ಗುವಾಹಟಿ[ಜ.08]: ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಸೂದೆಗೆ ಅಂಗೀಕಾರ ದೊರೆತರೆ ಬಾಂಗ್ಲಾದೇಶ, ಆಷ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ದೊರಕುತ್ತದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರವೇ ಮಂಡಿಸಲಾಗುತ್ತದೆ.

ಇದರ ನಡುವೆಯೇ ಎನ್‌ಡಿಎನಲ್ಲಿ ಈ ವಿಚಾರವಾಗಿ ಭಿನ್ನಮತ ಉಂಟಾಗಿದ್ದು, ಅಸ್ಸಾಂನ ಮಿತ್ರಪಕ್ಷವಾದ ಅಸೋಂ ಗಣ ಪರಿಷತ್‌, ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದಿದ್ದು, ಕೂಟದಿಂದ ಹೊರಬೀಳುವುದಾಗಿ ಪ್ರಕಟಿಸಿದೆ. ಇದೇ ವೇಳೆ 8 ಪ್ರಬಲ ವಿದ್ಯಾರ್ಥಿ ಒಕ್ಕೂಟಗಳು ಹಾಗೂ 40 ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಮಂಗಳವಾರ 11 ಗಂಟೆಗಳ ಅಸ್ಸಾಂ ಬಂದ್‌ಗೆ ಕರೆ ನೀಡಿವೆ.

ಬಾಂಗ್ಲಾದೇಶೀಯರು ಹಾಗೂ ಮ್ಯಾನ್ಮಾರಿ ಅಕ್ರಮ ವಲಸಿಗರ ಉಪಟಳ ಹೆಚ್ಚಿರುವ ಅಸ್ಸಾಂನಲ್ಲಿ ಈ ವಿಧೇಯಕಕ್ಕೆ ಬಹು ವಿರೋಧವಿದೆ. 1971ರ ನಂತರ ರಾಜ್ಯ ಪ್ರವೇಶಿಸಿದ ಯಾವುದೇ ವಿದೇಶೀ ಅಕ್ರಮ ವಲಸಿಗರಾಗಲಿ ಜಾತ್ಯತೀತವಾಗಿ ಅವರನ್ನು ಗಡೀಪಾರು ಮಾಡಬೇಕು ಎಂದು 1985ರ ಅಸ್ಸಾಂ ಒಪ್ಪಂದ ಹೇಳುತ್ತದೆ. ಆದರೆ 1955ರ ಭಾರತೀಯ ಪೌರತ್ವ ಕಾಯ್ದೆಗೆ ಈಗ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಆಷ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ನಾಗರಿಕತ್ವ ದೊರಕುತ್ತದೆ. ಯಾವುದೇ ದಾಖಲೆ ಹೊಂದಿರದೇ ಇದ್ದರೂ 6 ವರ್ಷ ಭಾರತದಲ್ಲಿ ನೆಲೆಸಿದ್ದರೆ ಸಾಕು- ಇಂಥವರಿಗೆ ಭಾರತೀಯ ನಾಗರಿಕತ್ವ ಲಭಿಸುವ ಅಂಶ ಇದರಲ್ಲಿದೆ.

ಇದು 2014ರ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಆದರೆ ಕಾಂಗ್ರೆಸ್‌, ಸಿಪಿಎಂ, ತೃಣಮೂಲ ಕಾಂಗ್ರೆಸ್‌ ಹಾಗೂ ಇತರ ಕೆಲವು ಪಕ್ಷಗಳು ಈ ವಿಧೇಯಕ ವಿರೋಧಿಸಿವೆ. ವಿಚಿತ್ರವೆಂದರೆ ಎನ್‌ಡಿಎ ಪಾಲುದಾರರಾದ ಶಿವಸೇನಾ ಹಾಗೂ ಜೆಡಿಯು ಕೂಡ ಈ ವಿಧೇಯಕ ವಿರೋಧಿಸಿವೆ.

ಕಳೆದ ಶುಕ್ರವಾರವಷ್ಟೇ ಕಾಯ್ದೆ ತಿದ್ದುಪಡಿ ತರುವ ಬಗ್ಗೆ ಅಸ್ಸಾಂನ ಸಿಲ್ಚಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು.

ಬೆಂಬಲ ವಾಪಸ್‌:

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದ ಅಸೋಂ ಗಣ ಪರಿಷತ್‌ ಮುಖಂಡರು, ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ, ಮಸೂದೆ ಅಂಗೀಕರಿಸದಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬೆಲೆ ಕೊಡದ ರಾಜನಾಥ ಸಿಂಗ್‌, ‘ಮಂಗಳವಾರವೇ ವಿಧೇಯಕವನ್ನು ಲೋಲಸಭೆಯಲ್ಲಿ ಅಂಗೀಕರಿಸಲಾಗುತ್ತದೆ’ ಎಂದು ಹೇಳಿದರು. ಇದರ ಬೆನ್ನಲ್ಲೇ ಪ್ರಫುಲ್ಲಕುಮಾರ ಮಹಂತ ಅವರ ಎಜಿಪಿ, ಬೆಂಬಲ ವಾಪಸ್‌ ಘೋಷಣೆ ಮಾಡಿತು.

ಏನಿದು ತಿದ್ದುಪಡಿ ಮಸೂದೆ?

1955ರ ಭಾರತೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಆಷ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ನಾಗರಿಕತ್ವ ದೊರಕಿಸುವುದೇ ವಿಧೇಯಕದ ಉದ್ದೇಶ. ಯಾವುದೇ ದಾಖಲೆ ಹೊಂದಿರದೇ ಇದ್ದರೂ ಇವರು 6 ವರ್ಷ ಭಾರತದಲ್ಲಿ ನೆಲೆಸಿದ್ದರೆ ಸಾಕು.