಇದೇ ಅವಧಿಯಲ್ಲಿ ಬಿಯರ್ ಮಾರಾಟ 257.34 ಲಕ್ಷ ಬಾಕ್ಸ್‌ಗೆ ಕುಸಿದಿದೆ. ಅಂದರೆ ಬರೋಬ್ಬರಿ 56.11 ಲಕ್ಷ ಬಾಕ್ಸ್ ಬಿಯರ್ ಮಾರಾಟ ಕಡಿಮೆಯಾಗಿದೆ. ಇದೇ ಅವಧಿಗೆ ಹೋಲಿಸಿದರೆ ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ ಐಎಂಎಲ್ ಮದ್ಯ ಮಾರಾಟವೂ ಕುಸಿತವಾಗಿದೆ.
2024 ರಲ್ಲಿ ಏಪ್ರಿಲ್‌ನಿಂದ ನವೆಂಬರ್‌ವರೆಗೂ 466 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ 458.95 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿ 7.05 ಲಕ್ಷ ಬಾಕ್ಸ್ ಕಡಿಮೆ ಮಾರಾಟವಾಗಿದೆ. ಮದ್ಯ ಮಾರಾಟ ಕಡಿಮೆಯಾಗಲು ‘ಡ್ರಗ್ಸ್ ಕೊಡುಗೆ’ಯೇ ಮೂಲ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಡ್ರಗ್ಸ್‌ಗಿಲ್ಲ ಕಡಿವಾಣ: ಲೋಕೇಶ್ ಆರೋಪ
ರಾಜ್ಯದಲ್ಲಿ ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕದಿರುವುದು ಮದ್ಯ ಮಾರಾಟ ಕಡಿಮೆಯಾಗಲು ಕಾರಣ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಆರೋಪಿಸಿದ್ದಾರೆ.
‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಕೊರಿಯರ್‌ಗಳ ಮೂಲಕವೂ ಕೋಟ್ಯಂತರ ರುಪಾಯಿ ಮೌಲ್ಯದ ಡ್ರಗ್ಸ್ ಸರಬರಾಗುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯುವ ಜನರು ಡ್ರಗ್ಸ್‌ಗೆ ಅಡಿಕ್ಟ್ ಆಗಿ ದಾರಿ ತಪ್ಪುತ್ತಿದ್ದಾರೆ. ಸರ್ಕಾರ ಡ್ರಗ್ಸ್ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಯರ್ ಮಾರಾಟ (ಲಕ್ಷ ಬಾಕ್ಸ್‌ಗಳಲ್ಲಿ)
ತಿಂಗಳು 2024 2025 ವ್ಯತ್ಯಾಸ
ಏಪ್ರಿಲ್ 49.72 41.60 -8.12
ಮೇ 50.71 37.10 -13.61
ಜೂನ್ 37.06 31.94 -5.12
ಜುಲೈ 36.06 27.93 -8.13
ಆಗಸ್ಟ್ 34.36 26.23 -8.13
ಸೆಪ್ಟೆಂಬರ್ 34.82 30.47 -4.35
ಅಕ್ಟೋಬರ್ 36.06 32.35 -3.71
ನವೆಂಬರ್ 34.66 29.72 -4.94
ಒಟ್ಟು 313.45 257.34 -56.11
ಡ್ರಂಕ್ ಅಂಡ್ ಡ್ರೈವ್‌ನಲ್ಲೂ ಸಿಕ್ಕಿಬೀಳಲ್ಲ ಡ್ರಗ್ ವ್ಯಸನಿಗಳು!
ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಸಂಚಾರ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಾರೆ. ಆದರೆ ಡ್ರಗ್ಸ್ ಸೇವನೆ ಮಾಡಿ ವಾಹನ ಚಲಾಯಿಸಿದರೆ ಬಚಾವಾಗಬಹುದು! ಹೌದು, ಸಂಚಾರ ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಇದು ಸತ್ಯ. ವಾಹನ ಸವಾರನ ಮದ್ಯ ಸೇವನೆಯ ಪ್ರಮಾಣವನ್ನು ಆಲ್ಕೋ ಮೀಟರ್ ಮೂಲಕ ಅಳೆಯಲಾಗುತ್ತದೆ. ಮದ್ಯದ ಪ್ರಮಾಣ ಶೇ.30 ರಷ್ಟಿದ್ದರೆ ಪ್ರಕರಣ ದಾಖಲಿಸಬಹುದು. ವಿಪರ್ಯಾಸವೆಂದರೆ ಡ್ರಗ್ಸ್ ಸೇವನೆ ಮಾಡಿ ವಾಹನ ಚಲಾಯಿಸಿದರೆ ಇದನ್ನು ಸಂಚಾರ ಪೊಲೀಸರು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಅನುಮಾನ ಬಂದ ಪ್ರಕರಣಗಳಲ್ಲಿ ಮಾತ್ರ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ವಿಷಯ ಮುಟ್ಟಿಸುತ್ತಾರೆ. ಈ ನ್ಯೂನತೆ ಬಗ್ಗೆಯೂ ಸರ್ಕಾರ ಗಮನ ಹರಿಸುವುದು ಒಳಿತು ಎಂಬ ಆಗ್ರಹ ಕೇಳಿಬಂದಿದೆ.
ದೂರು ಕೊಟ್ಟರೆ ಮಾಹಿತಿಕೊಡಿ ಅಂತ ಹೇಳುತ್ತಾರೆ
ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಅಬಕಾರಿ ಇಲಾಖೆಯವರ ಗಮನಕ್ಕೆ ತಂದರೆ, ಎಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಾರೆ ಮಾಹಿತಿ ಕೊಡಿ ಎಂದು ನಮ್ಮನ್ನೇ ಕೇಳುತ್ತಾರೆ. ಈ ಕೆಲಸವನ್ನು ಇಲಾಖೆ ಮಾಡಬೇಕು. ಡ್ರಗ್ಸ್‌ಗೆ ಕಡಿವಾಣ ಹಾಕಲು ನಮ್ಮ ಬಳಿ ಸಿಬ್ಬಂದಿ ಇದ್ದಾರೆಯೇ ?
-ಬಿ.ಗೋವಿಂದರಾಜ್ ಹೆಗ್ಡೆ, ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ

