ರಾಜ್ಯದಲ್ಲಿ ಪೌರತ್ವ ಕಾಯ್ದೆಯನ್ನು ಅಂಗೀಕಾರ ಮಾಡದಿದ್ದಲ್ಲಿ ಮುಂದಿನ 5 ವರ್ಷದಲ್ಲಿ ಅಸ್ಸಾಂನಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಸ್ಸಾಂ ಸಚಿವರೋರ್ವರು ಆತಂಕ ವ್ಯಕ್ತಪಡಿಸಿದ್ದಾರೆ.
ಗುವಾಹಟಿ[ಜ.08]: ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸದೇ ಹೋದಲ್ಲಿ ಮುಂದಿನ 5 ವರ್ಷದಲ್ಲಿ ಅಸ್ಸಾಂನಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜ್ಯದ ಹಿರಿಯ ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಪೌರತ್ವ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಶರ್ಮಾ, ಈ ಕಾಯ್ದೆ ಜಾರಿಯಾಗದೇ ಹೋದಲ್ಲಿ, ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಬಯಸಿದ್ದವರಿಗೆ ಬಹಳ ನೆರವಾಗಲಿದೆ ಎಂದು ಮಸೂದೆ ವಿರೋಧಿಸುವವರಿಗೆ ಟಾಂಗ್ ನೀಡಿದ್ದಾರೆ.
ಪಾಕ್, ಬಾಂಗ್ಲಾ, ಆಫ್ಘನ್‌ನ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ
ಭಾರತದಲ್ಲಿ 6 ವರ್ಷದಿಂದ ನೆಲೆಸಿರುವ ಬಾಂಗ್ಲಾ, ಆಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮೂಲದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡಲು ಸಲುವಾಗಿ ಪೌರತ್ವ ಕಾಯ್ದೆ ತಿದ್ದುಪಡಿಗೆ ನಿರ್ಧರಿಸಲಾಗಿದೆ. ಹಾಲಿ ನಿಯಮಗಳ ಅನ್ವಯ, 12 ವರ್ಷದಲ್ಲಿ ಭಾರತದಲ್ಲಿ ನೆಲೆಸಿದ್ದವರಿಗೆ ಮಾತ್ರ ಈ ಅವಕಾಶ ಸಿಗುತ್ತಿತ್ತು. ಅದನ್ನೀಗ 6 ವರ್ಷಕ್ಕೆ ಇಳಿಸಲಾಗಿದೆ.
