ಭೂತಾನ್‌ಗೆ ಭಾರತದ ನೆರವಿನಂತೆ ಪಾಕ್‌ಗೆ ಚೀನಾ ನೆರವು | ಚೀನಾ ಚಿಂತಕರ ಚಾವಡಿ ಸದಸ್ಯ ಕ್ಸಿಂಗ್‌'ಚುನ್ ಲೇಖನ | ಕಾಶ್ಮೀರ ವಿಷಯದಲ್ಲಿ ಚೀನಾ, ಪಾಕಿಸ್ತಾನಕ್ಕೆ ರಹಸ್ಯವಾಗಿ ಬೆಂಬಲ ನೀಡುವುದು ಹೊಸದಲ್ಲವಾದರೂ, ಕಾಶ್ಮೀರ ವಿಷಯ ಸಂಬಂಧ ಇದೇ ಮೊದಲ ಬಾರಿಗೆ ಬಹಿರಂಗವಾಗಿಯೇ ಭಾರತಕ್ಕೆ ಸಡ್ಡು ಹೊಡೆದಿದೆ.

ಬೀಜಿಂಗ್: ಸಿಕ್ಕಿಂ ಗಡಿಯಲ್ಲಿ ಬರುವ ಡೋಕ್ಲಾಮ್ ಪ್ರದೇಶದಿಂದ ಭಾರತೀಯ ಯೋಧರನ್ನು ಹಿಂದಕ್ಕೆ ಕಳುಹಿಸಲು ಬೆದರಿಕೆಯ ನಾನಾ ತಂತ್ರಗಳನ್ನು ಪ್ರಯೋಗಿಸುತ್ತಿರುವ ಚೀನಾ, ಇದೀಗ ಕಾಶ್ಮೀರದ ಮೇಲೆ ದಾಳಿಯ ಪರೋಕ್ಷ ಬೆದರಿಕೆ ಹಾಕಿದೆ. ನೆರೆಯ ಭೂತಾನ್‌ಗೆ ಭಾರತ ನೆರವಾದಂತೆ, ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಕೋರಿಕೆ ಅನ್ವಯ ತೃತೀಯ ರಾಷ್ಟ್ರವೊಂದು ಅಲ್ಲಿಗೆ ಪ್ರವೇಶಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನವೊಂದರಲ್ಲಿ ಎಚ್ಚರಿಸಲಾಗಿದೆ.

ಈ ಮೂಲಕ ಡೋಕ್ಲಾಮ್ ವಿಷಯದಲ್ಲಿ ಭಾರತ ಮಣಿಯದೇ ಹೋದಲ್ಲಿ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ತಾನು ಕಾಶ್ಮೀರದ ಮೇಲೆ ದಾಳಿ ನಡೆಸುವ ಕುರಿತು ಚೀನಾ ಸುಳಿವು ನೀಡಿದೆ. ಕಾಶ್ಮೀರ ವಿಷಯದಲ್ಲಿ ಚೀನಾ, ಪಾಕಿಸ್ತಾನಕ್ಕೆ ರಹಸ್ಯವಾಗಿ ಬೆಂಬಲ ನೀಡುವುದು ಹೊಸದಲ್ಲವಾದರೂ, ಕಾಶ್ಮೀರ ವಿಷಯ ಸಂಬಂಧ ಇದೇ ಮೊದಲ ಬಾರಿಗೆ ಬಹಿರಂಗವಾಗಿಯೇ ಭಾರತಕ್ಕೆ ಸಡ್ಡು ಹೊಡೆದಿದೆ. ಇದು ಈಗಾಗಲೇ ಡೋಕ್ಲಾಮ್ ವಿಷಯದಲ್ಲಿ ನಿರ್ಮಾಣವಾಗಿರುವ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

‘ಭೂತಾನ್‌ನ ಗಡಿ ರಕ್ಷಣೆಗೆ ಸಂಬಂಧಿಸಿ ಭಾರತಕ್ಕೆ ಬೇಡಿಕೆ ಸಲ್ಲಿಸಿದರೂ, ಅದು ಕೇವಲ ಪ್ರತಿಷ್ಠಾಪಿತ ಭೂಪ್ರದೇಶಕ್ಕೆ ಸೀಮಿತವಾಗುತ್ತದೆಯೇ ಹೊರತು ವಿವಾದಿತ ಪ್ರದೇಶವಲ್ಲ. ಅದನ್ನು ಹೊರತುಪಡಿಸಿ, ಭಾರತದ ತರ್ಕದಂತೆಯೇ ಹೇಳುವುದಾದರೆ, ಒಂದುವೇಳೆ ಪಾಕಿಸ್ತಾನ ಸರ್ಕಾರ ವಿನಂತಿಸಿದರೆ, ಭಾರತ ನಿಯಂತ್ರಿತ ಕಾಶ್ಮೀರ ಸೇರಿದಂತೆ, ಭಾರತ ಮತ್ತು ಪಾಕಿಸ್ತಾನಗಳ ವಿವಾದಿತ ಪ್ರದೇಶಗಳಲ್ಲಿ ತೃತೀಯ ದೇಶದ ಸೇನೆ ಪ್ರವೇಶಿಸಬಹುದು’ ಎಂದು ಚೀನಾ ವೆಸ್ಟ್ ನಾರ್ಮಲ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್‌ನ ನಿರ್ದೇಶಕ ಲಾಂಗ್ ಕ್ಸಿಂಗ್‌'ಚುನ್ ಗ್ಲೋಬಲ್ ಟೈಮ್ಸ್‌'ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

ಡೊಕ್ಲಾಮ್ ವಿವಾದಕ್ಕೆ ಸಂಬಂಧಿಸಿ ಚೀನಾದ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಯ ಲೇಖನಗಳು ಪ್ರಕಟವಾಗಿದ್ದವು. ಆದರೆ ಇದೇ ಮೊದಲ ಬಾರಿ ಪಾಕಿಸ್ತಾನ ಮತ್ತು ಕಾಶ್ಮೀರ ವಿವಾದವನ್ನು ಎಳೆದುತರಲಾಗಿದೆ.

epaper.kannadaprabha.in