ಬೆಕ್ಕಿಗೆ ಚಾಮರಾಜ ಒಡೆಯರ್ ಹೆಸರಿಟ್ಟಐಎಎಸ್ ಅಧಿಕಾರಿ!| ಬೆಕ್ಕಿನ ಚಿತ್ರ ಟ್ವೀಟ್ ಮಾಡಿ ಅತೀಕ್ ವಿವಾದ| ರಾಜಮನೆತನಕ್ಕೆ ಅವಮಾನ: ಟ್ವೀಟಿಗರ ಆಕ್ರೋಶ| ಬಳಿಕ ಇದು ‘ನನ್ನ ಮಕ್ಕಳು ಮಾಡಿದ್ದು’ ಎಂದು ಅತೀಕ್ ಸ್ಪಷ್ಟನೆ| ಆದರೆ ಟ್ವೀಟ್ ಅಳಿಸದ ಅಧಿಕಾರಿ
ಬೆಂಗಳೂರು(ಏ.11]: ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಮೈಸೂರು ಸಾಮ್ರಾಜ್ಯದ ಪ್ರಮುಖ ರಾಜರಾದ ಚಾಮರಾಜ ಒಡೆಯರ್ ಅವರ ಹೆಸರನ್ನು ತಮ್ಮ ಮನೆ ಬೆಕ್ಕಿಗೆ ಇಡುವ ಮೂಲಕ ಮೈಸೂರು ರಾಜ ಮನತನಕ್ಕೆ ಅವಮಾನ ಮಾಡಿದ ಆರೋಪಕ್ಕೆ ಗುರಿಯಾಗಿದ್ದು, ತೀವ್ರ ವಿವಾದಕ್ಕೀಡಾಗಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಲ್.ಕೆ. ಅತೀಕ್, ತಮ್ಮ ಬೆಕ್ಕಿನ ಫೋಟೋ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ‘ಅವರ್ ಓನ್ ಚಾಮರಾಜ ಒಡೆಯರ್’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು ಮೈಸೂರು ರಾಜ ಮನೆತನಕ್ಕೆ ಅವಮಾನ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ಪಾಲಿಗೆ ಕಿರೀಟ ಪ್ರಾಯವಾಗಿರುವ ಒಡೆಯರ್ ಅವರ ಪ್ರಮುಖ ರಾಜ ‘ಚಾಮರಾಜ ಒಡೆಯರ್’ ಹೆಸರನ್ನು ಬೆಕ್ಕಿಗೆ ಇಡುವ ಮೂಲಕ ಎಲ್.ಕೆ. ಅತೀಕ್ ಅವಮಾನ ಮಾಡಿದ್ದಾರೆ. ಅಲ್ಲದೆ ಅದನ್ನು ಟ್ವೀಟರ್‌ನಲ್ಲಿ ಪ್ರಕಟಿಸುವ ಮೂಲಕ ದರ್ಪ ಮೆರೆದಿದ್ದಾರೆ. ಅತೀಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಒಬ್ಬರು ರಾಜ್ಯದ ಹೆಮ್ಮೆಯಾಗಿರುವ ರಾಜರ ಹೆಸರನ್ನು ಬೆಕ್ಕಿಗೆ ಇಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿರುವ ಎಲ್.ಕೆ. ಅತೀಕ್, ‘ಇದನ್ನು ನನ್ನ ಮಕ್ಕಳು ಮಾಡಿದ್ದಾರೆ’ ಎಂದು ಉತ್ತರಿಸಿದ್ದಾರೆ. ಮಕ್ಕಳು ಮಾಡಿದ್ದರೆ ತಮ್ಮ ಗಮನಕ್ಕೆ ಬಂದ ಮೇಲಾದರೂ ಡಿಲೀಟ್ ಮಾಡಬಹುದಿತ್ತು. ಮೇಲಾಗಿ ಬೆಕ್ಕಿಗೆ ಹೆಸರಿಟ್ಟಿರುವುದು ಮಕ್ಕಳೇ ಎಂಬುದಕ್ಕೆ ಎಲ್.ಕೆ. ಅತೀಕ್ ಸ್ಪಷ್ಟನೆ ನೀಡಿಲ್ಲ. ಜತೆಗೆ ತಮ್ಮ ಗಮನಕ್ಕೆ ಬಂದ ಬಳಿಕವೂ ಟ್ವೀಟ್ ಡಿಲೀಟ್ ಮಾಡದಿರುವುದು ಅತೀಕ್ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಡೆಯರ್‌ರ ಸಾಧನೆ:
5 ಸಾವಿರ ವರ್ಷಗಳ ಭಾರತ ಇತಿಹಾಸದಲ್ಲಿ ರಜಪೂತರ ಹೊರತುಪಡಿಸಿ 500ಕ್ಕೂ ಹೆಚ್ಚು ವರ್ಷ ಆಳ್ವಿಕೆ ಮಾಡಿದ ಏಕೈಕ ಸಾಮ್ರಾಜ್ಯ ಮೈಸೂರು ಒಡೆಯರ್ ಸಾಮ್ರಾಜ್ಯ. 1399ರಿಂದ 1950ರವರೆಗೆ ಆಳ್ವಿಕೆ ಮಾಡುವ ಮೂಲಕ ಕರ್ನಾಟಕ (ಹಿಂದಿನ ಮೈಸೂರು) ಅಭಿವೃದ್ಧಿಗೆ ಅವಿರತವಾಗಿ ದುಡಿದಿದ್ದರು. ಒಡೆಯರ್ ಸಾಮ್ರಾಜ್ಯದ ಎರಡನೇ ಅರಸ ಚಾಮರಾಜ ಒಡೆಯರ್-1 (ಬೆಟ್ಟದ ಚಾಮರಾಜ ). 1423ರಿಂದ 1459 ರವರೆಗೆ ಮೈಸೂರು ಸಾಮ್ರಾಜ್ಯ ಆಳ್ವಿಕೆ ಮಾಡಿದ್ದರು. ಅವರ ಬಳಿಕ ಚಾಮರಾಜ ಒಡೆಯರ್ -1 ರಿಂದ ಚಾಮರಾಜ ಒಡೆಯರ್ -7ರವರೆಗೆ ವಿವಿಧ ಕಾಲದಲ್ಲಿ ಮೈಸೂರು ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ್ದರು.
